ಖಮೇನಿ ಪುತ್ರ ಮೊಜ್ತಬಾ ಇರಾನ್‌ನ ಹೊಸ ನಾಯಕ

KannadaprabhaNewsNetwork |  
Published : Mar 10, 2026, 02:45 AM ISTUpdated : Mar 10, 2026, 04:05 AM IST
Mojtaba Khamenei

ಸಾರಾಂಶ

ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧದ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿರುವ ನಡುವೆಯೇ, ತನ್ನ ನೂತನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಇರಾನ್‌ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದೆ.  ಆಯತೋಲ್ಲ ಅಲಿ ಖಮೇನಿಯ ಪುತ್ರ ಮೊಜ್ತಬಾ ಖಮೇನಿಯೇ ತಂದೆಯ ಹುದ್ದೆಯನ್ನು ಅಲಂಕರಿಸಿದ್ದಾರೆ.

 ದುಬೈ: ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧದ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿರುವ ನಡುವೆಯೇ, ತನ್ನ ನೂತನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಇರಾನ್‌ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಇಸ್ರೇಲ್‌ ದಾಳಿಯಲ್ಲಿ ಸಾವನ್ನಪ್ಪಿದ ಈ ಹಿಂದಿನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿಯ ಪುತ್ರ ಮೊಜ್ತಬಾ ಖಮೇನಿಯೇ ತಂದೆಯ ಹುದ್ದೆಯನ್ನು ಅಲಂಕರಿಸಿದ್ದಾರೆ.

ಇರಾನಿನ 88 ಹಿರಿಯ ಧಾರ್ಮಿಕ ಮುಖಂಡರ ತಂಡ ಒಮ್ಮತದಿಂದ ಅಭಿಪ್ರಾಯ ರೂಪಿಸಿ, ಮೊಜ್ತಬಾರನ್ನು ನೂತನ ನಾಯಕನನ್ನಾಗಿ ಘೋಷಿಸಿದೆ. ಮೊಜ್ತಬಾ ದೇಶದ ಆಡಳಿತ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ರೆವಲ್ಯೂಷನರಿ ಗಾರ್ಡ್ಸ್‌ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ದೇಶಾದ್ಯಂತ ತಮ್ಮ ವ್ಯಾಪಾರ ವಹಿವಾಟುಗಳ ಮೂಲಕ ಬಲಿಷ್ಠ ಸಂಪರ್ಕ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.

 ಟ್ರಂಪ್‌ ವಿರೋಧದ ನಡುವೆಯೂ ಆಯ್ಕೆ: 

ಒಂದೆಡೆ, ಇರಾನ್‌ ಯಾರನ್ನೇ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದರೂ ಆತನನ್ನು ಕೊಲ್ಲುತ್ತೇವೆ ಎಂದು ಇಸ್ರೇಲ್‌ ಎಚ್ಚರಿಕೆ ನೀಡಿದರೆ, ಮತ್ತೊಂದೆಡೆ ‘ಖಮೇನಿಯ ಪುತ್ರನ ಆಯ್ಕೆ ನನಗೆ ಇಷ್ಟವಿಲ್ಲ. ದೇಶದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ನೆಲೆಗೊಳಿಸುವ ನಾಯಕನ ಅಗತ್ಯವಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಅವರ ವಿರೋಧದ ನಡುವೆಯೇ ಈ ಆಯ್ಕೆ ನಡೆದಿದೆ. ಇದು ಶತ್ರುದೇಶಗಳ ಕಣ್ಣನ್ನು ಮತ್ತಷ್ಟು ಕೆಂಪಾಗಿಸುವ ಸಾಧ್ಯತೆಯಿದೆ.

ಆಯ್ಕೆಗೆ ಕಾರಣಗಳೇನು?

ಮೊಜ್ತಬಾ ಬಹಳ ಹಿಂದಿನಿಂದಲೂ ರೆವಲ್ಯೂಷನರಿ ಗಾರ್ಡ್ಸ್‌ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ತಮ್ಮ ತಂದೆ ಖಮೇನಿ ಧಾರ್ಮಿಕ ನಾಯಕರಾಗಿದ್ದಾಗ ಅವರ ಕಚೇರಿಯನ್ನು 2 ದಶಕಗಳಿಂದ ನಿರ್ವಹಿಸಿದ ಅನುಭವವಿದೆ. ಇಸ್ಲಾಮಿಕ್‌ ಗಣರಾಜ್ಯದ ಪರ ಬಲವಾದ ನಿಲುವು ಹೊಂದಿರುವ ವ್ಯಕ್ತಿಯೂ ಹೌದು. ಈ ಕಾರಣಗಳಿಂದ, ಇರಾನ್‌ನ ಶಿಯಾ ಧಾರ್ಮಿಕ ವ್ಯವಸ್ಥೆಯಲ್ಲಿ ಮಗನೇ ತಂದೆಯ ಉತ್ತರಾಧಿಕಾರಿಯಾಗುವುದಕ್ಕೆ ಅಷ್ಟೊಂದು ಮನ್ನಣೆ ಇಲ್ಲದಿದ್ದರೂ ಮೊಜ್ತಬಾರನ್ನು ಆಯ್ಕೆ ಮಾಡಲಾಗಿದೆ.

 ಮೊಜ್ತಬಾ ಹಿನ್ನೆಲೆ 

ಖಮೇನಿ ಅವರಿಗೆ 4 ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು. ಈ ಪೈಕಿ ಮೊಜ್ತಬಾ 2ನೇ ಪುತ್ರ. ಮೊದಲಿನಿಂದಲೂ ಖಮೇನಿಯವರ ಉತ್ತರಾಧಿಕಾರಿ ಆಗಬಹುದಾದ ಸಮರ್ಥ ಎಂದೇ ಬಣ್ಣಿಸಲ್ಪಟ್ಟಿದ್ದರು. ಪತ್ನಿ ಜಹ್ರಾ, ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೊಜ್ತಬಾ ಮೇಲೆ 2019ರಲ್ಲೇ ಅಮೆರಿಕ ನಿರ್ಬಂಧ ಹೇರಿತ್ತಾದರೂ ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಮೊಜ್ತಬಾ ನೇಮಕಕ್ಕೆ ಕೆರಳಿ ಇಸ್ರೇಲ್‌ ಭೀಕರ ದಾಳಿ

ಟೆಲ್‌ ಅವೀವ್‌: ಮೃತ ಅಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ಹೊಸ ನಾಯಕನನ್ನು ನೇಮಿಸಿದರೆ ಅವನನ್ನೂ ಹತ್ಯೆ ಮಾಡುತ್ತೇವೆ ಎಂದು ಎಚ್ಚರಿಸಿದ್ದ ಇಸ್ರೇಲ್‌, ಆ ಜಾಗಕ್ಕೆ ಮೊಜ್ತಬಾ ಖಮೇನಿ ಆಯ್ಕೆಯಾಗುತ್ತಿದ್ದಂತೆ ಇರಾನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.ಈ ಬಗ್ಗೆ ಇಸ್ರೇಲ್‌ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇರಾನ್‌ನ ಟೆಹ್ರಾನ್‌, ಇಸ್ಫಹಾನ್, ದಕ್ಷಿಣ ಇರಾನ್‌ನಲ್ಲಿರುವ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಭೀಕರ ದಾಳಿಯನ್ನು ಆರಂಭಿಸಿದ್ದೇವೆ’ ಎಂದು ಹೇಳಿದೆ. ಅತ್ತ ಇರಾನ್‌ನ ಬೀದಿಗಳಲ್ಲಿ ಸಾಗರೋಪಾದಿಯಲ್ಲಿ ಸೇರಿದ ಜನ ಮೊಜ್ತಬಾರ ಫೋಟೋ ಹಿಡಿದು ತಮ್ಮ ನೂತನ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಇಸ್ರೇಲ್‌ಅನ್ನು ಮತ್ತಷ್ಟು ಕೆರಳಿಸಿದೆ.

ಮೊಜ್ತಬಾಗೆ ಪುಟಿನ್‌ ಅಭಿನಂದನೆ: ಅಚಲ ಬೆಂಬಲ ಘೋಷಣೆ

ಮಾಸ್ಕೋ: ಕಳೆದ 10 ದಿನಗಳಿಂದ ಒಂಟಿಯಾಗಿ ಅಮೆರಿಕ ಮತ್ತು ಇಸ್ರೇಲನ್ನು ಎದುರಿಸುತ್ತಿರುವ ಇರಾನ್‌ಗೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಅಚಲ ಬೆಂಬಲ’ ಘೋಷಿಸಿದ್ದಾರೆ. ಅಂತೆಯೇ, ಶಿಯಾ ದೇಶದ ನೂತನ ಪರಮೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.‘ಮೊಜ್ತಬಾ ತಮ್ಮ ತಂದೆಯ ಕೆಲಸವನ್ನು ಗೌರವಯುತವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ ಹಾಗೂ ಸಂಕಷ್ಟದ ಸಮಯದಲ್ಲಿ ಇರಾನಿಗರನ್ನು ಒಟ್ಟುಗೂಡಿಸಿಕೊಂಡು ಸಾಗುತ್ತಾರೆ ಎಂಬ ವಿಶ್ವಾಸವಿದೆ. ಇರಾನ್‌ ಉದ್ವಿಗ್ನವಾಗಿರುವ ಹೊತ್ತಿನಲ್ಲಿ, ಸದ್ಯ ನೀವೇರಿರುವ ಹುದ್ದೆಯಲ್ಲಿರಲು ಸಾಹಸ ಹಾಗೂ ಸಮರ್ಪಣೆ ಅಗತ್ಯ’ ಎಂದು ಪುಟಿನ್‌ ಹೇಳಿರುವುದಾಗಿ ವರದಿಯಾಗಿದೆ.ಈ ಮೊದಲು ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದಾಗ ಇರಾನ್‌ ಅಧ್ಯಕ್ಷರಿಗೆ ಕರೆ ಮಾಡಿ ಪುಟಿನ್‌ ಸಂತಾಪ ಸೂಚಿಸಿದ್ದರು.

ಖಮೇನಿ ಉತ್ತರಾಧಿಕಾರಿ ಕೊಲ್ತೀವಿ ಎಂದ ಇಸ್ರೇಲ್ ಧಮ್ಕಿಗೆ ಚೀನಾ ಕಿಡಿ

ಬೀಜಿಂಗ್‌: ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಬಳಿಕ ಅವರ ಉತ್ತರಾಧಿಕಾರಿ ಆಗಿ ಆಯ್ಕೆಯಾಗಿರುವ ಪುತ್ರ ಮೊಜ್ತಬಾರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್‌ ಬೆದರಿಕೆ ಹಾಕಿರುವುದಕ್ಕೆ ಚೀನಾ ಕಿಡಿಕಾರಿದ್ದು, ‘ಇರಾನ್ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ದಾಳಿಯನ್ನು ವಿರೋಧಿಸಬೇಕು’ ಎಂದಿದೆ.ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಗುವೊ ಜಿಯಾಕುನ್‌ ಪ್ರತಿಕ್ರಿಯಿಸಿದ್ದು,‘ಮೊಜ್ತಬಾ ಖಮೇನಿಯನ್ನು ಆಯ್ಕೆ ಮಾಡಿರುವುದು ಇರಾನ್‌ನ ಆಂತರಿಕ ನಿರ್ಧಾರ. ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಚೀನಾ ವಿರೋಧಿಸುತ್ತದೆ. ಇರಾನ್‌ನ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎಂದಿದ್ದಾರೆ.ಇದಕ್ಕೂ ಮುನ್ನವೂ ಚೀನಾ ಇರಾನ್‌ ಮೇಲೆ ಅಮೆರಿಕ, ಇಸ್ರೇಲ್ ದಾಳಿಯನ್ನು ಖಂಡಿಸಿತ್ತು. ಕದನ ವಿರಾಮಕ್ಕೆ ಆಗ್ರಹಿಸಿತ್ತು. ಉಭಯ ದೇಶಗಳ ನಡುವೆ ತೈಲ ವ್ಯವಹಾರದ ನಂಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿಯ ಒಂದೇ ಒಂದು ಫೋನ್‌ ಕರೆಗೆ ಯುದ್ಧ ನಿಲ್ಲುತ್ತೆ: ಯುಎಇ
ಕಚ್ಚಾತೈಲ ಗಗನನಮುಖಿ: ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ