ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌

KannadaprabhaNewsNetwork |  
Published : Mar 14, 2026, 03:00 AM IST
ಟ್ರಂಪ್ | Kannada Prabha

ಸಾರಾಂಶ

ಇರಾನ್‌ನಲ್ಲಿ ಈಗ ನಾಯಕತ್ವವೇ ಉಳಿದಿಲ್ಲ, ಅವರು ಯಾವತ್ತು ಬೇಕಾದರೂ ಶರಣಾಗಬಹುದು ಎಂದು ಜಿ7 ದೇಶಗಳ ನಾಯಕರ ಜತೆಗಿನ ವರ್ಚುವಲ್‌ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಆದರೆ, ಈ ಯುದ್ಧ ಯಾವಾಗ ಅಂತ್ಯಗೊಳ್ಳಲಿದೆ ಎಂಬ ಕುರಿತು ಅವರು ಸ್ಪಷ್ಟ ಮಾಹಿತಿ ನೀಡಲಿಲ್ಲ ಎಂದು ಗೊತ್ತಾಗಿದೆ.

- ಯಾವುದೇ ಕ್ಷಣ ಅದು ಶರಣಾಗಬಹುದು

- ಇರಾನ್‌ನಲ್ಲಿ ನಾಯಕತ್ವವೇ ಉಳಿದಿಲ್ಲ

- ಶರಣಾಗಿದ್ದೇವೆ ಎಂದು ಹೇಳಲೂ ಅಲ್ಲಿ ನಾಯಕರಿಲ್ಲ

- ಜಿ7 ದೇಶಗಳ ನಾಯಕರ ಜತೆಗಿನ ಸಭೆಯಲ್ಲಿ ನುಡಿವಾಷಿಂಗ್ಟನ್‌: ಇರಾನ್‌ನಲ್ಲಿ ಈಗ ನಾಯಕತ್ವವೇ ಉಳಿದಿಲ್ಲ, ಅವರು ಯಾವತ್ತು ಬೇಕಾದರೂ ಶರಣಾಗಬಹುದು ಎಂದು ಜಿ7 ದೇಶಗಳ ನಾಯಕರ ಜತೆಗಿನ ವರ್ಚುವಲ್‌ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಆದರೆ, ಈ ಯುದ್ಧ ಯಾವಾಗ ಅಂತ್ಯಗೊಳ್ಳಲಿದೆ ಎಂಬ ಕುರಿತು ಅವರು ಸ್ಪಷ್ಟ ಮಾಹಿತಿ ನೀಡಲಿಲ್ಲ ಎಂದು ಗೊತ್ತಾಗಿದೆ.

ಶೃಂಗದಲ್ಲಿ ಮಾತನಾಡಿ ಇರಾನ್‌ ಯುದ್ಧದ ಕುರಿತು ಮಾಹಿತಿ ನೀಡಿದ ಟ್ರಂಪ್‌, ‘ನಮಗೆಲ್ಲ ಬೆದರಿಕೆ ಹಾಕುತ್ತಿದ್ದ ಕ್ಯಾನ್ಸರ್‌ನಿಂದ ಮುಕ್ತಿ ನೀಡಿದ್ದೇನೆ’ ಎಂದು ಇರಾನಿ ಪರಮೋಚ್ಚ ನಾಯಕ ಖಮೇನಿ ಹತ್ಯೆಯನ್ನು ಸಮರ್ಥಿಸಿಕೊಂಡರು. ಜತೆಗೆ. ‘ಯುದ್ಧ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲು ಇರಾನ್‌ನಲ್ಲಿ ನಾಯಕರೇ ಉಳಿದಿಲ್ಲ. ಅವರ ನಾಯಕ ಯಾರೆಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಲ್ಲಿ ಶರಣಾಗತಿಯನ್ನು ಘೋಷಿಸುವವರೇ ಇಲ್ಲ’ ಎಂದೂ ಹೇಳಿದರು.

ಇದೇ ವೇಳೆ, ಯುದ್ಧ ಆರಂಭವಾದ ಬಳಿಕ ಹೋರ್ಮುಜ್‌ ಜಲಸಂಧಿಯನ್ನು ಇರಾನ್ ಮುಚ್ಚಿದ್ದರಿಂದ ವಿಶ್ವ ಆರ್ಥಿಕತೆ ಮೇಲೆ ಆಗುತ್ತಿರುವ ಅಡ್ಡ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಜಿ7 ದೇಶಗಳು, ಆದಷ್ಟು ಶೀಘ್ರ ಇದಕ್ಕೊಂದು ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದವು. ಜತೆಗೆ, ಹೋರ್ಮುಜ್‌ ಜಲಸಂಧಿಯನ್ನು ಆದಷ್ಟು ಶೀಘ್ರ ಹಡಗುಗಳ ಓಡಾಟಕ್ಕೆ ಮುಕ್ತ ಮಾಡುವಂತೆ ಮನವಿ ಮಾದವು ಎಂದು ತಿಳಿದುಬಂದಿದೆ.

ಜರ್ಮನಿಯ ಛಾನ್ಸಲರ್‌ ಫೆಡ್ರಿಚ್‌ ಮೆಜ್‌, ಬ್ರಿಟಿಷ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಅವರು, ಯಾವುದೇ ಕಾರಣಕ್ಕೂ ರಷ್ಯಾ ಈ ಸಂಘರ್ಷದ ಲಾಭ ಪಡೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದೂ ಇದೇ ವೇಳೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

==

ಮುಂದಿನ ವಾರ ಇರಾನ್‌ ಮೇಲೆ ಭಾರಿ ದಾಳಿ: ಟ್ರಂಪ್‌

- ನನಗೆ ತೈಲಕ್ಕಿಂತ ಇರಾನ್‌ಗೆ ತಡೆ ಒಟ್ಟುವುದು ಮಹತ್ವದ್ದು

ವಾಷಿಂಗ್ಟನ್‌: ಸಮರಕ್ಕೆ ಸಂಬಂಧಿಸಿದಂತೆ ವಿಭಿನ್ನ ಹೇಳಿಕೆ ನೀಡುವುದನ್ನು ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಮುಂದಿನ ವಾರ ಇರಾನ್ ಮೇಲೆ ಭಾರಿ ದಾಳಿ ಮಾಡಲಾಗುವುದು’ ಎಂದು ಗುಡುಗಿದ್ದಾರೆ. ಹೀಗಾಗಿ ಯುದ್ಧಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿಸಿದ್ದಾರೆ.ಗುರುವಾರ ಮಾತನಾಡಿದ ಅವರು, ‘ನಾವೂ ತೈಲ ಸಂಪದ್ಭರಿತ ದೇಶ. ತೈಲ ದರ ಏರಿದರೆ ನಮಗೆ ಹೆಚ್ಚು ಹಣ ಬರುತ್ತದೆ.ಅಧ್ಯಕ್ಷನಾಗಿ ನನಗೆ ತೈಲಕ್ಕಿಂತ ಹೆಚ್ಚಿನ ಆಸಕ್ತಿ ಮತ್ತು ಪ್ರಾಮುಖ್ಯತೆಯೆಂದರೆ, ದುಷ್ಟ ಸಾಮ್ರಾಜ್ಯವಾದ ಇರಾನ್ ಅಣ್ವಸ್ತ್ರ ಹೊಂದುವುದನ್ನು ಮತ್ತು ಮಧ್ಯಪ್ರಾಚ್ಯವನ್ನು ಅದು ನಾಶ ಮಾಡುವುದನ್ನು ತಡೆಯುವುದು. ನಾನು ಎಂದಿಗೂ ಇರಾನ್ ಆಸೆ ಈಡೇರಲು ಬಿಡಲ್ಲ’ ಎಂದರು.ಅಲ್ಲದೆ, ‘ಮುಂದಿನ ವಾರ ಇರಾನ್‌ ಮೇಲೆ ಭಾರಿ ದಾಳಿ ಮಾಡುತ್ತೇವೆ’ ಎಂದು ಎಚ್ಚರಿಸಿದರು.

==

ಇರಾನ್‌ ನೂತನ ನಾಯಕ ಮೊಜ್ತಬಾ ಕೋಮಾದಲ್ಲಿ?

- ಕಾಲು ಕಳೆದುಕೊಂಡಿರುವ ನಾಯಕ, ಹೊಟ್ಟೆಗೂ ಏಟು

- ಮೊಜ್ತಬಾ ಸುಸ್ಥಿತಿಯಲ್ಲಿಲ್ಲ: ಟ್ರಂಪ್‌, ಅಮೆರಿಕ ಸಚಿವ ಹೆಗ್ಸತ್‌

ಟೆಹ್ರಾನ್‌: ಫೆ.28ರಂದು ಅಮೆರಿಕ ನಡೆಸಿದ್ದ ದಾಳಿಯಲ್ಲಿ, ಇರಾನ್‌ನ ನೂತನ ಪರಮೋಚ್ಚ ನಾಯಕ ಹಾಗೂ ಮೃತ ನಾಯಕ ಅಯತೋಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ, ತಮ್ಮ ಒಂದು ಕಾಲು ಕಳೆದುಕೊಂಡಿದ್ದು ಹೊಟ್ಟೆಗೂ ಏಟು ಬಿದ್ದಿದೆ. ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಬ್ರಿಟನ್‌ನ ಸುದ್ದಿಸಂಸ್ಥೆ ‘ದ ಸನ್‌’ ವರದಿ ಮಾಡಿದೆ.

ಇತ್ತೀಚೆಗಷ್ಟೇ ಮೊಜ್ತಬಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಆದರೆ ಅಮೆರಿಕದ ದಾಳಿ ಪರಿಣಾಮ ಅವರು ಕಾಲೊಂದನ್ನು ಕಳೆದುಕೊಂಡಿದ್ದಾರೆ. ಹೊಟ್ಟೆ ಮತ್ತು ಯಕೃತ್ತಿಗೂ ಗಂಭೀರ ಹಾನಿಯಾಗಿದೆ ಎಂದು ಇದೀಗ ಸನ್‌ ವರದಿ ಹೇಳಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಕೂಡ, ‘ಮೊಜ್ತಬಾ ಬದುಕಿರುವರಾದರೂ ಸುಸ್ಥಿತಿಯಲ್ಲಂತೂ ಇಲ್ಲ’ ಎಂದಿದ್ದಾರೆ. ಅಮೆರಿಕ ರಕ್ಷಣಾ ಸಚಿವ ಪೀಟರ್ ಹೆಗ್ಸತ್‌ ಕೂಡ, ‘ಮೊಜ್ತಬಾ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿರುವ ಸಾಧ್ಯತೆ ಇದೆ'' ಎಂದು ಹೇಳಿದ್ದಾರೆ.ತಾಯಿ ಸತ್ತಿಲ್ಲ:ಅಯತೋಲ್ಲಾ ಅಲಿ ಖಮೇನಿಯನ್ನು ಬಲಿಪಡೆದ ದಾಳಿಯಲ್ಲಿ ಅವರ ಪತ್ನಿ ಮನ್ಸೌರೆ ಖೋಜಸ್ತೇ ಬಘರ್ಜಾದೇ ಮೃತಪಟ್ಟಿಲ್ಲ ಎನ್ನಲಾಗಿದೆ. ಗುರುವಾರ ಮೊದಲ ಬಾರಿ ಮೊಜ್ತಬಾ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಮ್ಮ ತಾಯಿಯ ಸಾವಿನ ಬಗ್ಗೆ ಪ್ರಸ್ತಾಪಿಸಲಿಲ್ಲವಾದ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ನಿಲ್ಲದ ಮಧ್ಯಪ್ರಾಚ್ಯ ಸಮರ: ದಾಳಿ-ಪ್ರತಿದಾಳಿ ತೀವ್ರ