ಮತ್ತೆ ಗೋವು ತಲೆ ಕತ್ತರಿಸಿ ದುಷ್ಕರ್ಮಿಗಳಿಂದ ವಿಕೃತಿ - ನೆಲಮಂಗಲ ತಾಲೂಕಿನ ಅರಳಸಂದ್ರದಲ್ಲಿ ಕೃತ್ಯ

KannadaprabhaNewsNetwork |  
Published : Aug 12, 2025, 12:30 AM ISTUpdated : Aug 12, 2025, 04:34 AM IST
ಪೋಟೋ 7 * 8 : ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆಯ ನಡುರಸ್ತೆಯಲ್ಲಿ ನಾಟಿ ಹೋರಿಗಳನ್ನು ಕತ್ತು ಕೊಯ್ದು ಎಸೆದಿರುವುದು. | Kannada Prabha

ಸಾರಾಂಶ

ರಾಜ್ಯದ ವಿವಿಧೆಡೆ ಹಸುಗಳ ಹತ್ಯೆ, ಕತ್ತು ಕೊಯ್ಯುವುದು, ಕೆಚ್ಚಲು ಕತ್ತರಿಸುವಂಥ ಅಮಾನುಷ ಕೃತ್ಯಗಳು ಮುಂದುವರಿದಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಎರಡು ಹಳ್ಳಿಕಾರ್ ನಾಟಿ ಹೋರಿಗಳ ಕತ್ತು ಕೊಯ್ದಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.

  ದಾಬಸ್‍ಪೇಟೆ :  ರಾಜ್ಯದ ವಿವಿಧೆಡೆ ಹಸುಗಳ ಹತ್ಯೆ, ಕತ್ತು ಕೊಯ್ಯುವುದು, ಕೆಚ್ಚಲು ಕತ್ತರಿಸುವಂಥ ಅಮಾನುಷ ಕೃತ್ಯಗಳು ಮುಂದುವರಿದಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಎರಡು ಹಳ್ಳಿಕಾರ್ ನಾಟಿ ಹೋರಿಗಳ ಕತ್ತು ಕೊಯ್ದಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಿಂದ 2 ಕಿಲೋ ಮೀಟರ್‌ ದೂರದ ಕುಮುದ್ವತಿ ನದಿಗೆ ಅಡ್ಡಲಾಗಿ ಅರಳಸಂದ್ರದ ಬಳಿ ನಿರ್ಮಿಸಿರುವ ಸೇತುವೆಯ ಮೇಲೆ ಕತ್ತು ಕೊಯ್ದ ಸ್ಥಿತಿಯಲ್ಲಿ ಎರಡು ಹಳ್ಳಿಕಾರ್ ಜಾತಿಯ ನಾಟಿ ಹೋರಿಗಳು ಪತ್ತೆಯಾಗಿವೆ. ಈ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಷ್ಕರ್ಮಿಗಳು ಲಕ್ಷಾಂತರ ರೂ.ಬೆಲೆ ಬಾಳುವ ಈ ನಾಟಿ ಹೋರಿಗಳ ಕತ್ತು ಕೊಯ್ದು, ಭಾನುವಾರ ರಾತ್ರಿ ಎಸೆದು ಹೋಗಿದ್ದಾರೆ. ಈ ಸ್ಥಳದಲ್ಲಿ ಕತ್ತು ಕೊಯ್ದಿದ್ದರೆ ರಕ್ತ ಚೆಲ್ಲಿರಬೇಕಿತ್ತು. ಆದರೆ, ಯಾವ ರಕ್ತವೂ ಕಂಡು ಬಂದಿಲ್ಲ. ಹೀಗಾಗಿ, ಬೇರೆ ಕಡೆ ಕತ್ತುಕೊಯ್ದು, ಇಲ್ಲಿ ತಂದು ಎಸೆಯಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸತ್ತಿರುವ ಈ ಎರಡು ನಾಟಿ ಹೋರಿಗಳ ದೇಹದ ಮೇಲೆ ಬಣ್ಣದಲ್ಲಿ ಬರೆಯಲಾದ ನಂಬರ್ ಹಾಗೂ ಇಂಗ್ಲಿಷ್ ಅಕ್ಷರಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕೆ ಕತ್ತು ಕೊಯ್ದು ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇವುಗಳ ದೇಹದ ಮೇಲೆ ನಂಬರ್‌ಗಳು ಪತ್ತೆಯಾಗಿರುವುದರಿಂದ ಬಹುಶ: ಇವುಗಳನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ. ಈ ಮಧ್ಯೆ, ಮರಣೋತ್ತರ ಪರೀಕ್ಷೆ ನಡೆಸಿ, ಸಮೀಪದಲ್ಲಿಯೇ ಅವುಗಳ ಅಂತ್ಯಕ್ರಿಯೆ ನಡೆಸಲಾಗಿದೆ.

 2005ರಲ್ಲಿ ನಡೆದ ಕೆಲ ಪೈಶಾಚಿಕ ಕೃತ್ಯ:

ಜನವರಿ 12: ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕಿಡಿಗೇಡಿಗಳು ಕ್ರೌರ್ಯ ಮೆರೆದಿದ್ದರು.

ಜನವರಿ 16: ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ಹರಕೆಗೆ ಬಿಟ್ಟ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.

ಜನವರಿ 19: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು.

ಮೇ 13: ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸು ಕಳ್ಳತನ ಯತ್ನ ವಿಫಲವಾದಾಗ ರೋಷದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ಕಳ್ಳರು ಪರಾರಿಯಾಗಿದ್ದರು.

ಜೂನ್ 13: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ನಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.

ಜೂನ್‌ 21: ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದರು.

ಜೂನ್‌ 28: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪದಲ್ಲಿ ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳ ವಿಕೃತಿ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ರಿಮಿನಲ್‌ ಕಾಯ್ದೆ ಜಾರಿ ದಿನದಿಂದಷ್ಟೇ ಅನ್ವಯ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ