ಮೂರು ತಿಂಗಳ ಹಿಂದೆ ಹಮಾಸ್‌ ಉಗ್ರ ಸಂಘಟನೆಯ ಮೂವರು ಪ್ರಮುಖ ನಾಯಕರ ಹತ್ಯೆ : ಇಸ್ರೇಲ್‌ ಸೇನೆ

KannadaprabhaNewsNetwork |  
Published : Oct 04, 2024, 01:07 AM ISTUpdated : Oct 04, 2024, 04:00 AM IST
ಇಸ್ರೇಲ್‌ | Kannada Prabha

ಸಾರಾಂಶ

ಪ್ಯಾಲೆಸ್ತೀನ್‌ ಜತೆಗಿನ ಯುದ್ಧ ಮಧ್ಯಪ್ರಾಚ್ಯದಲ್ಲಿ ರಕ್ತದೋಕುಳಿಗೆ ಕಾರಣವಾಗಿರುವಾಗಲೇ, ಹಮಾಸ್‌ ಉಗ್ರ ಸಂಘಟನೆಯ ಮೂವರು ಪ್ರಮುಖ ನಾಯಕರನ್ನು ತಾನು ಮೂರು ತಿಂಗಳ ಹಿಂದೆಯೇ ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿದೆ.

ಜೆರುಸಲೇಂ: ಪ್ಯಾಲೆಸ್ತೀನ್‌ ಜತೆಗಿನ ಯುದ್ಧ ಮಧ್ಯಪ್ರಾಚ್ಯದಲ್ಲಿ ರಕ್ತದೋಕುಳಿಗೆ ಕಾರಣವಾಗಿರುವಾಗಲೇ, ಹಮಾಸ್‌ ಉಗ್ರ ಸಂಘಟನೆಯ ಮೂವರು ಪ್ರಮುಖ ನಾಯಕರನ್ನು ತಾನು ಮೂರು ತಿಂಗಳ ಹಿಂದೆಯೇ ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ಇದರಿಂದಾಗಿ ಇಸ್ರೇಲ್‌ನ ನಿರಂತರ ದಾಳಿಯಿಂದ ತತ್ತರಿಸಿರುವ ಉಗ್ರರಿಗೆ ಮತ್ತೊಂದು ಹಿನ್ನಡೆಯಾದಂತಾಗಿದೆ.

ಮೂರು ತಿಂಗಳ ಹಿಂದೆ ಗಾಜಾ ಪಟ್ಟಿಯಲ್ಲಿನ ಭೂಗತ ಸ್ಥಳವೊಂದರ ಮೇಲೆ ವಾಯು ದಾಳಿ ನಡೆಸಿ, ಗಾಜಾ ಪಟ್ಟಿಯಲ್ಲಿನ ಹಮಾಸ್‌ ಸರ್ಕಾರದ ಮುಖ್ಯಸ್ಥ ರಾವಿ ಮುಶ್ತಾಹಾ, ಹಮಾಸ್‌ ರಾಜಕೀಯ ವಿಭಾಗದ ಭದ್ರತಾ ವಿಭಾಗದ ಹೊಣೆ ಹೊತ್ತಿದ್ದ ಸಮೇಹ್‌ ಅಲ್‌ ಸಿರಾಜ್‌ ಹಾಗೂ ಕಮಾಂಡರ್‌ ಸಮಿ ಔಡೆಹ್‌ನನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ದಾಳಿ ನಡೆದ ಕಟ್ಟಡವು ಹಮಾಸ್‌ ಉಗ್ರರ ಕಮಾಂಡ್‌ ಹಾಗೂ ಕಂಟ್ರೋಲ್‌ ಘಟಕವಾಗಿ ಉತ್ತರ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಮೂವರೂ ಅಲ್ಲಿ ಅಡಗಿದ್ದರು ಎಂದು ವಿವರಿಸಿದೆ.

ಯಾರು ಈ ನಾಯಕರು?:  ಹಮಾಸ್‌ ಉಗ್ರ ಸಂಘಟನೆಯಲ್ಲಿ ಮುಶ್ತಾಹಾ ಅತ್ಯಂತ ಹಿರಿಯ ನಾಯಕ ಆಗಿದ್ದು, ಹಮಾಸ್‌ ಪಡೆ ನಿಯೋಜನೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದ. ಹಮಾಸ್‌ ಸಂಘಟನೆಯ ನಾಯಕನಾಗಿರುವ ಯಾಹ್ಯಾ ಸಿನ್ವರ್‌ಗೆ ಈತ ಬಲಗೈ ಬಂಟನಾಗಿದ್ದ ಎಂದು ಹೇಳಿದೆ. 2015ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಮುಶ್ತಾಹಾನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿತ್ತು.

ಈ ನಡುವ ಇಸ್ರೇಲ್‌ ಹೇಳಿಕೆ ಬಗ್ಗೆ ಹಮಾಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿಗೆ ಮತ್ತೆ 8 ಬಲಿ

ಬೈರೂತ್‌: ಇಸ್ರೇಲಿ ಸೇನೆಯು ಗುರುವಾರ ಉತ್ತರ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯಿಂದ ಬಫರ್‌ ವಲಯ ಎಂದು ಘೋಷಣೆ ಆಗಿರುವ ವಲಯವನ್ನು ತೆರವು ಮಾಡುವಂತೆ ಅಲ್ಲಿನ ನಾಗರಿಕರಿಗೆ ಸೂಚನೆ ನೀಡಿದೆ. ಹೀಗಾಗಿ ಈ ವಲಯದಲ್ಲಿ ಅದು ಭಾರಿ ದಾಳಿ ನಡೆಸುವ ಮುನ್ಸೂಚನೆ ಲಭಿಸಿದೆ.

ಇದರ ನಡುವೆ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ 2 ಪ್ರತ್ಯೇಕ ವಾಯುದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ತೈಬೆ ಎಂಬಲ್ಲಿ ನಡೆದ ದಾಳಿಯಲ್ಲಿ ಲೆಬನಾನ್‌ ಸೈನಿಕ ಸಾವನ್ನಪ್ಪಿ, ರೆಡ್‌ಕ್ರಾಸ್‌ನ 4 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ನಡುವೆ ಇಸ್ರೇಲ್‌ ಹಾರಿಸಿದ ಕ್ಷಿಪಣಿಯೊಂದು ಗುರಿ ತಪ್ಪಿ ಬೈರೂತ್‌ ನಾಗರಿಕರು ಇದ್ದ ಕಟ್ಟಡದ ಮೇಲೆ ಬಿದ್ದು, ಅದರಲ್ಲಿದ್ದ 7 ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ. ಬೈರೂತ್‌ನ ಹಿಜ್ಬುಲ್ಲಾ ಮಾಧ್ಯಮ ಕಚೇರಿಯೂ ವಾಯುದಾಳಿಯಲ್ಲಿ ಧ್ವಂಸವಾಗಿದೆ.

ಈವರೆಗೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಸೇನೆ ಭೂದಾಳಿ ನಡೆಸಿತ್ತು. ಆದರೆ ಈಗ ಉತ್ತರ ಲೆಬನಾನ್‌ಗೂ ದಾಳಿ ವಿಸ್ತರಿಸುವ ಮುನ್ಸೂಚನೆ ನೀಡಿದೆ. ಹಿಜ್ಬುಲ್ಲಾ ಉಗ್ರರನ್ನು ಈ ವೇಳೆ ಟಾರ್ಗೆಟ್‌ ಮಾಡುವ ಸಾಧ್ಯತೆ ಇದೆ.

ಇಸ್ರೇಲ್‌ ಮೇಲೆ ಹೌತಿ ದಾಳಿ:

ಯೆಮೆನ್‌ನ ಹೌತಿ ಉಗ್ರರು ಗುರುವಾರ ಇಸ್ರೇಲ್‌ನ ಟೆಲ್‌ ಅವಿವ್‌ನ ಕೆಲವು ಭಾಗಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾರೆ. ‘ನಮ್ಮ ಗುರಿ ಈಡೇರಿದೆ’ ಎಂದು ಹೌತಿ ಉಗ್ರರು ಹೇಳಿಕೊಂಡಿದ್ದಾರೆ. ಸಾವು-ನೋವಿನ ಮಾಹಿತಿ ಲಭಿಸಿಲ್ಲ.

ಇರಾನ್‌ ಟಾರ್ಗೆಟ್ ಲಿಸ್ಟ್‌ನಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು?

ತೆಹ್ರಾನ್‌: ಹಿಜ್ಬುಲ್ಲಾ ಉಗ್ರರ ವಿರುದ್ಧ ಸಮರ ಸಾರಿದ್ದಕ್ಕೆ ಇಸ್ರೇಲ್ ವಿರುದ್ಧ ಸಿಟ್ಟಾಗಿರುವ ಇರಾನ್, ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮಂದಾಗಿದ್ದು, ಅದರ ಟಾರ್ಗೆಟ್‌ ಲಿಸ್ಟ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.‘ರಿವೇಂಜ್‌ ಇಸ್ ನಿಯರ್‌’ ಎನ್ನುವ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಇರಾನ್‌ ಕೊಲ್ಲಬೇಕೆಂದು ಪಟ್ಟಿ ಮಾಡಿರುವ ‘ಭಯೋತ್ಪಾದಕರ ಪಟ್ಟಿ’ಯಲ್ಲಿ ನೆತನ್ಯಾಹು, ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಇಸ್ರೇಲ್‌ನ ಮೂರು ಸೇನೆಯ ಕಮಾಂಡರ್‌ಗಳು ಹಾಗೂ ಉನ್ನತ ಶ್ರೇಣಿಯ ಹಲವು ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇರಾನ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ