ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು

Published : Dec 08, 2025, 06:06 AM IST
IndiGo

ಸಾರಾಂಶ

ದೇಶದ ವಿಮಾನಯಾನ ವ್ಯವಸ್ಥೆಯಲ್ಲೇ ಅಲ್ಲೋಲಕಲ್ಲೋಲ ಉಂಟುಮಾಡಿದ್ದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ ಭಾನುವಾರ ಕೊಂಚ ನಿಯಂತ್ರಣಕ್ಕೆ ಬಂದಿದೆ. ದೇಶೀಯವಾಗಿ ಸಂಚರಿಸುತ್ತಿದ್ದ 2,300 ವಿಮಾನಗಳ ಪೈಕಿ 1,650 ವಿಮಾನಗಳು ಹಾರಾಟ ನಡೆಸಿವೆ.

 ಮುಂಬೈ :  ದೇಶದ ವಿಮಾನಯಾನ ವ್ಯವಸ್ಥೆಯಲ್ಲೇ ಅಲ್ಲೋಲಕಲ್ಲೋಲ ಉಂಟುಮಾಡಿದ್ದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ ಭಾನುವಾರ ಕೊಂಚ ನಿಯಂತ್ರಣಕ್ಕೆ ಬಂದಿದೆ. ದೇಶೀಯವಾಗಿ ಸಂಚರಿಸುತ್ತಿದ್ದ 2,300 ವಿಮಾನಗಳ ಪೈಕಿ 1,650 ವಿಮಾನಗಳು ಹಾರಾಟ ನಡೆಸಿವೆ. ಉಳಿದ 650 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್‌ ಭಾನುವಾರ ಮಾಹಿತಿ ನೀಡಿದೆ.

ಶನಿವಾರ 2,300 ವಿಮಾನಗಳ ಪೈಕಿ 1,500 ಹಾರಾಟ ನಡೆಸಿದರೆ, 800 ವಿಮಾನಗಳನ್ನು ರದ್ದುಪಡಿಸಲಾಗಿತ್ತು. ಅದರ ಹಿಂದಿನ ದಿನ ಡಿ.5ರಂದು ಅತಿ ಹೆಚ್ಚು 1,600 ವಿಮಾನಗಳು ರದ್ದಾಗಿದ್ದವು. ಇದು ಭಾನುವಾರ ಬಹುತೇಕ ಸರಿದಾರಿಗೆ ಬಂದಿದೆ. ಡಿ.10ಕ್ಕೆ ವ್ಯವಸ್ಥೆಯನ್ನು ಸಂಪೂರ್ಣ ಸರಿದಾರಿಗೆ ತರಲಾಗುವುದು ಎಂದು ಇಂಡಿಗೋ ವಿಶ್ವಾಸ ವ್ಯಕ್ತಪಡಿಸಿದೆ.

ಹಂತ ಹಂತ ಸಹಜ ಸ್ಥಿತಿಗೆ:

ವಿಮಾನಗಳ ರದ್ದತಿ ಕುರಿತಾಗಿ 24 ಗಂಟೆಯೊಳಗೆ ಉತ್ತರಿಸುವಂತೆ ವಿಮಾನಯಾನ ಸಚಿವಾಲಯ ನೊಟೀಸ್‌ ನೀಡಿದ ಬೆನ್ನಲ್ಲೇ, ಇಂಡಿಗೋದ ಸಿಇಒ ಪೀಟರ್‌ ಎಲ್ಬರ್ಸ್‌, ‘ಹಂತ ಹಂತವಾಗಿ ನಾವು ಸಮಸ್ಯೆಯನ್ನು ಸರಿಪಡಿಸುತ್ತಿದ್ದೇವೆ’ ಎಂದು ತಮ್ಮ ಸಿಬ್ಬಂದಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.

‘ವಿಮಾನಗಳು ರದ್ದಾದರೆ ಗ್ರಾಹಕರು ವಿಮಾನ ನಿಲ್ದಾಣಕ್ಕೆ ಬರುವುದನ್ನು ತಡೆಯಲು ಆರಂಭಿಕ ಹಂತದಲ್ಲಿಯೇ ರದ್ದತಿಗಳನ್ನು ಖಚಿತಪಡಿಸುತ್ತಿದ್ದೇವೆ. ಭಾನುವಾರ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡಿದ್ದೇವೆ. ಹಂತ ಹಂತವಾಗಿ ಸಹಜ ಸ್ಥಿತಿಗೆ ಹಿಂತಿರುಗುತ್ತಿದ್ದೇವೆ’ ಎಂದಿದ್ದಾರೆ.

- ₹610 ಕೋಟಿ ಟಿಕೆಟ್‌ ಹಣ ವಾಪಸ್‌

ಕಳೆದ ಕೆಲ ದಿನಗಳಿಂದ ರದ್ದಾದ ತನ್ನ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆ ಒಟ್ಟು 610 ಕೋಟಿ ರು. ಹಣವನ್ನು ಮರಳಿಸಿದೆ. ಪೂರ್ಣ ಪ್ರಮಾಣದಲ್ಲಿ ಹಣ ಮರಳಿಸಲು ಕೇಂದ್ರ ಸರ್ಕಾರ ಸಂಸ್ಥೆಗೆ ಭಾನುವಾರ ರಾತ್ರಿ 8 ಗಂಟೆಯ ಗಡುವು ನೀಡಿತ್ತು. ಅದರೊಳಗೆ 610 ಕೋಟಿ ರು. ಹಣ ಮರುಪಾವತಿ ಮಾಡಿದ್ದಾಗಿ ಕಂಪನಿ ಹೇಳಿದೆ. ಅಲ್ಲದೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಾಕಿ ಉಳಿದಿದ್ದ 3000 ಲಗೇಜ್‌ ಅನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ. ಇಂಥ ಲಗೇಜ್‌ ತಲುಪಿಸುವುದಕ್ಕೂ ಕೇಂದ್ರ ಸರ್ಕಾರ 48 ಗಂಟೆಗಳ ಗಡುವು ನೀಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಎಂ ಹುದ್ದೆಗೆ ₹500 ಕೋಟಿ ಎಂದ ಸಿಧು ಪತ್ನಿ ಸಸ್ಪೆಂಡ್‌
ವಂದೇಮಾತರಂಗೆ ಕತ್ತರಿ ಹಾಕಿದ್ದೇ ಕಾಂಗ್ರೆಸ್‌: ಮೋದಿ