ಲೆಬನಾನ್‌ ಮೇಲೆ ದಾಳಿ ನಿಲ್ಲದಿದ್ರೆ ಕದನ ವಿರಾಮ ಅಂತ್ಯ : ಇರಾನ್‌

KannadaprabhaNewsNetwork |  
Published : Apr 09, 2026, 03:30 AM ISTUpdated : Apr 09, 2026, 05:27 AM IST
Iran

ಸಾರಾಂಶ

ಇರಾನ್‌ ಜತೆಗಿನ ಕದನವಿರಾಮವು ಲೆಬನಾನ್‌ಗೆ ಅನ್ವಯಿಸದು ಹಾಗೂ ಅಲ್ಲಿನ ಹಿಜ್ಬುಲ್ಲಾ ಉಗ್ರರ ಮೇಲೆ ದಾಳಿ ಮುಂದುವರಿಯುವುದು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ಟೆಹ್ರಾನ್‌: ಇರಾನ್‌ ಜತೆಗಿನ ಕದನವಿರಾಮವು ಲೆಬನಾನ್‌ಗೆ ಅನ್ವಯಿಸದು ಹಾಗೂ ಅಲ್ಲಿನ ಹಿಜ್ಬುಲ್ಲಾ ಉಗ್ರರ ಮೇಲೆ ದಾಳಿ ಮುಂದುವರಿಯುವುದು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್‌ ಗುಡುಗಿದ್ದು, ‘ದಕ್ಷಿಣ ಲೆಬನಾನ್‌ ಮೇಲಿನ ಆಕ್ರಮಣ ನಿಲ್ಲದಿದ್ದರೆ ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ಅನ್ನೇ ಗುರಿಯಾಗಿಸಿ ದಾಳಿ ಮಾಡುತ್ತೇವೆ. ಕದನವಿರಾಮ ಅಂತ್ಯಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದೆ.‘ಕೆಲ ಗಂಟೆಗಳಲ್ಲಿ ದಕ್ಷಿಣ ಲೆಬನಾನ್‌ ಮೇಲೆ ನಡೆಯುತ್ತಿರುವ ದಾಳಿ ನಿಲ್ಲದಿದ್ದರೆ ನಮ್ಮ ವಾಯುಪಡೆ ಟೆಲ್‌ಅವೀವ್‌ ಮೇಲೆ ಬಾಂಬ್‌ ಹಾಕಲಿದೆ’ ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿರುವುದಾಗಿ ವರದಿಯಾಗಿದೆ. 

ಶಾಂತವಾಯ್ತಾ ಹಿಜ್ಬುಲ್ಲಾ?:

ಇತ್ತ ಅಚ್ಚರಿಯೆಂಬಂತೆ, ಕದನವಿರಾಮ ಘೋಷಣೆಯಾಗುತ್ತಿದ್ದಂತೆ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾಗಳು ಉತ್ತರ ಇಸ್ರೇಲ್‌ ಮತ್ತು ಅದರ ಪಡೆಗಳ ಮೇಲಿನ ದಾಳಿಯನ್ನು ನಿಲ್ಲಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಇಸ್ರೇಲ್‌ ದಾಳಿಯ ಹೊರತಾಗಿಯೂ ಈ ಶಾಂತ ನಡೆ ಮುಂದುವರೆಯುವುದೇ ಎಂಬ ಪ್ರಶ್ನೆಯೀಗ ಉದ್ಭವಿಸಿದೆ. 

ಲೆಬನಾನ್‌ನಲ್ಲಿ 89 ಬಲಿ:ಇಷ್ಟು ದಿನ ಎರಡು ಶತ್ರುರಾಷ್ಟ್ರಗಳನ್ನು ಏಕಕಾಲಕ್ಕೆ ನಿಭಾಯಿಸುತ್ತಿದ್ದ ಇಸ್ರೇಲ್‌ ಈಗ ತನ್ನ ಪೂರ್ಣ ಗಮನವನ್ನು ಲೆಬನಾನ್‌ನ ಹಿಜ್ಬುಲ್ಲಾ ನಾಶಕ್ಕೆ ಮೀಸಲಿಟ್ಟಿದೆ. ಇದರ ಭಾಗವಾಗಿ ಬುಧವಾರ ನಡೆಸಿದ ದಾಳಿಯಲ್ಲಿ 89 ಮಂದಿ ಮೃತಪಟ್ಟಿದ್ದಾರೆ ಹಾಗೂ 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಕದನವಿರಾಮ ಆದರೂ ನಿಲ್ಲದ ದಾಳಿ 

ಟೆಹ್ರಾನ್‌/ ಜೆರುಸಲೇಂ: ಇರಾನ್‌ಅನ್ನು ಸರ್ವನಾಶ ಮಾಡುವ ಉತ್ಸಾಹದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದ್ದಕ್ಕಿದ್ದಂತೆ ಕದನವಿರಾಮ ಘೋಷಿಸಿದ ಹೊರತಾಗಿಯೂ ದಾಳಿ-ಪ್ರತಿದಾಳಿ ಮುಂದುವರೆದಿವೆ. ಇರಾನ್‌ನ ತೈಲ ಸಂಸ್ಕರಣಾ ಕೇಂದ್ರದ ಮೇಲೆ ಒಂದೆಡೆ ದಾಳಿ ನಡೆದಿದ್ದರೆ, ಇನ್ನೊಂದೆಡೆ ಯುಎಇ, ಕುವೈತ್‌, ಸೌದಿ ಅರೇಬಿಯಾ ಮೇಲೆ ಇರಾನ್ ದಾಳಿ ನಡೆಸಿದೆ.

ಯುದ್ಧಸ್ಥಗಿತ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಇರಾನ್‌ನ ಲಾವಣ್‌ ದ್ವೀಪದಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆದಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸುವ ಕೆಲಸ ನಡೆಯುತ್ತಿದೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಅತ್ತ ಇಸ್ರೇಲ್‌ ಕೂಡ ಆಕ್ರಮಣ ಮಾಡುತ್ತಿದೆ ಎಂದು ಇರಾನ್‌ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ.ಇರಾನ್‌ನಿಂದ ಯುಎಇ, ಕುವೈತ್‌ಗೆ ದಾಳಿ:ಅತ್ತ ಇರಾನ್‌ ಕೂಡ ತನ್ನ ಕ್ಷಿಪಣಿ ದಾಳಿ ಮಾಡುತ್ತಿದೆ. ಆದರೆ ಎಲ್ಲ ಕ್ಷಿಪಣಿ ನಾಶ ಮಾಡಿದ್ದೇವೆ ಎಂದು ಯುಎಇ ಹೇಳಿದೆ. ಆದರೆ ದಾಳಿಯಾಗಿದ್ದು ಎಲ್ಲಿ ಎಂಬುದನ್ನು ತಿಳಿಸಿಲ್ಲ. ಅತ್ತ ಕುವೈತ್‌ ಕಡೆಯಿಂದಲೂ ಇಂತಹ ಹೇಳಿಕೆ ಬಂದಿದೆ.

ಸೌದಿ ತೈಲ ಪೈಪ್‌ಲೈನ್‌ ಗುರಿ:ಸೌದಿ ಅರೇಬಿಯಾದ ಮಹತ್ವದ ಈಸ್ಟ್‌-ವೆಸ್ಟ್‌ ತೈಲ ಪೈಪ್‌ಲೈನ್ ಮೇಲೆ ಇರಾನ್‌ ದಾಳಿ ಮಾಡಿದೆ. ಇದು ಪ್ರಸ್ತುತ ಕಚ್ಚಾ ತೈಲ ರಫ್ತಿಗೆ ಅದರ ಏಕೈಕ ಮಾರ್ಗವಾಗಿದೆ. ಆದರೆ ಇರಾನಿನ ದಾಳಿಯಲ್ಲಿ ಹಾನಿಗೊಳಗಾಗಿದೆ ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಕದನ ವಿರಾಮಕ್ಕೆ ಬೇಡಿಕೊಂಡಿತು : ಹೆಗ್ಸೆತ್‌
ಗುಜರಾತಿಗಳು ಅನಕ್ಷರಸ್ಥರು ಹೇಳಿಕೆ : ಖರ್ಗೆ ವಿಷಾದ