ತೆರೆಮರೆ ಸಂಧಾನದ ಹಿಂದೆ ಪಾಕ್‌ ಪ್ರಮುಖ ಪಾತ್ರ

KannadaprabhaNewsNetwork |  
Published : Apr 09, 2026, 03:30 AM ISTUpdated : Apr 09, 2026, 06:17 AM IST
jd vance

ಸಾರಾಂಶ

ಕದನ ವಿರಾಮಕ್ಕೆ ಕೆಲವು ಗಂಟೆಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಮತ್ತೆ ಎಂದಿಗೂ ಹಿಂತಿರುಗುವುದಿಲ್ಲ’ ಎಂದಿದ್ದರು. ಆದರೆ ಗಡುವು ಮುಗಿಯುವಷ್ಟರಲ್ಲಿ ಅವರು ಕದನ ವಿರಾಮ ಸಾರಿದರು.

 ಇಸ್ಲಾಮಾಬಾದ್ : ಕದನ ವಿರಾಮಕ್ಕೆ ಕೆಲವು ಗಂಟೆಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಮತ್ತೆ ಎಂದಿಗೂ ಹಿಂತಿರುಗುವುದಿಲ್ಲ’ ಎಂದಿದ್ದರು. ಆದರೆ ಗಡುವು ಮುಗಿಯುವಷ್ಟರಲ್ಲಿ ಅವರು ಕದನ ವಿರಾಮ ಸಾರಿದರು. ಈ ಕದನವಿರಾಮ ಘೋಷಣೆ ಹಿಂದೆ ಪಾಕಿಸ್ತಾನ ಹಾಗೂ ಚೀನಾ ಸರ್ಕಾರಗಳ ಪಾತ್ರ, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರ ತೆರೆಮರೆ ಪ್ರಯತ್ನ ಹಾಗೂ ಬಹಿರಂಗವಾಗಿ ಬೆಂಕಿ ಉಗುಳುತ್ತಿದ್ದರೂ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಮತ್ತು ಇರಾನ್‌ನ ವಿದೇಶಾಂಗ ಸಚಿವ ಅರಾಘ್ಚಿ ಅವರ ಚಾಣಾಕ್ಷ ರಾಜತಾಂತ್ರಿಕತೆ ಇತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇರಾನ್‌ ಯುದ್ಧದ ಹೆಚ್ಚಿನ ಬಿಸಿ ತಟ್ಟುತ್ತಿರುವುದು ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ. ಹೀಗಾಗಿ ಪಾಕಿಸ್ತಾನವು ಮಾ. 29 ರಂದು ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನ ವಿದೇಶಾಂಗ ಮಂತ್ರಿಗಳ ಸಭೆ ಕರೆದು ಸಂಧಾನಕ್ಕೆ ಆತಿಥ್ಯ ವಹಿಸುವ ಪ್ರಸ್ತಾಪ ಇರಿಸಿತ್ತು. ಅಮೆರಿಕದ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್‌ಗೆ ತಲುಪಿಸಿದ್ದು ಮತ್ತು ನಂತರ ಇರಾನ್‌ನ ಪ್ರತಿಕ್ರಿಯೆಗಳನ್ನು ವಾಷಿಂಗ್ಟನ್‌ಗೆ ರವಾನಿಸಿದ್ದು ಪಾಕಿಸ್ತಾನ ಆಗಿತ್ತು.

ಇನ್ನು ಚೀನಾ ಕೂಡ ಕೊನೆಯ ಕ್ಷಣದಲ್ಲಿ ಸಂಧಾನ ಯತ್ನದ ರಂಗಪ್ರವೇಶ ಮಾಡಿತ್ತು. ಹೋರ್ಮುಜ್‌ ಜಲಸಂಧಿ ಬಂದ್‌ ಆಗಿರುವ ಕಾರಣ, ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿ ಮಧ್ಯಪ್ರಾಚ್ಯದ ತೈಲವನ್ನೇ ನಂಬಿದ್ದ ಚೀನಾಗೆ ಬಿಸಿ ತಾಗಿತ್ತು. ಹೀಗಾಗಿ ತನ್ನ ಮಿತ್ರ ದೇಶ ಆಗಿರುವ ಕಾರಣ ಇರಾನ್ ಮನವೊಲಿಕೆಗೆ ಅದು ಯತ್ನ ನಡೆಸಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕ್‌ ಮೇಲೇಕೆ ಅಷ್ಟು ವಿಶ್ವಾಸ?:

ಒಂದು ದೇಶವು ಸಂಘರ್ಷದಲ್ಲಿ ಮಧ್ಯವರ್ತಿಯಾಗಬೇಕಾದರೆ, ಅದನ್ನು ಎರಡೂ ಪಕ್ಷಗಾರರು ನಂಬಬೇಕು. ಇಲ್ಲಿ ಪಾಕಿಸ್ತಾನ ವಿಚಾರದಲ್ಲಿ ಆಗಿದ್ದೂ ಅದೇ.

ಇರಾನ್‌ ಜತೆ ಗಡಿ ಹೊಂದಿರುವ ಪಾಕಿಸ್ತಾನವು ಮೊದಲಿನಿಂದಲೂ ಇಸ್ರೇಲ್‌ ದ್ವೇಷಿ. ಹೀಗಾಗಿ ಪಾಕ್‌ ಬಗ್ಗೆ ಇರಾನ್‌ಗೆ ಮೃದು ಧೋರಣೆ ಇತ್ತು. ಹೀಗಾಗೇ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ, ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ಅವರನ್ನು ‘ಪ್ರಿಯ ಸಹೋದರರು’ ಎಂದು ಉಲ್ಲೇಖಿಸಿದ್ದರು. ಇರಾನ್‌ ಜತೆ ಷರೀಫ್‌ ಹಾಗೂ ಮುನೀರ್ ಸತತ ಮಾತುಕತೆ ನಡೆಸುತ್ತಿದ್ದರು.ಇನ್ನು ಅಮೆರಿಕ ಜತೆ ಇತ್ತೀಚೆಗೆ ಪಾಕಿಸ್ತಾನ ಸಂಬಂಧ ಸುಧಾರಿಸಿದೆ. ಅದಕ್ಕೆಂದೇ ಗಾಜಾ ಶಾಂತಿ ಮಂಡಳಿಗೆ ಇಸ್ಲಾಮಾಬಾದ್ ಕೂಡ ಸೇರಿದೆ. ಟ್ರಂಪ್ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್ ಅವರನ್ನು ತಮ್ಮ ‘ನೆಚ್ಚಿನ ಫೀಲ್ಡ್ ಮಾರ್ಷಲ್’ ಎಂದಿದ್ದರು.

ಇದು ಪಾಕ್‌ ಬಗ್ಗೆ ಇರಾನ್‌ ಹಾಗೂ ಅಮೆರಿಕ ಮೃದು ಧೋರಣೆ ಹೊಂದಿವೆ ಎಂಬುದರ ಸೂಚಕವಾಗಿತ್ತು. ಇದಕ್ಕೆ ಚೀನಾದ ದೃಢವಾದ ಬೆಂಬಲವು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿತು. ಅದಕ್ಕೇ ಪಾಕ್ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. 

ಪಾಕ್‌ಗೂ ಕದನ ವಿರಾಮ ಏಕೆ ಬೇಕಿತ್ತು?:

ಪಾಕಿಸ್ತಾನ ತನ್ನ ಹೆಚ್ಚಿನ ತೈಲವನ್ನು ಮಧ್ಯಪ್ರಾಚ್ಯದಿಂದ ಪಡೆಯುತ್ತದೆ ಮತ್ತು ಅನೇಕ ಪಾಕಿಸ್ತಾನಿಗಳು ಈ ಪ್ರದೇಶದಲ್ಲಿ ದುಡಿದು ಮನೆಗೆ ಹಣ ಕಳುಹಿಸುತ್ತಾರೆ. ಆದರೆ ಮಧ್ಯಪ್ರಾಚ್ಯ ಸಂಘರ್ಷ ಪಾಕ್‌ ಅನ್ನು ಕಂಗಾಲಾಗಿಸಿ ತೈಲ ಹಾಹಾಕಾರಕ್ಕೆ ಕಾರಣವಾಯಿತು. ಅನೇಕ ಪಾಕಿಗಳು ಗಲ್ಫ್‌ನಲ್ಲಿ ಕೆಲಸ ಕಳೆದುಕೊಂಡರು. ಹೀಗಾಗಿ ಶತಾಯ ಗತಾಯ ಸಮರ ನಿಲ್ಲಿಸಲು ಪಣ ತೊಟ್ಟಿತ್ತು.

ವ್ಯಾನ್ಸ್‌ ಪಾತ್ರ:

ಅತ್ತ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಸಂಧಾನದಲ್ಲಿ ಸಕ್ರಿಯರಾಗಿದ್ದರು. ಕಳೆದ ವಾರ ಅವರು ಪಾಕಿಸ್ತಾನ ಪ್ರಧಾನಿ ಷರೀಫ್ ಅವರೊಂದಿಗೆ ನೇರವಾಗಿ ಮಾತನಾಡಿದ್ದರು. ಇರಾನ್‌ ಪ್ರತಿನಿಧಿಗಳು ಕೂಡ ವ್ಯಾನ್ಸ್‌ ಬಗ್ಗೆ ಒಲವು ಹೊಂದಿದ್ದರು. ಅದಕ್ಕೆಂದೇ ಇರಾನ್‌ ಡೀಲ್‌ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಮಂಗಳವಾರ ರಾತ್ರಿ ಹೇಳಿದ್ದರು ಮೂಲಗಳು ರಾಯಿಟರ್ಸ್‌ಗೆ ಹೇಳಿವೆ.

ಇನ್ನು ಮಧ್ಯಪ್ರಾಚ್ಯದ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್‌ ಕೂಡ ಸಂಧಾನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಗೊತ್ತಾಗಿದೆ.

ಖಮೇನಿ ಅಭಯ:

ಇದೇ ವೇಳೆ, ಅಮೆರಿಕ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮಾತುಕತೆಗೆ ಅಭಯ ನೀಡಿದ್ದರು ಹಾಗೂ ಎಲ್ಲ ವಿದ್ಯಮಾನಗಳ ಮೇಲ್ವಿಚಾರಣೆ ವಹಿಸಿದ್ದರು.

ಅತ್ತ ಟ್ರಂಪ್‌ ಗುಡುಗು, ಇತ್ತ ತೆರೆಮರೆ ಸಂಧಾನ 

ವಾಷಿಂಗ್ಟನ್‌: ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ‘ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 5.30ರೊಳಗೆ ಇರಾನ್‌ ಸಂಧಾನಕ್ಕೆ ಬರದಿದ್ದರೆ, 5000 ವರ್ಷಗಳ ಇರಾನ್‌ ನಾಗರಿಕತೆಯನ್ನೇ ನಾಶ ಮಾಡುವೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಪ್ರಕಟಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ತೆರೆಮರೆ ಸಂಧಾನ ಚಟುವಟಿಕೆ ನಡೆಯುತ್ತಿದ್ದವು ಎಂಬ ಕುತೂಹಲದ ವಿಷಯ ಬೆಳಕಿಗೆ ಬಂದಿದೆ.

ಇರಾನ್ ಸಚಿವ ಅಬ್ಬಾಸ್‌ ಅರಾಘ್ಜಿ, ಪಾಕಿಸ್ತಾನದ ಮಧ್ಯವರ್ತಿಗಳು, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಹಾಗೂ ಅಮೆರಿಕದ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್‌ ನಡೆಸುತ್ತಿದ್ದರು. ಇರಾನ್‌ ಸರ್ವಾಧಿಕಾರಿ ಮೊಜ್ತಬಾ ಖಮೇನಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರ ಸಂಧಾನದ ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ವರದಿಗಳು ಹೇಳಿವೆ.ಟ್ರಂಪ್ ಅವರು ಮಂಗಳವಾರ ರಾತ್ರಿ ಕೆಲವು ಸಭೆಗಳಲ್ಲಿ ನಿರತರಾಗಿದ್ದಾಗ ಇತ್ತ ಮಧ್ಯಪ್ರಾಚ್ಯದ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್‌ಗೆ, ಇರಾನ್‌ ಕಡೆಯಿಂದ ಫೋನ್‌ ಮೇಲೆ ಫೋನ್‌ ಬರುತ್ತಿದ್ದವು. ಆಗ ಇರಾನ್‌ನ 10 ಅಂಶಗಳ ಸಂಧಾನ ಸೂತ್ರ ಕೂಡ ಸಂಧಾನಕಾರರ ಮೂಲಕ ಅವರ ಕೈಸೇರಿತು. ಇದರಲ್ಲಿ ಹಲವು ಅಂಶವು ಒಪ್ಪುವಂತೆ ಇರಲಿಲ್ಲ. ಹೀಗಾಗಿ ಇರಾನ್‌ಗೆ ಕೆಲವು ತಿದ್ದುಪಡಿ ಮಾಡುವಂತೆ ಸಂಧಾನಕಾರರು ಮನವೊಲಿಸಿದರು.

ಆಗ ಪಾಕಿಸ್ತಾನಿ ಸಂಧಾನಕಾರರು ಹಾಗೂ ಈಜಿಪ್ಟ್‌ ಮತ್ತು ಟರ್ಕಿಯ ಸಚಿವರು ಸಂಧಾನ ಸೇತುವಿನಂತೆ ಕೆಲಸ ಮಾಡಿ ಅಮೆರಿಕದ ಕರಡು ಪ್ರಸ್ತಾವಗಳನ್ನು ಪಾಕಿಸ್ತಾನಕ್ಕೆ ಕಳಿಸಿದರು. ಇರಾನ್ ಪರ ಎಲ್ಲ ಪ್ರಕ್ರಿಯೆಗಳನ್ನು ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಮನಿಸುತ್ತಿದ್ದರು. ಕೊನೆಗೆ ಉಭಯ ಕಡೆಗಳಿಗೆ ಸಂಧಾನ ಸಮ್ಮತವಾಯಿತು ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಕದನ ವಿರಾಮಕ್ಕೆ ಬೇಡಿಕೊಂಡಿತು : ಹೆಗ್ಸೆತ್‌
ಗುಜರಾತಿಗಳು ಅನಕ್ಷರಸ್ಥರು ಹೇಳಿಕೆ : ಖರ್ಗೆ ವಿಷಾದ