ಚುನಾವಣಾ ನಿಯಮಗಳ ತಿದ್ದುಪಡಿ ವಿರುದ್ಧ ಕಾಂಗ್ರೆಸ್‌ ಸುಪ್ರೀಂಗೆ ಅರ್ಜಿ

KannadaprabhaNewsNetwork | Published : Dec 25, 2024 12:46 AM

ಸಾರಾಂಶ

ಚುನಾವಣೆಯ ನಿಯಮಕ್ಕೆ ತಿದ್ದುಪಡಿ ಮೂಲಕ ಎಲೆಕ್ಟ್ರಾನಿಕ್‌ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನಿರ್ಬಂಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸರ್ಕಾರದ ಈ ಕ್ರಮದಿಂದಾಗಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್‌ ತನ್ನ ಆರೋಪಿಸಿದೆ.

ನವದೆಹಲಿ: ಚುನಾವಣೆಯ ನಿಯಮಕ್ಕೆ ತಿದ್ದುಪಡಿ ಮೂಲಕ ಎಲೆಕ್ಟ್ರಾನಿಕ್‌ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನಿರ್ಬಂಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸರ್ಕಾರದ ಈ ಕ್ರಮದಿಂದಾಗಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್‌ ತನ್ನ ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ಜೈರಾಂ ರಮೇಶ್‌, ‘ದೇಶದಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗ ಇಂತಹ ತಿದ್ದುಪಡಿಗಳನ್ನು ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ ಮಾಡಲಾಗದು. ಅದರಲ್ಲೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡುವ 1961ರ ಚುನಾವಣಾ ನಿಯಮವನ್ನೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ನಿಯಮ ಪುನಃಸ್ಥಾಪಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಸಹಕರಿಸುತ್ತದೆ ಎಂಬ ಭರವಸೆಯಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಅಂತೆಯೇ, ಆಯೋಗ ಪಾರದರ್ಶಕತೆಗೆ ಏಕೆ ಹೆದರುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಏನಿದು ವಿವಾದ?:

ಚುನಾವಣಾ ಆಯೋಗದ ಸಲಹೆಯಂತೆ ಕೇಂದ್ರ ಕಾನೂನು ಸಚಿವಾಲಯವು 1961ರ ಚುನಾವಣಾ ನಿಯಮದ 93(2)(ಎ)ಗೆ ಡಿ.20ರಂದು ತಿದ್ದುಪಡೆ ಮಾಡಿದೆ. ಅದರನ್ವಯ ಚುನಾವಣೆ ವೇಳೆ ದಾಖಲಾಗುವ ಕಾಗದದ ದಾಖಲೆ ಹೊರತಾಗಿ, ಸಿಸಿಟೀವಿ ವಿಡಿಯೋ, ವೆಬ್‌ಕಾಸ್ಟಿಂಗ್‌ ಸೇರಿದಂತೆ ಕೆಲ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ಮಾಡಲಾಗಿದೆ. ಈ ರೀತಿಯ ತಿದ್ದುಪಡಿಗೆ ಅದು, ಮತದಾನ ಕೇಂದ್ರಗಳೊಳಗಿನ ಸಿಸಿಟೀವಿ ದೃಶ್ಯಾವಳಿಗಳನ್ನು ತಿರುಚುವ ಅಥವಾ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ನೀಡಿದೆ.

==

ಮಹಾರಾಷ್ಟ್ರ ಚುನಾವಣೇಲಿ ಗೋಲ್ಮಾಲ್‌: ಕೈ ಆರೋಪ ತಿರಸ್ಕರಿಸಿದ ಚು. ಆಯೋಗ

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಭಾರೀ ಗೋಲ್‌ಮಾಲ್‌ ಆಗಿತ್ತು ಎಂದು ಕಾಂಗ್ರೆಸ್ ಮಾಡಿದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ಅಲ್ಲಗಳೆದಿದೆ.ಈ ಕುರಿತ ಕಾಂಗ್ರೆಸ್‌ ಕಳವಳಕ್ಕೆ ಪ್ರತಿಕ್ರಿಯಿಸಿರುವ ಆಯೋಗ, ‘ಮತದಾರರ ಪಟ್ಟಿಯಲ್ಲಿ ಏಕಪಕ್ಷೀಯವಾಗಿ ಯಾವುದೇ ಹೆಸರು ಸೇರ್ಪಡೆ, ತೆಗೆದುಹಾಕುವುದು ಮಾಡಿಲ್ಲ’ ಎಂದು ಆಯೋಗ ಹೇಳಿದೆ.

ಇದೇ ವೇಳೆ ಸಂಜೆ 5 ಗಂಟೆಗಿನ ಮತದಾನ ಪ್ರಮಾಣಕ್ಕೂ, ರಾತ್ರಿ 11.45ರಲ್ಲಿ ಪ್ರಕಟವಾದ ಅಂತಿಮ ಮತದಾನ ಪ್ರಮಾಣದಲ್ಲೂ ಭಾರೀ ವ್ಯತ್ಯಾಸ ಆಗಿದೆ ಎಂಬ ಕಾಂಗ್ರೆಸ್‌ ಆರೋಪದ ಬಗ್ಗೆ, ‘ ಸಂಜೆ 5 ಗಂಟೆಯ ಹೊತ್ತಿಗಿನ ಮತದಾನದ ಪ್ರಮಾಣವನ್ನು ಅಂತಿಮ ಅಂಕಿಅಂಶಗಳೊಂದಿಗೆ ಹೋಲಿಸಲು ಆಗದು. ಜತೆಗೆ, ಮತದಾನದ ಪ್ರಮಾಣ ಹಾಗೂ ಎಣಿಕೆ ಮಾಡಿದ ಮತಗಳಲ್ಲಿ ಕೊಂಚ ಏರುಪೇರಾಗುವುದು ಸಹಜ. ಜೊತೆಗೆ ಪಕ್ಷದ ಚುನಾವಣಾ ಏಜೆಂಟರ ಬಳಿ ಮತದಾನದ ಪ್ರಮಾಣದ ಮಾಹಿತಿ ಇದ್ದೇ ಇರುತ್ತದೆ. ಹೀಗಾಗಿ ಒಟ್ಟಾರೆ ಮತದಾನದ ಪ್ರಮಾಣ ಬದಲಾವಣೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದೆ.==

ಆರೋಪ: ಸಂಜೆ 5ರ ಮತ ಪ್ರಮಾಣಕ್ಕೂ ರಾತ್ರಿ 11:45ರ ಹೊತ್ತಿನ ಮತ ಪ್ರಮಾಣಕ್ಕೂ ಭಾರೀ ವ್ಯತ್ಯಾಸ

ಸ್ಪಷ್ಟನೆ: ಸಂಜೆ ಮತ ಪ್ರಮಾಣಕ್ಕೆ ರಾತ್ರಿ ಹೋಲಿಕೆ ಸರಿಯಲ್ಲ. ಒಟ್ಟಾರೆ ಮತ ಪ್ರಮಾಣ ಬದಲು ಸಾಧ್ಯವಿಲ್ಲ

ಆರೋಪ: ಮಹಾರಾಷ್ಟ್ರದಲ್ಲಿ ಮತದಾರರನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.ಆಯೋಗ ಸ್ಪಷ್ಟನೆ: ನಿಯಮಾನುಸಾರ, ಪಾರದರ್ಶಕವಾಗಿ ಮತದಾರರ ಪಟ್ಟಿ ತಯಾರಿಸಲಾಗಿದೆ.ಆರೋಪ: 50 ಕ್ಷೇತ್ರಗಳಲ್ಲಿ ಸರಾಸರಿ 50,000 ಮತದಾರರ ಸೇರ್ಪಡೆಯಾಗಿದ್ದು, ಅದರಲ್ಲಿ 47ರಲ್ಲಿ ಮಹಾಯುತಿ ಗೆದ್ದಿದೆ

ಸ್ಪಷ್ಟನೆ: 6 ಕ್ಷೇತ್ರಗಳಲ್ಲಿ 50000 ಮತದಾರರು ಸೇರ್ಪಡೆಯಾಗಿದೆ. ಇದರ ಆಧಾರದಲ್ಲಿ ಮಹಾಯುತಿ ಗೆದ್ದಿತು ಎನ್ನಲಾಗದು.

Share this article