ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧದಲ್ಲಿ ವ್ಯಸ್ತರಾಗಿರುವ ಕಾರಣ ಒಣಹಣ್ಣುಗಳ ರಫ್ತಿನಲ್ಲಿ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಅವುಗಳ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದೆ. ಅರ್ಥಾತ್‌, ಕೆ.ಜಿ.ಗೆ ಸುಮಾರು 100-200 ರು, ಹೆಚ್ಚಳವಾಗಿದೆ. ಅತ್ತ ಪಾಕಿಸ್ತಾನದ ಜತೆ ಅಫ್ಘಾನಿಸ್ತಾನವು ಕದನದಲ್ಲಿ ತೊಡಗಿರುವುದೂ ಇದಕ್ಕೆ ಕೊಡುಗೆ ನೀಡಿದೆ.ಈ ಬಗ್ಗೆ ಹೈದ್ರಾಬಾದ್‌ನ ವ್ಯಾಪಾರಿಯೊಬ್ಬರು ಮಾತನಾಡಿದ್ದು, ‘ನಮ್ಮಲ್ಲಿ ಆಫ್ಘನ್‌, ಟರ್ಕಿ, ಇರಾನ್‌, ಈಜಿಪ್ಟ್‌ ಸೇರಿದಂತೆ ಹಲವು ದೇಶಗಳ ಡ್ರೈಫ್ರೂಟ್ಸ್‌ ಲಭ್ಯವಿವೆ. ಆದರೆ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ನಮ್ಮ ಆಮದುಗಳು ಕೊಲ್ಲಿ ರಾಷ್ಟ್ರಗಳಲ್ಲೇ ಸಿಲುಕಿಕೊಂಡಿವೆ. ಅತ್ತ ಆಫ್ಘನ್‌ನಿಂದ ಬರುತ್ತಿದ್ದ ಹಣ್ಣುಗಳೂ ಬರುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಭಾರತವು ಒಣಹಣ್ಣುಗಳಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳನ್ನೇ ಅವಲಂಬಿಸಿದೆ. ಸದ್ಯ ಆ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಜಲಗಡಿ ನಿರ್ಬಂಧದಿಂದಾಗಿ ಅವುಗಳ ಆಮದು ಸಾಧ್ಯವಾಗುತ್ತಿಲ್ಲ. ವಾಯುಮಾರ್ಗದಲ್ಲಿ ತರಿಸಿಕೊಳ್ಳುವುದು ಅತಿ ದುಬಾರಿ.

==

ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಟ್ರಂಪ್‌ ದುಂಬಾಲು: ಇರಾನ್ ವ್ಯಂಗ್ಯ

- ಹಿಂದೆ ಬೆದರಿಕೆ, ಈಗ ಓಲೈಕೆ


- ಅಮೆರಿಕದ ನಡೆಗೆ ಇರಾನ್‌ ವಿದೇಶಾಂಗ ಸಚಿವ ಕುಹಕ

ದುಬೈ: ‘ರಷ್ಯಾದಿಂದ ತೈಲ ಖರಿದಿಸಬೇಡಿ ಎಂದು ಹಲವು ತಿಂಗಳ ಕಾಲ ಅಮೆರಿಕವು ಭಾರತಕ್ಕೆ ಬೆದರಿಕೆ ಹಾಕುತ್ತಿತ್ತು. ಇದೀಗ ಅದೇ ಅಮೆರಿಕ ರಷ್ಯಾ ತೈಲ ಖರೀದಿಸುವಂತೆ ಭಾರತಕ್ಕೆ ದಂಬಾಲು ಬಿದ್ದಿದೆ’ ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ವ್ಯಂಗ್ಯವಾಡಿದ್ದಾರೆ.ಇರಾನ್‌ ಜತೆಗಿನ 2 ವಾರಗಳ ಯುದ್ಧದ ಬಳಿಕ ಅಮೆರಿಕ ಇದೀಗ ಭಾರತವೂ ಸೇರಿ ವಿಶ್ವದ ಮುಂದೆ ರಷ್ಯಾದ ತೈಲ ಖರೀದಿ ಮಾಡುವಂತೆ ಬೇಡುತ್ತಿದೆ ಎಂದು ಅರಾಗ್ಚಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದೇ ವೇಳೆ ಇಸ್ರೇಲ್‌-ಅಮೆರಿಕದ ಯುದ್ಧವನ್ನು ಬೆಂಬಲಿಸುತ್ತಿರುವ ಯುರೋಪಿಯನ್‌ ರಾಷ್ಟ್ರಗಳ ವಿರುದ್ಧವೂ ಹರಿಹಾಯ್ದಿರುವ ಅವರು, ಇರಾನ್‌ ವಿರುದ್ಧದ ಈ ಕಾನೂನು ಬಾಹಿರ ಯುದ್ಧ ಬೆಂಬಲಿಸುತ್ತಿರುವ ಐರೋಪ್ಯ ಒಕ್ಕೂಟ ದೇಶಗಳ ನಡೆ ದಯನೀಯವಾಗಿದೆ. ಇರಾನ್‌ ವಿರುದ್ಧದ ಕಾನೂನುಬಾಹಿರ ಯುದ್ಧ ಬೆಂಬಲಿಸಿದರೆ ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ ತನ್ನ ಬೆಂಬಲಕ್ಕೆ ನಿಲ್ಲಬಹುದು ಎಂಬ ಚಿಂತೆ ಐರೋಪ್ಯ ರಾಷ್ಟ್ರಗಳಿಗಿದೆ ಎಂದು ಹೇಳಿದ್ದಾರೆ.

==

ಇಂಧನ ಕೊರತೆ: ಪಾಕ್‌ ಸರ್ಕಾರಿ

ನೌಕರರ ಸಂಬಳದಲ್ಲಿ 30% ಕಟ್‌!

ಇಸ್ಲಾಮಾಬಾದ್‌: ತೈಲ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದಲ್ಲೂ ಹಾಹಾಕಾರವೆದ್ದಿರುವ ನಡುವೆ, ದೇಶವನ್ನು ಸಂಭಾವ್ಯ ಆರ್ಥಿಕ ಸಂಕಷ್ಟದಿಂದ ಕಾಪಾಡಲು ಅಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳ ನೌಕರರ ಸಂಬಳದಲ್ಲಿ ಶೇ.5ರಿಂದ 30ರಷ್ಟನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದಿಂದ ಉಂಟಾಗಿರುವ ತೈಲ ಸಮಸ್ಯೆಯ ಆರ್ಥಿಕ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ಪರಿಶೀಲನಾ ಸಭೆ ನಡೆಸಲಾಗಿತ್ತು. ಬಳಿಕ ಹೊರಡಿಸಲಾದ ಹೇಳಿಕೆಯಲ್ಲಿ, ‘ಸರ್ಕಾರಿ ನೌಕರರ ರೀತಿಯೇ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರ ಸಂಬಳ ಕಡಿತ ಮಾಡಲು ನಿರ್ಧಾರ ಮಾಡಲಾಗಿದೆ. ಕಡಿತವಾದ ಹಣವನ್ನು ಜನರಿಗೆ ಪರಿಹಾರ ಒದಗಿಸಲು ಬಳಸಲಾಗುವುದು’ ಎಂದು ತಿಳಿಸಲಾಗಿದೆ.ಜತೆಗೆ, ಮುಂದಿನ 2 ತಿಂಗಳು ಶೇ.40ರಷ್ಟೇ ಸರ್ಕಾರಿ ವಾಹನಗಳು ರಸ್ತೆಗಿಳಿಯಲಿದ್ದು, ಅವುಗಳಿಗೆ ಕೊಡಲಾಗುವ ಇಂಧನದಲ್ಲಿ ಶೇ.50ರಷ್ಟನ್ನು ಇಳಿಸುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.