ರಣಭೂಮಿಗೆ ಅಮೆರಿಕ ಪ್ರವೇಶ ಸದ್ಯಕ್ಕಿಲ್ಲ? 2 ವಾರದಲ್ಲಿ ಇರಾನ್ ನಿರ್ಧಾರ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 04:59 AM IST
trump

ಸಾರಾಂಶ

  ಅಮೆರಿಕದ ಜತೆ ಮಾತುಕತೆ ಇಲ್ಲ ಎಂದು ಇರಾನ್‌ ವಿದೇಶಾಂಗ ಸಚಿವ ಅರಗ್ಚಿ ಅವರು ಹೇಳಿದ್ದರೂ, ಅವರು ಶುಕ್ರವಾರ ಜಿನೇವಾಗೆ ಹೋಗಿದ್ದಾರೆ. ಅಲ್ಲಿ ಅವರು ಜರ್ಮನಿ, ಬ್ರಿಟನ್‌ ಹಾಗೂ ಪ್ರಾನ್ಸ್‌ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಯುದ್ಧ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

 ವಾಷಿಂಗ್ಟನ್‌: ಇರಾನ್‌ ಮೇಲೆ ಅಮೆರಿಕದ ಜತೆ ಮಾತುಕತೆ ಇಲ್ಲ ಎಂದು ಇರಾನ್‌ ವಿದೇಶಾಂಗ ಸಚಿವ ಅರಗ್ಚಿ ಅವರು ಹೇಳಿದ್ದರೂ, ಅವರು ಶುಕ್ರವಾರ ಜಿನೇವಾಗೆ ಹೋಗಿದ್ದಾರೆ. ಅಲ್ಲಿ ಅವರು ಜರ್ಮನಿ, ಬ್ರಿಟನ್‌ ಹಾಗೂ ಪ್ರಾನ್ಸ್‌ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಯುದ್ಧ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. 

ಇಸ್ರೇಲ್‌ ನಡೆಸಿರುವ ದಾಳಿಯಲ್ಲಿ ಅಮೆರಿಕ ಭಾಗವಹಿಸಬೇಕೇ ಬೇಡವೇ ಎಂಬ ಬಗ್ಗೆ ಇನ್ನು 2 ವಾರಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಏಕೆಂದರೆ ಇನ್ನೂ ಮಾತುಕತೆಗೆ ಅವಕಾಶವಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದರೊಂದಿಗೆ ಅಮೆರಿಕವು ತಕ್ಷಣಕ್ಕೇ ಯುದ್ಧರಂಗಕ್ಕೆ ಧುಮುಕುವ ಸಾಧ್ಯತೆ ದೂರವಾಗಿದೆ.

ಇದೇ ವೇಳೆ, ‘ಅಮೆರಿಕವು ಇಸ್ರೇಲ್‌ ಜೊತೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುವಂತೆ ಕೇಳಿಕೊಂಡಿತು. ಆದಕ್ಕೆ ನಮ್ಮ ಸಮ್ಮತಿಯಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇನ್ನೊಂದೆಡೆ ‘ನಮಗೆ ಟ್ರಂಪ್‌ ಸಾಥ್‌ ನೀಡಲಿ, ನೀಡದೇ ಇರಲಿ, ಇರಾನ್‌ನ ಎಲ್ಲ ಅಣ್ವಸ್ತ್ರ ನೆಲೆಗಳನ್ನು ಧ್ವಂಸ ಮಾಡುತ್ತೇವೆ. ಟ್ರಂಪ್‌ಗೆ ಅವರ ದೇಶ ರಕ್ಷಣೆ ಹೇಗೆ ಮುಖ್ಯವೋ ಹಾಗೆ ನಮಗೆ ನಮ್ಮ ದೇಶ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ.

2 ವಾರದಲ್ಲಿ ನಿರ್ಧಾರ:

‘ಇರಾನ್ ಜೊತೆ ಮುಂದಿನ ದಿನಗಳಲ್ಲಿ ಮಾತುಕತೆಗಳು ನಡೆಯಬಹುದು ಎಂಬ ಬಗ್ಗೆ ಗಣನೀಯ ಅವಕಾಶಗಳಿವೆ. ಹಾಗಾಗಿ ಅಮೆರಿಕವು ಯುದ್ಧದಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಮುಂದಿನ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ ಎಂದು ಶ್ವೇತಭವನ ವಕ್ತಾರೆ ಕೆರೊಲೀನ್‌ ಲೀವಿಟ್‌ ತಿಳಿಸಿದ್ದಾರೆ.

ಚರ್ಚೆಗೆ ಇರಾನ್‌ ನಕಾರ:

ಆದರೆ ಮಾತುಕತೆಗೆ ನಿರಾಕರಿಸಿರುವ ಇರಾನ್, ‘ಅಮೆರಿಕ ಒಪ್ಪಂದ ಮಾತುಕತೆ ನಡೆಸುವಂತೆ ಕೇಳಿಕೊಂಡಿತು. ಆದರೆ ಅದಕ್ಕೆ ನಮ್ಮ ಉತ್ತರವಿಲ್ಲ. ಟ್ರಂಪ್‌ ನಡೆಗಳನ್ನು ಗಮನಿಸಿದಾಗ ವಾಷಿಂಗ್ಟನ್ ಈಗಾಗಲೇ ಇಸ್ರೇಲಿ ದಾಳಿಗಳಲ್ಲಿ ಭಾಗಿಯಾಗಿದೆ ಎಂದು ತೋರಿಸುತ್ತದೆ. ಇಸ್ರೇಲ್‌ ದಾಳಿ ಮುಂದುವರಿಸುತ್ತಲೇ ಇದೆ. ಹೀಗಾಗಿ ನಾವು ಮಾತುಕತೆಗೆ ಸಿದ್ಧವಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವ ಅರಘ್ಚಿ ಹೇಳಿದ್ದಾರೆ.

ಜಿನೇವಾದಲ್ಲಿ ಯುದ್ಧ ಸಂಧಾನ ಮಾತುಕತೆ?

ಅಮೆರಿಕದ ಜತೆ ಮಾತುಕತೆ ಇಲ್ಲ ಎಂದು ಇರಾನ್‌ ವಿದೇಶಾಂಗ ಸಚಿವ ಅರಗ್ಚಿ ಅವರು ಹೇಳಿದ್ದರೂ, ಅವರು ಶುಕ್ರವಾರ ಜಿನೇವಾಗೆ ಹೋಗಿದ್ದಾರೆ. ಅಲ್ಲಿ ಅವರು ಜರ್ಮನಿ, ಬ್ರಿಟನ್‌ ಹಾಗೂ ಪ್ರಾನ್ಸ್‌ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಯುದ್ಧ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಯುದ್ಧ ಹೇಗೆ ನಿಲ್ಲಿಸಬೇಕು?: ಇರಾನ್‌, ಇಸ್ರೇಲ್‌, ಟ್ರಂಪ್‌ಗೆ ಪುಟಿನ್‌ ಸಲಹೆ

ಮಾಸ್ಕೋ: ಪ್ರಸ್ತುತ ಜಗತ್ತು ಹಲವು ಯುದ್ಧಗಳಿಗೆ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಸ್ರೇಲ್‌-ಇರಾನ್‌ ಸಂಘರ್ಷಕ್ಕೆ ಅಂತ್ಯ ಹಾಡುವ ಯತ್ನಕ್ಕೆ ಕೈ ಹಾಕಿದ್ದಾರೆ.ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುಟಿನ್‌, ‘ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಮಾತುಕತೆ ನಡೆಸಿದೆ. ಅವರೊಂದಿಗೆ ಯುದ್ಧ ನಿಲ್ಲಿಸುವ ಬಗ್ಗೆ ರಷ್ಯಾದ ನಿಲುವನ್ನು ಹಂಚಿಕೊಂಡೆ. ಇದನ್ನು ಅವರು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.3ಕ್ಕೂ ಅಧಿಕ ವರ್ಷಗಳಿಂದ ಉಕ್ರೇನ್‌ ಜತೆ ಬಡಿದಾಡುತ್ತಿರುವ ರಷ್ಯಾ ಅಧ್ಯಕ್ಷರು ಹೀಗೆ ಹೇಳಿರುವುದು ವಿಪರ್ಯಾಸವೇ ಸರಿ.

ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ತನ್ನ ವಾಯುಸೀಮೆ ತೆರೆದ ಇರಾನ್‌

ನವದೆಹಲಿ: ಭಾರತದ ಮೇಲಿನ ಸ್ನೇಹದ ದ್ಯೋತಕವಾಗಿ ತನ್ನ ವಾಯುವಲಯದ ಮೇಲಿನ ನಿರ್ಬಂಧವನ್ನು ಇರಾನ್‌ ಸಡಿಲಿಸಿದೆ. ಇದರಿಂದಾಗಿ ಭಾರತದ ‘ಆಪರೇಷನ್‌ ಸಿಂಧು’ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಇರಾನ್‌ನಲ್ಲಿ ಸಿಲುಕಿರುವ 10 ಸಾವಿರ ಭಾರತೀಯರ ಪೈಕಿ ಇನ್ನೂ 1000 ಭಾರತೀಯರನ್ನು ಹೊತ್ತ ವಿಮಾನಗಳು ಇರಾನ್‌ನಿಂದ ಭಾರತಕ್ಕೆ ನೇರವಾಗಿ ಹೊರಡಲು ಸಜ್ಜಾಗಿವೆ.

ಭಾರತೀಯರ ಹೊತ್ತ ಮೊದಲ ವಿಮಾನ ಶುಕ್ರವಾರ ತಡರಾತ್ರಿ ದಿಲ್ಲಿಗೆ ಆಗಮಿಸಿದೆ. ಇನ್ನೂ 2 ವಿಮಾನಗಳು ಶನಿವಾರ ಆಗಮಿಸುವ ನಿರೀಕ್ಷೆಯಿದೆ.‘ಭಾರತದ ಮೇಲಿನ ಸ್ನೇಹದ ದ್ಯೋತಕವಾಗಿ ತನ್ನ ವಾಯುವಲಯದ ಮೇಲಿನ ನಿರ್ಬಂಧವನ್ನು ಇರಾನ್‌ ತೆಗೆದು ಹಾಕಿದೆ. ಇರಾನ್‌ನ ಮಶಾದ್‌ ವಿಮಾನ ನಿಲ್ದಾಣದಿಂದ ನೇರವಾಗಿ ವಿಮಾನಗಳು ಭಾರತದತ್ತ ಹೊರಟಿವೆ’ ಎಂದು ದಿಲ್ಲಿಯಲ್ಲಿನ ಇರಾನ್‌ ರಾಯಭಾರಿ ಹೇಳಿದ್ದಾರೆ.

ಇರಾನ್‌ ತನ್ನ ವಾಯುವಲಯ ಬಂದ್‌ ಮಾಡಿದ್ದ ಕಾರಣ 110 ಭಾರತೀಯರು ಅರ್ಮೇನಿಯಾ ಮೂಲಕ ಮೊದಲ ಬ್ಯಾಚ್‌ನಲ್ಲಿ ಭಾರತಕ್ಕೆ ಮರಳಿದ್ದರು. ನೆರೆಯ ಕೆಲವು ದೇಶಗಳ ಜತೆಗೂ ಭಾರತವು ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು.

ಇರಾನ್‌ನ ಲವಿಝಾನ್‌ ಎಂಬಲ್ಲಿ ಅವಿತಿರುವ ಖಮೇನಿ?

ಟೆಹ್ರಾನ್‌: ಇರಾನ್‌ ಮೇಲೆ ಇಸ್ರೇಲ್‌ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಭೂಗತರಾಗಿರುವ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಈಶಾನ್ಯ ಟೆಹ್ರಾನ್‌ನ ಲವಿಝಾನ್‌ ಎಂಬಲ್ಲಿ ಅವಿತಿರಬಹುದು ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಅಲ್ಲಿ ರಹಸ್ಯ ಬಂಕರ್‌ ನಿರ್ಮಿಸಲಾಗಿದ್ದು, ಅಲ್ಲಿ 86 ವರ್ಷದ ನಾಯಕ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. 

ಅಲ್ಲಿಂದಲೇ ಇತ್ತೀಚೆಗೆ ಖಮೇನಿ ವಿಡಿಯೋ ಸಂದೇಶ ನೀಡಿದ್ದರು. ಸಾಮಾನ್ಯವಾಗಿ ಅವರ ವಿಡಿಯೋ ಸಂದೇಶಗಳನ್ನು, ಅವರ ಅಧಿಕೃತ ನಿವಾಸದಿಂದ ನೀಡಿದಾಗ ಉಚ್ಚ ಗುಣಮಟ್ಟದಿಂದ ಕೂಡಿರುತ್ತವೆ. ಆದರೆ ಈಗಿನ ವಿಡಿಯೋಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಹೀಗಾಗಿ ಅವರು ಅನ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದು ಸಾಬೀತಾಗಿದೆ ಎಂದು ವರದಿಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ