ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಸೇರಿದ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ನಟನಿಗೆ ಭದ್ರತೆ ಹೆಚ್ಚಿಸಿದ್ದಾರೆ. ಈ ಬಗ್ಗೆ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ‘ಕಪಿಲ್ ಶರ್ಮಾ ಸುರಕ್ಷತೆ ಖಚಿತ ಪಡಿಸಿಕೊಳ್ಳಲು ಅವರಿಗೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ’ ಎಂದಿದ್ದಾರೆ. ಆದರೆ ಯಾವ ರೀತಿಯ ಭದ್ರತೆ ಎನ್ನುವುದರ ಬಗ್ಗೆ ವಿವರ ಬಹಿರಂಗಪಡಿಸಿಲ್ಲ. ಜುಲೈನಲ್ಲಿ ಕಪಿಲ್ ಶರ್ಮಾ ಅವರು ಕೆನಡಾದಲ್ಲಿ ಹೊಸದಾಗಿ ಕೆಫೆ ಆರಂಭಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಜು.10, ಆ.8 ರಂದು ಕೆಫೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.
ಆನ್‌ಲೈನ್ ಬೆಟ್ಟಿಂಗ್: ರಾಣಾ ದುಗ್ಗುಬಾಟಿಗೆ 4 ತಾಸು ಇ.ಡಿ. ಬಿಸಿ
ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ,) ಅಧಿಕಾರಿಗಳು ನಟ ರಾಣಾ ದಗ್ಗುಬಾಟಿ ಅವರನ್ನು ಸೋಮವಾರ 4 ತಾಸು ವಿಚಾರನೆ ನಡೆಸಿದ್ದಾರೆ.ಬೆಟ್ಟಿಂಗ್ ಆ್ಯಪ್‌ಗಲ ಪರ ರಾಣಾ ಪ್ರಚಾರ ನಡೆಸಿ, ಆ ಅಕ್ರಮ ಹಣದ ಪಾಲುದಾರರಾಗಿದ್ದಾರೆ ಎಂಬುದು ಇ.ಡಿ. ಆರೋಪ. ಈ ಸಂಬಂಧ ಅವರನ್ನು ವಿಚಾರಣೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಈಗಾಗಲೇ ನಟರಾದ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ನಟಿ ಲಕ್ಷ್ಮೀ ಮಂಚು ಸೇರಿ ಹಲವರ ವಿಚಾರಣೆ ನಡೆಸಿದ್ದಾರೆ. ಸೋಮವಾರ ರಾಣಾ ಜಾರಿ ನಿರ್ದೇಶಾನಲಯದ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಬೈಕ್‌ಗೆ ಕಟ್ಟಿ ಪತ್ನಿ ಶವ ಹೊತ್ತೊಯ್ದ ಪತಿ: ನಾಗ್ಪುರದಲ್ಲಿ ಭೀಕರ ಘಟನೆ
ನಾಗ್ಪುರ : ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಯಾರೂ ಕೊಂಡೊಯ್ಯದ ಕಾರಣ, ವ್ಯಕ್ತಿಯೊಬ್ಬ ತನ್ನ ಬೈಕ್‌ಗೆ ಕಟ್ಟಿಕೊಂಡು ಹೊತ್ತೊಯ್ದ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಎದೆ ಝಲ್ಲೆನ್ನಿಸುವಂತಿದೆ.ಗಾರ್ಸಿ ಎಂಬಾಕೆ ತಮ್ಮ ಪತಿ ಅಮಿತ್ ಯಾದವ್ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅನ್ಯ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ಟ್ರಕ್ ಬಂದು ಡಿಕ್ಕಿ ಹೊಡೆದಿದೆ. ಆಗ ಅಕೆ ನೆಲಕ್ಕೆ ಬಿದ್ದಿದ್ದು, ಟ್ರಕ್ ಅಕೆಯ ಮೇಲೆ ಹರಿದು ಸಾವನ್ನಪ್ಪಿದ್ದಾರೆ.
ಈ ಸಂದರ್ಭದಲ್ಲಿ ಅಮಿತ್ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರರಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಆದರೆ ಯಾರು ಕೂಡ ಸಹಾಯಕ್ಕೆ ಮುಂದೆ ಬರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಅಮಿತ್ ಪತ್ನಿಯ ಶವವನ್ನು ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ತಮ್ಮ ಊರಿಗೆ ಹೊರಟಿದ್ದರು. ಬಳಿಕ ಪೊಲೀಸರು ಗಮನಿಸಿ ತಮ್ಮ ವ್ಯಾನ್‌ನಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಅಪಘಾತ ಮಾಡಿದ ಟ್ರಕ್ ಪತ್ತೆಗೆ ಬಲೆ ಬೀಸಿದ್ದಾರೆ.
ಪಾರಿವಾಳಕ್ಕೆ ಕಾಳು ಹಾಕಲು ನಿರ್ಬಂಧ: ವಿವಾದ
ಮುಂಬೈ: ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳು ಇರುವುದು ಆರೋಗ್ಯಕ್ಕೆ ಹಾನಿಕರವಾದ ಕಾರಣ, ಅವುಗಳು ಇರುವ ಕಬೂತರ್ ಖಾನಾಗಳಲ್ಲಿ ಸಾರ್ವಜನಿಕರು ಕಾಳು ಹಾಕುವುದನ್ನು ಬೃಹನ್ಮುಂಬೈ ಮಹಾನಗರಪಾಲಿಕೆ ನಿಷೇಧಿಸಿತ್ತು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿವೆ.
ಆದರೆ ಇದಕ್ಕೀಗ ಜೈನ ಸಮುದಾಯದಿಂದ ವಿರೋಧ ಕೇಳಿಬಂದಿದೆ.ಕೋರ್ಟ್ ಆದೇಶವನ್ನು ಜೈನ ಸನ್ಯಾಸಿ ಮುನಿ ನೀಲೇಶಚಂದ್ರ ವಿಜಯ ಅವರು ವಿರೋಧಿಸಿದ್ದು, ‘ಇದು ಜೈನರ ಸಂಪ್ರದಾಯವನ್ನು ಗುರುಯಾಗಿಸಿಕೊಂಡು ಹೊರಡಿಸಿದ ಆದೇಶ. ಜೈನರು ಕಾಳು ಹಾಕುವ ಪದ್ಧತಿ ಹೊಂದಿದ್ದಾರೆ. ಜೈನರು ಶಾಂತಿಪ್ರಿಯರಾದರೂ, ಧರ್ಮಕ್ಕಾಗಿ ಆಸ್ತ್ರವನ್ನು ಬೇಕಾದರೂ ಹಿಡಿಯುತ್ತೇವೆ. ನಮ್ಮ ನಂಬಿಕೆಗೆ ಯಾವುದಾದರೂ ವಿರುದ್ಧವಾಗಿದ್ದರೆ, ಆ ವಿಚಾರದಲ್ಲಿ ಕೋರ್ಟ್ ಆದೇಶವನ್ನೂ ಪಾಲಿಸುವುದಿಲ್ಲ’ ಎಂದಿದ್ದಾರೆ. ಜತೆಗೆ, ಆ.13ರ ಒಳಗೆ ನಿಷೇಧ ತೆರವಾಗದಿದ್ದರೆ 10 ಲಕ್ಷ ಜೈನ ಸನ್ಯಾಸಿಗಳೊಂದಿಗೆ ಸೇರಿ ನಿರಶನ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.ಮುಂಬೈ ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಸಾರ್ವಜನಿಕವಾಗಿ ಕಾಳು ಹಾಕಲಾಗುತ್ತಿದೆ.