ಪ್ರಧಾನಿ ಮೋದಿ ಸರ್ಕಾರಕ್ಕೆ ಹಿರಿಮೆ । ದೇಶದಲ್ಲಿ ಬಡವರ ಸಂಖ್ಯೆ ಭಾರಿ ಇಳಿಕೆ

KannadaprabhaNewsNetwork |  
Published : Jun 08, 2025, 03:14 AM ISTUpdated : Jun 08, 2025, 04:21 AM IST
ಬಡತನ | Kannada Prabha

ಸಾರಾಂಶ

ಭಾರತವು ಕಳೆದ ದಶಕದಲ್ಲಿ ತನ್ನ ಕಡುಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. 2011-12ರಲ್ಲಿ ಶೇ.27.1 ಇದ್ದ ಕಡುಬಡವರ ಸಂಖ್ಯೆ 2022–23ರಲ್ಲಿ ಶೇ.5.3ಕ್ಕೆ ಇಳಿದಿದೆ  

 ನವದೆಹಲಿ: ಭಾರತವು ಕಳೆದ ದಶಕದಲ್ಲಿ ತನ್ನ ಕಡುಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. 2011-12ರಲ್ಲಿ ಶೇ.27.1 ಇದ್ದ ಕಡುಬಡವರ ಸಂಖ್ಯೆ 2022–23ರಲ್ಲಿ ಶೇ.5.3ಕ್ಕೆ ಇಳಿದಿದೆ ಎಂದು ಇತ್ತೀಚಿನ ವಿಶ್ವಬ್ಯಾಂಕ್ ದತ್ತಾಂಶವು ಬಹಿರಂಗಪಡಿಸಿದೆ. ಈ ಮೂಲಕ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಬಡತನದ ಪ್ರಮಾಣ ಕಡಿಮೆ ಆಗಿದೆ ಎಂದು ಪರೋಕ್ಷವಾಗಿ ವರದಿ ಹೇಳಿದೆ.

2011–12ರಲ್ಲಿ 34 ಕೋಟಿ ಕಡುಬಡವರು ದೇಶದಲ್ಲಿದ್ದರು. ಇವರ ಸಂಖ್ಯೆ 2022–23ರಲ್ಲಿ 7.5 ಕೋಟಿಗೆ ಕುಸಿದಿದೆ. ಅರ್ಥಾತ್‌ 11 ವರ್ಷದಲ್ಲಿ ಸುಮಾರು 26 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ.

2011-12ರಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳು ದೇಶದ ಶೇ.65ರಷ್ಟು ಕಡುಬಡವರನ್ನು ಹೊಂದಿದ್ದವು. ಇವುಗಳಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಈಗ ಕುಸಿದಿದೆ. 2022-23ರಲ್ಲಿ ಕಡುಬಡತನದಿಂದ ಹೊರಬಂದವರ ಮೂರನೇ ಒಂದರಷ್ಟು ಮಂದಿ ಈ ರಾಜ್ಯಗಳವರೇ ಆಗಿದ್ದಾರೆ ಎಂದು ವರದಿ ಪ್ರಶಂಸಿಸಿದೆ.

ದಿನಬಳಕೆ ಮಿತಿ ಆಧರಿಸಿ ವರದಿ:

ವಿಶ್ವಬ್ಯಾಂಕ್‌ ತನ್ನ ವರದಿಯನ್ನು ದಿನಬಳಕೆಯ ಮಿತಿಯನ್ನು ಆಧರಿಸಿ ಸಿದ್ಧಪಡಿಸಿದೆ. 2017ರಲ್ಲಿ ಅದು ದಿನಕ್ಕೆ 2.15 ಡಾಲರ್‌ಗಿಂತ (184 ರು.) ಕಡಿಮೆ ಖರ್ಚು ಮಾಡುವವರನ್ನು ಬಡವರು ಎಂದು ಪರಿಗಣಿಸಿತ್ತು. ಆದರೆ 2021ರ ವಸ್ತುಗಳ ದರಗಳನ್ನು ಆಧರಿಸಿ ದಿನಕ್ಕೆ 3 ಡಾಲರ್‌ಗಿಂತ (250 ರು.) ಕಡಿಮೆ ಖರ್ಚು ಮಾಡುವವರನ್ನು ಬಡವರು ಎಂದು ಪರಿಗಣಿಸಿದೆ.

ಗ್ರಾಮೀಣ ಬಡತನ ಶೇ.2.8ಕ್ಕೆ ಇಳಿಕೆ:

ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ 250 ರು. ಗಿಂತ ಕಡಿಮೆ ಆದಾಯ ಸಂಪಾದಿಸುವವರು 2022ರಲ್ಲಿ 3.3 ಕೋಟಿ ಜನರಿದ್ದಾರೆ. 2011ರಲ್ಲಿ ಇವರ ಪ್ರಮಾಣ 20 ಕೋಟಿ ಇತ್ತು. ಇದಲ್ಲದೆ, ಗ್ರಾಮೀಣ ಕಡುಬಡತನವು 11 ವರ್ಷಗಳಲ್ಲಿ ಶೇ.18.4ರಿಂದ ಶೇ.2.8ಕ್ಕೆ ಇಳಿಕೆಯಾದರೆ, ನಗರ ಕಡುಬಡತನವು ಶೇ.10.7ರಿಂದ ಶೇ.1.1ಕ್ಕೆ ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್‌ ಪ್ರಶಂಸಿಸಿದೆ.

ಮೋದಿ ಸರ್ಕಾರದ ಕ್ರಮಗಳು:

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 11 ವರ್ಷಗಳಿಂದ ಅಧಿಕಾರದಲ್ಲಿದ್ದು, ಪ್ರಧಾನಿ ಮೋದಿ ಅವರು ಬಡತನ ನಿವಾರಣೆಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪಿಎಂ ಆವಾಸ್‌ ಯೋಜನೆ, ಪಿಎಂ ಉಜ್ವಲ್‌ ಯೋಜನೆ, ಜನಧನ್‌, ಆಯುಷ್ಮಾನ್‌ ಭಾರತದಂಥ ಕಾರ್ಯಕ್ರಮಗಳ ಮೂಲಕ ಕಡುಬಡವರಿಗೆ ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್‌ ಮತ್ತು ಆರೋಗ್ಯ ಸೇವೆ ಸಿಗುವಂತೆ ನೋಡಿಕೊಳ್ಳಲಾಗಿದೆ. ಇತ್ತೀಚೆಗೆ ಮೋದಿ ಅವರು ತಮ್ಮ ಸರ್ಕಾರದ ಈ ಕ್ರಮಗಳಿಂದ 25 ಕೋಟಿ ಜನರು ಬಡತನದ ರೇಖೆಯಿಂದ ಹೊರಬಂದಿದ್ದಾರೆ ಎಂದಿದ್ದರು. ಮೋದಿ ಸರ್ಕಾರ 2014ರಿಂದ ಅಧಿಕಾರದಲ್ಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಚ್ಚರ ! ಹೆಚ್ಚು ಟ್ರಾಫಿಕ್ ರೂಲ್ಸ್‌ ಉಲ್ಲಂಘಿಸಿದ್ರೆ ಡಿಎಲ್‌ ರದ್ದು!
ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇದೆ ಎಂದ ಪಠ್ಯಪುಸ್ತಕ ನಿಷೇಧ