ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಿರಳೆ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ವಾಪಸ್‌ ಪಡೆಯಲು ರಾಜ್ಯ ಸರ್ಕಾರಗಳು ಸ್ವತಂತ್ರ. ಆದರೆ ‘ಗಂಭೀರ ಹಾಗೂ ಘೋರ ಅಪರಾಧದ ಹಿನ್ನೆಲೆ ಹೊಂದಿರುವ ಪ್ರತಿಭಟನಾಕಾರರಿಗೆ ಇದು ಅನ್ವಯ ಆಗಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ.ಜೋಯ್‌ ಮಲ್ಯ ಬಾಗ್ಚಿ ಹಾಗೂ ನ್ಯಾ.ವಿ.ಮೋಹನ್ ಅವರಿದ್ದ ಪೀಠವು, ‘ಅಪರಾಧದ ಹಿನ್ನೆಲೆ’ ಇರುವವರನ್ನು ಹೊರತುಪಡಿಸಿ ಉಳಿದವರು ಅಂದರೆ, ಘೋರ ಅಪರಾಧ ಮತ್ತು ಗಂಭೀರ ಆರೋಪಗಳನ್ನು ಹೊತ್ತಿರುವವರು ಎಂದರ್ಥ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದೆ.

ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆ ಸಂದರ್ಭದ ಹಿಂಸಾಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಸ್ಪಷ್ಟನೆ ನೀಡಲಾಗಿದೆ.


ಕೇಂದ್ರ ಸರ್ಕಾರ ಹೇಳಿದ್ದೇನು?:

ವಿಚಾರಣೆ ವೇಳೆ ಕೇಂದ್ರ ಸರ್ಕಾರವು ನೀಟ್‌ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆದುಕೊಳ್ಳುವ ವಿಚಾರಕ್ಕೆ ತಾನು ಬದ್ಧನಾಗಿದ್ದೇನೆ. ಆದರೆ, ‘ಕ್ರಿಮಿನಲ್‌ ಅಥವಾ ಅಪರಾಧದ ಹಿನ್ನಲೆ’ ಹೊಂದಿರುವವರ ಕೇಸ್‌ ವಾಪಸ್‌ ಪಡೆಯುವುದಿಲ್ಲ ಎಂದು ಕೋರ್ಟ್ ಮುಂದೆ ಹೇಳಿದೆ.

ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವ ವಿಚಾರದಲ್ಲಿ ಕೆಲ ತಪ್ಪು ಕಲ್ಪನೆಗಳಿವೆ. ಸರ್ಕಾರ ಗಂಭೀರ ಹಾಗೂ ಘೋರ ಅಪರಾಧದ ಪ್ರಕರಣದ ಆರೋಪ ಎದುರಿಸುತ್ತಿರುವ 2,700 ಮಂದಿಯ ಪ್ರಕರಣಗಳನ್ನು ವಾಪಸ್‌ ಪಡೆಯುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು, ಕ್ರಿಮಿನಲ್‌ ಹಿನ್ನೆಲೆ ಕುರಿತು ಸ್ಪಷ್ಟೀಕರಣ ನೀಡಬೇಕು. ಯಾಕೆಂದರೆ ವಿದ್ಯಾರ್ಥಿಗಳು ಟ್ರಾಫಿಕ್‌ ನಿಯಮ ಉಲ್ಲಂಘಿಸಿರಬಹುದು, ಸಣ್ಣ ಪುಟ್ಟ ಅಥವಾ ರಾಜಕೀಯಪ್ರೇರಿತ ಕೇಸುಗಳನ್ನು ಎದುರಿಸುತ್ತಿರಬಹುದು ಎಂದರು.

ಆಗ ನ್ಯಾಯಾಲಯವು ಕ್ರಿಮಿನಲ್‌ ಹಿನ್ನೆಲೆ ಅಥವಾ ಅಪರಾಧದ ಹಿನ್ನೆಲೆ ಅಂದರೆ ಗಂಭೀರ ಅಥವಾ ಘೋರ ಅಪರಾಧ ಎಂದು ಸ್ಪಷ್ಟೀಕರಣ ನೀಡಿತು.

ವಿಚಾರಣೆ ವೇಳೆ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣ ಅವರು, ಪ್ರತಿಭಟನೆ ವೇಳೆ ವಕೀಲರ ಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.

ಜತೆಗೆ, ಹಿಂಸಾಚಾರದ ವಿಡಿಯೋಗಳು ಆಘಾತಕಾರಿಯಾಗಿವೆ. ನಾವು 300ಕ್ಕೂ ಹೆಚ್ಚು ವಿಡಿಯೋಗಳನ್ನು ನೀಡಿದ್ದೇವೆ. ಪ್ರತಿಭಟನೆ ನಿಯಂತ್ರಿಸುವ ಆದೇಶಗಳು ಮೇಲಿಂದಲೇ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ ಅವರು ಇವುಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

- ಎಲ್ಲ ಪ್ರಕರಣಗಳ ಹಿಂತೆಗೆತಕ್ಕೆ ಆಗ್ರಹಿಸುತ್ತಿರುವ ಸಿಜೆಪಿಗೆ ಹಿನ್ನಡೆ

- ಜು.20ರಂದು ಸಂಸತ್‌ ಚಲೋ ವೇಳೆ ಪೊಲೀಸರು ಹಾಗೂ ಜಿರಳೆ ಪಕ್ಷದ ಕಾರ್ಯಕರ್ತರ ನಡುವೆ ಸಂಘರ್ಷ

- ಹೀಗಾಗಿ ಜಿರಳೆ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು. ಇದರ ವಿರುದ್ಧ ಜಿರಳೆ ಪಾರ್ಟಿ ಸುಪ್ರೀಂಗೆ

- ಕ್ರಿಮಿನಲ್‌ ಹಿನ್ನೆಲೆ ಇಲ್ಲದ ಕಾರ್ಯಕರ್ತರ ಕೇಸ್‌ ಹಿಂಪಡೆಯುತ್ತೇವೆ, ಎಲ್ಲರದ್ದನ್ನೂ ಹಿಂಪಡೆಯಲ್ಲ ಎಂದಿದ್ದ ಕೇಂದ್ರ

- ಎಲ್ಲ ಕೇಸ್‌ಗಳ ವಾಪಸ್‌ಗೆ ಒತ್ತಾಯಿಸಿದ್ದ ಜಿರಳೆ. ಇದೀಗ ಯಾವ ಪ್ರಕರಣ ಹಿಂಪಡೆಯಬೇಕೆಂದು ಸುಪ್ರೀಂ ನಿರ್ದೇಶನ