ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ

KannadaprabhaNewsNetwork |  
Published : Dec 21, 2025, 02:45 AM ISTUpdated : Dec 21, 2025, 05:20 AM IST
WhatsApp

ಸಾರಾಂಶ

ಆನ್‌ಲೈನ್‌ ಸುರಕ್ಷತೆಗೆ ಹೊಸ ಕ್ರಮಗಳನ್ನು ಪರಿಚಯಿಸಿದಂತೆ ಹ್ಯಾಕರ್‌ಗಳೂ ಅಪ್‌ಡೇಟ್‌ ಆಗುತ್ತಿದ್ದು, ಇದೀಗ ನೀವೇ ಕೈಯಾರೆ ನಿಮ್ಮ ವಾಟ್ಸಾಪ್ ನಿಯಂತ್ರಣವನ್ನು ಅವರಿಗೆ ಕೊಡುವಂತಹ ‘ಘೋಸ್ಟ್‌ಪೇರಿಂಗ್‌’ ಎಂಬ ಹೊಸ ತಂತ್ರವನ್ನು  ಪಸರಿಸತೊಡಗಿದ್ದಾರೆ. 

  ನವದೆಹಲಿ :  ಆನ್‌ಲೈನ್‌ ಸುರಕ್ಷತೆಗೆ ಹೊಸ ಕ್ರಮಗಳನ್ನು ಪರಿಚಯಿಸಿದಂತೆ ಹ್ಯಾಕರ್‌ಗಳೂ ಅಪ್‌ಡೇಟ್‌ ಆಗುತ್ತಿದ್ದು, ಇದೀಗ ನೀವೇ ಕೈಯಾರೆ ನಿಮ್ಮ ವಾಟ್ಸಾಪ್ ನಿಯಂತ್ರಣವನ್ನು ಅವರಿಗೆ ಕೊಡುವಂತಹ ‘ಘೋಸ್ಟ್‌ಪೇರಿಂಗ್‌’ ಎಂಬ ಹೊಸ ತಂತ್ರವನ್ನು ಪಸರಿಸತೊಡಗಿದ್ದಾರೆ. ಈ ಬಗ್ಗೆ ಭಾರತೀಯ ಸೈಬರ್ ಭದ್ರತಾ ಸಂಸ್ಥೆ ಸಿಇಆರ್‌ಟಿ ಸಾರ್ವಜನಿಕರಿಗೆ ಎಚ್ಚರಿಕೆ ಜಾರಿ ಮಾಡಿದೆ.

‘ಯಾವುದೇ ಪಾಸ್‌ವರ್ಡ್‌ ಇಲ್ಲದೆ, ಸಿಮ್‌ ಕೂಡ ಬದಲಿಸದೆ ಕೇವಲ ಪೇರಿಂಗ್‌ (ಜೋಡಣೆ) ಕೋಡ್‌ ಮೂಲಕ ಹ್ಯಾಕರ್‌ಗಳು ಬಳಕೆದಾರರ ವಾಟ್ಸಾಪ್‌ ನಿಯಂತ್ರಣ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. ಇದಕ್ಕೆ ಘೋಸ್ಟ್‌ಪೇರಿಂಗ್‌ ಎನ್ನಲಾಗುತ್ತದೆ. ಪರಿಚಯಸ್ಥರು ಅಥವಾ ನಂಬಿಕಸ್ಥರ ಹೆಸರಲ್ಲೇ ನಿಮ್ಮನ್ನು ಈ ಬಲೆಗೆ ಬೀಳಿಸುವ ಯತ್ನಗಳು ನಡೆಯುತ್ತಿವೆ. ಜಾಗರೂಕರಾಗಿರಿ’ ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಇಆರ್‌ಟಿ ಹೇಳಿದೆ.

ಆದರೆ ಇದರ ಬಗ್ಗೆ ವಾಟ್ಸಾಪ್‌ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಹೇಗೆ ಮಾಡ್ತಾರೆ ಘೋಸ್ಟ್‌ಪೇರಿಂಗ್‌?:

ನಿಮ್ಮ ಸಂಪರ್ಕ ಪಟ್ಟಿಯಲ್ಲಿ (ಕಾಂಟ್ಯಾಕ್ಟ್‌ ಲಿಸ್ಟ್‌) ಇರುವವರಿಂದಲೇ ‘ಹಾಯ್‌. ಈ ಫೋಟೋ ನೋಡಿ’ ಎಂಬ ಸಂದೇಶದೊಂದಿಗೆ ಒಂದು ಲಿಂಕ್‌ ಬರುತ್ತದೆ. ಕುತೂಹಲದಿಂದ ಅದನ್ನು ತೆರೆದಲ್ಲಿ, ಫೇಸ್‌ಬುಕ್‌ನಂತಹ ಪುಟ ತೆರೆದುಕೊಳ್ಳುತ್ತದೆ. ಬಳಿಕ ದೃಢೀಕರಣಕ್ಕೆ ಅನುಮತಿ ಕೇಳುತ್ತದೆ. ಫೋಟೋ ನೋಡುವ ಭರದಲ್ಲಿ ದೃಢೀಕರಿಸಿದರೆ ಮುಗಿಯಿತು. ಹ್ಯಾಕರ್‌ಗಳಿಗೆ ನಿಮ್ಮ ವಾಟ್ಸಾಪ್‌ ಬಾಗಿಲು ತೆರೆದಂತೆ. ಆ ಕಡೆ ಇರುವವರು ನೀವು ನಮೂದಿಸಿದ ಪೋನ್‌ ನಂಬರ್‌ ಬಳಸಿ, ಪೇರಿಂಗ್‌ ಕೋಡ್‌ ಸೃಷ್ಟಿಸಿ, ಅದಕ್ಕೆ ಲಿಂಕ್‌ ಆಗಿರುವ ವಾಟ್ಸಾಪ್‌ನ ಪೂರ್ಣ ನಿಯಂತ್ರಣ ಪಡೆಯುತ್ತಾರೆ. ಅದನ್ನು ಬಳಸಿಕೊಂಡು ದುರುಳರು ನಿಮಗೆ ಬಂದಿರುವ ಸಂದೇಶ, ಫೋಟೋ, ವಿಡಿಯೋ, ಧ್ವನಿಸಂದೇಶಗಳನ್ನು ನೋಡಬಹುದು. ಜತೆಗೆ, ನಿಮ್ಮ ಸಂಖ್ಯೆಯಿಂದ ಅನ್ಯರಿಗೆ ಸಂದೇಶವನ್ನೂ ಕಳಿಸಬಹುದು.  

ಪತ್ತೆ ಹೇಗೆ?:

ವಾಟ್ಸಾಪ್‌ನಲ್ಲಿ ‘ಲಿಂಕ್ಡ್‌ ಡಿವೈಸಸ್‌’ ಎಂಬ ಆಯ್ಕೆಯಲ್ಲಿ ನಿಮ್ಮ ಖಾತೆ ಯಾವೆಲ್ಲಾ ಸಾಧನಗಳೊಂದಿಗೆ ಕನೆಕ್ಟ್‌ ಆಗಿದೆ ಎಂಬುದನ್ನು ನೋಡಬಹುದು. ಒಂದೊಮ್ಮೆ ನೀವು ಘೋಸ್ಟ್‌ಪೇರಿಂಗ್‌ಗೆ ಬಲಿಯಾಗಿದ್ದರೆ, ಅದನ್ನೂ ಇಲ್ಲಿ ಪತ್ತೆ ಮಾಡಬಹುದು ಹಾಗೂ ಅಲ್ಲೇ ಲಾಗ್‌ಔಟ್‌ ಆಗುವ ಮೂಲಕ ಹ್ಯಾಕರ್‌ಗಳಿಂದ ಮುಕ್ತಿ ಪಡೆಯಬಹುದು.  

ಸುರಕ್ಷಿತರಾಗಿರೋದು ಹೇಗೆ?:

ಸಮಸ್ಯೆಗೆ ಸಿಕ್ಕಿಹಾಕಿಕೊಂಡು ಬಳಿಕ ಬಚಾವಾಗುವುದಕ್ಕಿಂತ ಅದನ್ನು ತಡೆಗಟ್ಟುವುದೇ ಉತ್ತಮ. ಯಾವುದೇ ಸಂಶಯಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯೆ ಕೊಡಬೇಡಿ ಅಥವಾ ಲಿಂಕ್‌ ಕ್ಲಿಕ್‌ ಮಾಡಬೇಡಿ. ಪರಿಚಿತರಿಂದಲೇ ಸಂದೇಶ ಬಂದಿದ್ದರೂ ಅದು ಅನುಮಾನಾಸ್ಪದವಾಗಿದ್ದಲ್ಲಿ ಅವರ ಬಳಿ ಕೇಳಿ ದೃಢಪಡಿಸಿಕೊಳ್ಳದ ಹೊರತು ನಂಬಿ ಮೋಸಹೋಗಬೇಡಿ.

ವಾಟ್ಸಾಪ್ ಹೊರತುಪಡಿಸಿ ಬೇರೆಲ್ಲೂ ಅದಕ್ಕೆ ಸಂಬಂಧಿಸಿದ ಫೋನ್‌ ನಂಬರ್‌ ಅಥವಾ ಪೇರಿಂಗ್‌ ಕೋಡ್‌ ನಮೂದಿಸಬೇಡಿ. ಹೆಚ್ಚುವರಿ ರಕ್ಷಣೆಗಾಗಿ ಎರಡು-ಹಂತದ ಪರಿಶೀಲನೆಯನ್ನು (ಟು-ಸ್ಟೆಪ್‌ ವೇರಿಫಿಕೇಷನ್‌) ಸಕ್ರಿಯಗೊಳಿಸಿ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ