ನವದೆಹಲಿ: ಕಳೆದೊಂದು ದಶಕದಲ್ಲಿ ಇಸ್ಲಾಂ ವಿಶ್ವದಲ್ಲೇ ಅತಿ ವೇಗವಾಗಿ ವೃದ್ಧಿಯಾಗುತ್ತಿರುವ ಧರ್ಮವಾಗಿ ಹೊರಹೊಮ್ಮಿದೆ. ಕಳೆದ ದಶಕದಲ್ಲಿ ವಿಶ್ವದ ಇತರೆ ಎಲ್ಲಾ ಧರ್ಮಗಳ ಜನರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ ಕ್ರೈಸ್ತ ಮತ್ತು ಹಿಂದೂ ಧರ್ಮಗಳ ಬೆಳವಣಿಗೆ ದರ ಯಥಾಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಪ್ಯೂ ಸಮೀಕ್ಷಾ ವರದಿ ತಿಳಿಸಿದೆ.
ಮುಸ್ಲಿಮರಲ್ಲಿ ಜನನ ದರ ಹೆಚ್ಚಿರುವುದು, ಬಹುತೇಕರ ಯುವಸಮೂಹದವರು ಆಗಿರುವುದೇ ಆ ಸಮುದಾಯ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಲು ಕಾರಣ ಎಂದು ಸಮೀಕ್ಷಾ ವರದಿ ಹೇಳಿದೆ.
ವರದಿ ತಯಾರಿ ಹೇಗೆ?:
201 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ವಾಸವಿರುವ ಜನರ ಸಮೀಕ್ಷೆ ನಡೆಸಿ ಪ್ಯೂ ಸಂಸ್ಥೆ ಈ ವರದಿ ಸಿದ್ಧಪಡಿಸಿದೆ. ಇದರಲ್ಲಿ ಮುಖ್ಯವಾಗಿ ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು, ಬೌದ್ಧರು, ಯಹೂದಿಗಳು, ಉಳಿದ ಧರ್ಮಗಳ ಅನುಯಾಯಿಗಳು ಹಾಗೂ ತಮ್ಮನ್ನು ಯಾವ ಧರ್ಮದಲ್ಲಿಯೂ ಗುರುತಿಸಿಕೊಳ್ಳಲು ಇಚ್ಛಿಸಿದವರಿಂದ ಮಾಹಿತಿ ಸಂಗ್ರಹಿಸಲಾಗಿದೆ.
ವರದಿಯಲ್ಲೇನಿದೆ?:
2010-20ರ ಅವಧಿಯಲ್ಲಿ ಮುಸ್ಲಿಮರ ಸಂಖ್ಯೆಯಲ್ಲಿ 34.7 ಕೋಟಿಯಷ್ಟು ಏರಿಕೆಯಾಗಿದೆ. 2010ರಲ್ಲಿ ಅಂದಾಜು 166 ಕೋಟಿ ಇದ್ದ ಮುಸ್ಲಿಮರ ಸಂಖ್ಯೆ 2020ರಲ್ಲಿ 200 ಕೋಟಿಗೆ ತಲುಪಿದೆ. ಅಂದರೆ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ.20.7ರಷ್ಟು ಏರಿಕೆಯಾಗಿದೆ. ಇದರೊಂದಿಗೆ ಜಾಗತಿಕ ಜನಸಂಖ್ಯೆ ಪ್ರಮಾಣದಲ್ಲಿ ಮುಸ್ಲಿಮರ ಪ್ರಮಾಣ ಶೇ.25.6ಕ್ಕೆ ಏರಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಕ್ರೈಸ್ತರ ಸಂಖ್ಯೆಯಲ್ಲಿ 12.2 ಕೋಟಿ ಹೆಚ್ಚಳವಾಗಿ 230 ಕೋಟಿಗೆ ತಲುಪಿದೆ.
ವಿಶೇಷವೆಂದರೆ ಈ ಒಂದು ದಶಕದ ಅವಧಿಯಲ್ಲಿ ಮುಸ್ಲಿಮೇತರ ಎಲ್ಲಾ ಧರ್ಮಗಳನ್ನು ಸೇರಿಸಿದರೂ ಅವರ ಜನಸಂಖ್ಯೆಯಲ್ಲಿ 24.8 ಕೋಟಿಯಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಕೇವಲ ಮುಸ್ಲಿಮರ ಸಂಖ್ಯೆಯೊಂದರಲ್ಲೇ 34.7 ಕೋಟಿ ಏರಿಕೆ ಕಂಡುಬಂದಿದೆ. ಈ ಪ್ರಮಾಣವು ಜಗತ್ತಿನಲ್ಲಿ ಇರುವ ಒಟ್ಟಾರೆ ಬೌದ್ಧರ ಸಂಖ್ಯೆಗಿಂತಲೂ ಅಧಿಕ.
ಹಿಂದೂಗಳ ಸಂಖ್ಯೆ:
ಕಳೆದ ದಶಕದ ಅವಧಿಯಲ್ಲಿ ಜಗತ್ತಿನಲ್ಲಿ ಹಿಂದೂಗಳ ಸಂಖ್ಯೆ 12.6 ಕೋಟಿಯಷ್ಟು ಏರಿಕೆಯಾಗಿ 120 ಕೋಟಿಗೆ ತಲುಪಿದೆ. ಹಿಂದೂಗಳ ಜನಸಂಖ್ಯೆಯಲ್ಲಿ ಶೇ.12ರಷ್ಟು ಏರಿಕೆ ಕಂಡುಬಂದಿದೆ. ಜಾಗತಿಕ ಸಮುದಾಯದಲ್ಲಿ ಹಿಂದೂಗಳ ಪಾಲು 2010ರಲ್ಲಿ ಶೇ.15ರಷ್ಟು ಇದ್ದಿದ್ದು 2020ರಲ್ಲಿ ಶೇ.14.9ಕ್ಕೆ ಕುಸಿತವಾಗಿದೆ ಎಂದು ವರದಿ ಹೇಳಿದೆ.
ಏರಿಕೆಗೆ ಕಾರಣವೇನು?:
ಮುಸಲ್ಮಾನರ ಜನಸಂಖ್ಯೆ ಭಾರೀ ಏರಿಕೆಯಾಗಲು ಪ್ರಮುಖ ಕಾರಣ ಜನನ ದರ. ಸಾಮಾನ್ಯವಾಗಿ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹೊಂದುತ್ತಿದ್ದು, ಅವರಲ್ಲಿ ಬಹುತೇಕರು ಸಣ್ಣ ಹಾಗೂ ಮಧ್ಯಮ ವಯಸ್ಸಿನವರಾಗಿದ್ದಾರೆ. ಅಂತೆಯೇ, ಅನ್ಯ ಧರ್ಮದ ಮಹಿಳೆಯರು 2.2ರಷ್ಟು (10 ಮಹಿಳೆಯರಿಗೆ 22 ಮಕ್ಕಳು) ಮಕ್ಕಳನ್ನು ಹೆರುತ್ತಿದ್ದರೆ, ಮುಸ್ಲಿಂ ಸ್ತ್ರೀಯರು 2.9 (10 ಮಹಿಳೆಯರಿಗೆ 29 ಮಕ್ಕಳು) ಮಕ್ಕಳನ್ನು ಹೊಂದುತ್ತಿದ್ದಾರೆ.
ಇವರ ಜನಸಂಖ್ಯೆ ವೃದ್ಧಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ, ಅನ್ಯ ಧರ್ಮೀಯರಿಗೆ ಹೋಲಿಸಿದರೆ ಮುಲಸ್ಮಾನರು ಧರ್ಮ ಪರಿವರ್ತನೆಯಾಗುವುದು ಶೇ.1ರಷ್ಟು ಮಾತ್ರ. ಅತ್ತ ಅನೇಕರು ಕ್ರೈಸ್ತ ಧರ್ಮದಲ್ಲಿ ನಂಬಿಕೆ ಕಳೆದುಕೊಂಡು ಮತಾಂತರಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಮುಸಲ್ಮಾನರು ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಎಲ್ಲೆಲ್ಲಿ ಮುಸಲ್ಮಾನರು ಅಧಿಕ?:
2020ರಲ್ಲಿ ಮುಸ್ಲಿಮರು ಅಧಿಕವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ (120 ಕೋಟಿ) ವಾಸವಿದ್ದರು. ಉಳಿದಂತೆ ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾದಲ್ಲಿ 41.4 ಕೋಟಿ, ಉಪ-ಸಹಾರನ್ ಆಫ್ರಿಕಾದಲ್ಲಿ 36.9 ಕೋಟಿ ಮುಸಲ್ಮಾನರಿದ್ದಾರೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಜನಸಂಖ್ಯೆಯಲ್ಲಿ ಮುಸಲ್ಮಾನರು ಶೇ.94ರಷ್ಟಿದ್ದಾರೆ.
ಭಾರತದಲ್ಲಿ 21.3 ಕೋಟಿ, ಪಾಕಿಸ್ತಾನದಲ್ಲಿ 22.7 ಕೋಟಿ, ಬಾಂಗ್ಲಾದೇಶದಲ್ಲಿ 15.1 ಕೋಟಿ, ಇಂಡೋನೇಷ್ಯಾದಲ್ಲಿ 23.9 ಕೋಟಿ ಮುಸಲ್ಮಾನರಿದ್ದಾರೆ.
ಬೌದ್ಧ ಧರ್ಮದಲ್ಲಿ ಉಲ್ಟಾ ಟ್ರೆಂಡ್:
ಕ್ರೈಸ್ತ, ಮುಸಲ್ಮಾನ ಧರ್ಮ ಸೇರಿ ಅನ್ಯ ಧರ್ಮಗಳ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ಬೌದ್ಧ ಧರ್ಮ ಮಾತ್ರ ಇದಕ್ಕೆ ಹೊರತಾಗಿದೆ. 2010-20ರ ನಡುವೆ ಬೌದ್ಧರ ಸಂಖ್ಯೆಯಲ್ಲಿ 1.9 ಕೋಟಿ ಏರಿಕೆಯಾಗಿ 32.4 ಕೋಟಿ ಆಗಿದೆ. ಇದರರ್ಥ, ಈ 10 ವರ್ಷಗಳಲ್ಲಿ ಬೌದ್ಧರ ಜನಸಂಖ್ಯೆ ಶೇ. 5.4ರಷ್ಟು ಕುಸಿದಿದೆ.