ನ್ಯಾಯಾಂಗವನ್ನು ಬೆದರಿಸುವುದು ಕೈ ಸಂಸ್ಕೃತಿ ಮೋದಿ

KannadaprabhaNewsNetwork | Updated : Mar 29 2024, 08:11 AM IST

ಸಾರಾಂಶ

‘ದೇಶದ ನ್ಯಾಯಾಂಗ ಅಪಾಯದಲ್ಲಿದೆ. ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳಿಗೆ ಮಸಿ ಬಳಿಯಲು ಯತ್ನಿಸುತ್ತಿವೆ’

ನವದೆಹಲಿ: ‘ದೇಶದ ನ್ಯಾಯಾಂಗ ಅಪಾಯದಲ್ಲಿದೆ. ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳಿಗೆ ಮಸಿ ಬಳಿಯಲು ಯತ್ನಿಸುತ್ತಿವೆ’ ಎಂದು ದೇಶದ ಖ್ಯಾತ 600 ವಕೀಲರು ಒಂದಾಗಿ ಸಿಜೆಐಗೆ ಬರೆದ ಪತ್ರ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಚಾಟಿ ಬೀಸಿದ್ದಾರೆ. ಇದು ಬಿಸಿಬಿಸಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.

ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ, ‘ಇತರರ ಬಗ್ಗೆ ಬೊಬ್ಬೆ ಹೊಡೆಯುವುದು ಮತ್ತು ಬೆದರಿಸುವುದೇ ಹಳೆಯ ಕಾಂಗ್ರೆಸ್ ಸಂಸ್ಕೃತಿ, ಇಂಥವರನ್ನು 140 ಕೋಟಿ ಭಾರತೀಯರು ತಿರಸ್ಕರಿಸುವುದು ನಿಸ್ಸಂಶಯ’ ಎಂದು ಅವರು ಕಿಡಿಕಾರಿದ್ದಾರೆ. ಈ ಮೂಲಕ ನ್ಯಾಯಾಂಗದ ಮೇಲೆ ವಿಪಕ್ಷಗಳು ಒತ್ತಡ ಹೇರಲು ಯತ್ನಿಸುತ್ತಿವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ನ್ಯಾಯಾಂಗ ದುರ್ಬಲಗೊಳಿಸಲು ಮುಂದಾಗಿದ್ದೇ ಕಾಂಗ್ರೆಸ್‌. ಈಗ ಮೋದಿ ಆಡಿರುವ ಮಾತುಗಳು ಬೂಟಾಟಿಕೆ’ ಎಂದಿದೆ.

ಮೋದಿ ಹೇಳಿದ್ದೇನು?: ಗುರುವಾರ ಸಂಜೆ ಟ್ವೀಟ್‌ ಮಾಡಿರುವ ಮೋದಿ, ‘ಇತರರ ಬಗ್ಗೆ ಬೊಬ್ಬೆ ಹೊಡೆಯುವುದು ಮತ್ತು ಬೆದರಿಸುವುದೇ ಹಳೆಯ ಕಾಂಗ್ರೆಸ್ (ವಿಂಟೇಜ್‌ ಕಾಂಗ್ರೆಸ್‌) ಸಂಸ್ಕೃತಿ. 

5 ದಶಕಗಳ ಹಿಂದೆಯೇ ಅವರು ‘ನಿಷ್ಠ ನ್ಯಾಯಾಂಗ’ ಕ್ಕಾಗಿ ಕರೆ ನೀಡಿದ್ದರು. ಅರ್ಥಾತ್‌ ಅವರು (ಕಾಂಗ್ರೆಸ್‌) ನಾಚಿಕೆ ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ನಿಷ್ಠೆ ಬಯಸುತ್ತಾರೆ. ಆದರೆ ರಾಷ್ಟ್ರಹಿತಕ್ಕೆ ಮಾತ್ರ ನಿಷ್ಠೆ ತೋರಿಸಲ್ಲ. 140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವಿಲ್ಲ’ ಎಂದಿದ್ದಾರೆ.

ಕಾಂಗ್ರೆಸ್‌ ತಿರುಗೇಟು: ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ನ್ಯಾಯಾಂಗ ರಕ್ಷಿಸುವ ನೆಪದಲ್ಲಿ ನ್ಯಾಯಾಂಗ ದುರ್ಬಲ ಮಾಡುತ್ತಿರುವುದೇ ಬಿಜೆಪಿ. ಇಂಥದ್ದರಲ್ಲಿ ಮೋದಿ ನೀಡಿದ ಈ ಹೇಳಿಕೆ ಬೂಟಾಟಿಕೆಯಂತಿದೆ’ ಎಂದು ಕುಟುಕಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಟ್ವೀಟ್‌ ಮಾಡಿ, ‘ಈ ಹಿಂದೆ 4 ಸುಪ್ರೀಂ ಕೋರ್ಟ್‌ ಜಡ್ಜ್‌ಗಳು ಸುದ್ದಿಗೋಷ್ಠಿ ನಡೆಸಿ ಪ್ರಜಾಸತ್ತೆ ಅಪಾಯದಲ್ಲಿದೆ ಎಂದಿದ್ದರು. ನ್ಯಾಯಾಧೀಶರಲ್ಲಿ ಒಬ್ಬರನ್ನು ನಿಮ್ಮ ಸರ್ಕಾರವು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. 

ಇನ್ನು ಪ್ರಸ್ತುತ ಲೋಕಸಭೆ ಚುನಾವಣೆಗೆ ನಿಮ್ಮ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಮಾಜಿ ಹೈಕೋರ್ಟ್‌ ನ್ಯಾಯಾಧೀಶರನ್ನು ಕಣಕ್ಕಿಳಿಸಿದೆ. ಕೊಲಿಜಿಯಂ ಬದಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ತಂದವರು ಯಾರು ? 

ಗೌರವಾನ್ವಿತ ಸುಪ್ರೀಂ ಕೋರ್ಟ್‌ನಿಂದ ಅದನ್ನು ಏಕೆ ತಡೆಹಿಡಿಯಲಾಯಿತು? ಹೀಗೆ ನ್ಯಾಯಾಂಗವನ್ನೇ ಬೆದರಿಸುವ ನೀವು, ನಿಮ್ಮ ಸ್ವಂತ ಪಾಪಗಳಿಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಹೊರಿಸುವುದನ್ನು ನಿಲ್ಲಿಸಬೇಕು’ ಎಂದು ಕಿಡಿಕಾರಿದ್ದಾರೆ.

Share this article