ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖ್ಯಸ್ಥ ಧರ್ಮಗುರು ಸಫೈದ್ದೀನ್‌ ಸಾವು : ಇಸ್ರೇಲ್‌

KannadaprabhaNewsNetwork |  
Published : Oct 24, 2024, 12:54 AM ISTUpdated : Oct 24, 2024, 04:31 AM IST
ಹಾಶಿಮ್‌ ಸಫೈದ್ದೀನ್‌  | Kannada Prabha

ಸಾರಾಂಶ

ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖ್ಯಸ್ಥ ಎಂದೇ ಬಿಂಬಿತನಾಗಿದ್ದ ಧರ್ಮಗುರು ಹಾಶಿಮ್‌ ಸಫೈದ್ದೀನ್‌ ಕೂಡಾ ಬೈರೂತ್‌ನ ಹೊರಭಾಗದಲ್ಲಿ ನಡೆದ ವಾಯುದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಖಚಿತಪಡಿಸಿದೆ.

ಬೈರೂತ್‌: ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖ್ಯಸ್ಥ ಎಂದೇ ಬಿಂಬಿತನಾಗಿದ್ದ ಧರ್ಮಗುರು ಹಾಶಿಮ್‌ ಸಫೈದ್ದೀನ್‌ ಕೂಡಾ ಬೈರೂತ್‌ನ ಹೊರಭಾಗದಲ್ಲಿ ನಡೆದ ವಾಯುದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಖಚಿತಪಡಿಸಿದೆ. 

ಆದರೆ ಹಿಜ್ಬುಲ್ಲಾ ಇನ್ನೂ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಅಕ್ಟೋಬರ್‌ ಆರಂಭದಲ್ಲಿ ನಡೆಸಿದ ದಾಳಿಯಲ್ಲಿ ಸಫೈದ್ದೀನ್‌ ಸೇರಿದಂತೆ 25 ಹಿಜ್ಬುಲ್ಲಾ ನಾಯಕರು ಹತರಾಗಿರುವುದಾಗಿ ಇಸ್ರೇಲ್‌ ಹೇಳಿದೆ. ಸೆ.27ರಂದು ದಕ್ಷಿಣ ಬೈರೂತ್‌ ಮೇಲೆ ವಾಯುದಾಳಿ ನಡೆಸಿದ್ದ ಇಸ್ರೇಲಿ ಸೇನೆ, ಹಿಜ್ಬುಲ್ಲಾ ಮುಖ್ಯಸ್ಥನಾಗಿದ್ದ ಹಸನ್‌ ನಸ್ರಲ್ಲಾನನ್ನು ಬಲಿ ಪಡೆದಿತ್ತು. ಇದೀಗ ಆತನ ನಂತರ ಸಂಘಟನೆಯ ಮುಖ್ಯಸ್ಥನಾಗಲಿದ್ದ ಸಫೈದ್ದೀನ್‌ ಕೂಡ ಸಾವಿಗೀಡಾಗಿರುವುದಾಗಿ ತಿಳಿಸಿದೆ.

ಸಂಘರ್ಷದ ನಡುವೆಯೇ ಕೆನಡಾ ಬೇಕರಿಯಲ್ಲಿ ಸಿಖ್‌ ಯುವತಿ ಶವ ಪತ್ತೆ

ಒಟ್ಟಾವಾ: ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಬಿಕ್ಕಟ್ಟು ಉದ್ಭವವಾಗಿರುವ ನಡುವೆಯೇ, ಕೆನಡಾ ವಾಲ್‌ಮಾರ್ಟ್‌ ಮಳಿಗೆಯ ಬೇಕರಿಯೊಂದರಲ್ಲಿ 19 ವರ್ಷದ ಸಿಖ್‌ ಯುವತಿಯ ಶವ ಪತ್ತೆಯಾಗಿದೆ. ಮೃತ ಯುವತಿ ವಾಲ್‌ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ. ಆದರೆ ಈಕೆಯ ಗುರುತು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದು, ಮೃತ ಮಹಿಳೆ ನಮ್ಮ ಸಮುದಾಯಕ್ಕೆ ಸೇರಿದವಳು ಎಂದು ಮೆರಿಟೈಮ್ ಸಿಖ್ ಸೊಸೈಟಿ ತಿಳಿಸಿದೆ ಬುಧವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ಮಾರ್ಟ್‌ನ ವಾಕ್‌-ಇನ್‌ ಓವನ್‌ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಮೋದಿಯನ್ನು ತುಂಡು ತುಂಡು ಮಾಡುವೆ ಎಂದ ಕೈ ಸಂಸದ ಇಮ್ರಾನ್‌ ವಿರುದ್ಧ ದೋಷಾರೋಪ

ಸಹರಾನ್ಪುರ್: 2014ರಲ್ಲಿ ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ಅವರನ್ನು ತುಂಡು ತುಂಡು ಮಾಡುವೆ ಎಂದು ಹೇಳಿದ್ದ ಕಾಂಗ್ರೆಸ್‌ ಸಂಸದ ಇಮ್ರಾನ್ ಮಸೂದ್‌ ವಿರುದ್ಧ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ ಆರೋಪ ಸಾಬೀತಾದರೆ 5-7 ವರ್ಷ ಶಿಕ್ಷೆ ಆಗುವ ಕಾಯ್ದೆಯನ್ನು ಹೊರಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಇಮ್ರಾನ್‌ ಸಂಸತ್‌ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಸಹರಾನ್‌ಪುರದ ಲಬ್ಕರಿ ಎಂಬಲ್ಲಿ ಮಾತನಾಡುವ ವೇಳೆ, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಇದ್ದಾರೆ. ನಾವು ಬಯಸಿದರೆ ಮೋದಿಯನ್ನು ತುಂಡು ತುಂಡು ಮಾಡುತ್ತೇವೆ ಎಂದು ಅಬ್ಬರಿಸಿದ್ದರು. ಈ ಹೇಳಿಕೆ ವಿರುದ್ಧ ಕುಸುಮ್‌ ವೀರ್‌ ಸಿಂಗ್ ಎಂಬುವವರು ದೂರು ನೀಡಿದ್ದರು.

ಪೈರಸಿಯಿಂದ ಮನರಂಜನಾ ಉದ್ಯಮಕ್ಕೆ ₹22400 ಕೋಟಿ ನಷ್ಟ

ನವದೆಹಲಿ: ಪೈರಸಿಯಿಂದ ಭಾರತದ ಮನರಂಜನಾ ಉದ್ಯಮಕ್ಕೆ 2023ರಲ್ಲಿ ಬರೋಬ್ಬರಿ 22,400 ಕೋಟಿ ರು. ನಷ್ಟ ಉಂಟಾಗಿದೆ. ಇದನ್ನು ತಡೆಯಲು ಕಠಿಣ ನಿಯಂತ್ರಣಾ ಕ್ರಮ ಸಂಘಟಿತ ಪ್ರಯತ್ನದ ಅವಶ್ಯಕತೆ ಇದೆ ಎಂದು ವರದಿಯೊಂದು ಹೇಳಿದೆ.

‘ಇವೈ’ ಮತ್ತು ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸಿದ್ಧಪಡಿಸಿರುವ ವರದಿ ಅನ್ವಯ ಭಾರತದಲ್ಲಿ ಮನರಂಜನಾ ವಲಯದಲ್ಲಿನ ಕೃತಿಚೌರ್ಯ ಉದ್ಯಮವು 22400 ಕೋಟಿ ರು.ನಷ್ಟು ಗಾತ್ರ ಹೊಂದಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮದಿಂದ ಉತ್ಪತ್ತಿಯಾಗುವ ಆರ್ಥಿಕತೆಯಲ್ಲಿ ವಿಭಾಗವಾರು ಆದಾಯದಲ್ಲಿ ಇದು ಇದು ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಇನ್ನು ಭಾರತದ ಮಾಧ್ಯಮ ಗ್ರಾಹಕರ ಪೈಕಿ ಶೇ.51ರಷ್ಟು ಜನರು ಕೃತಿಚೌರ್ಯದ ಮೂಲಗಳಿಂದಲೇ ವಿಷಯ/ ವಸ್ತುವನ್ನು ಪಡೆಯುತ್ತಾರೆ. ಈ ಪೈಕಿ ಚಿತ್ರಮಂದಿರಗಳಿಂದ ಪೈರಸಿ ಮಾಡಿದ ಚಿತ್ರಗಳಿಂದ 13,700 ಕೋಟಿ ರು., ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ 8,700 ಕೋಟಿ ರು. ಹಾಗೂ ಸಂಭಾವ್ಯ ಜಿಎಸ್‌ಟಿಯಿಂದ 4,300 ಕೋಟಿ ರು. ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ.

ಪತಿಗೆ ಹಿಜಡಾ ಎಂಬ ಬೈಗುಳ ಕ್ರೌರ್ಯ, ಅದು ಡೈವೋರ್ಸ್‌ಗೆ ಕಾರಣವಾಗಬಲ್ಲದು: ಹೈಕೋರ್ಟ್‌

ಚಂಡೀಗಢ: ಗಂಡನನ್ನು ಹಿಜಡಾ ಎನ್ನುವುದು ಮಾನಸಿಕ ಕ್ರೌರ್ಯ ಎಂದಿರುವ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ನೀಡಿದ್ದ ಡೈವೋರ್ಸ್‌ ತೀರ್ಪನ್ನು ಎತ್ತಿಹಿಡಿದಿದೆ. ಪತಿ ಮತ್ತು ಪತ್ನಿ ನಡುವಿನ ಜಗಳದ ವೇಳೆ ಪತ್ನಿ ಪತಿಗೆ ಹಿಜಡಾ ಎಂದು ಬೈದಿದ್ದರು. ಜೊತೆಗೆ ಆಕೆಯ ತಾಯಿಗೆ ನಪುಂಸಕನಿಗೆ ಜನ್ಮ ನೀಡಿದ್ದಾಳೆ ಎಂದಿದ್ದರು.

 ಇದನ್ನು ಮುಂದಿದಿಟ್ಟುಕೊಂಡು ಪತಿ ಡೈವೋರ್ಸ್‌ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಪತ್ನಿಯ ಟೀಕೆ ಮಾನಸಿಕ ಕ್ರೌರ್ಯ ಎಂದಿದ್ದ ಕೌಟುಂಬಿಕ ನ್ಯಾಯಾಲಯ ಡೈವೋರ್ಸ್‌ ನೀಡಿತ್ತು. ಅದನ್ನು ಇದೀಗ ಹೈಕೋರ್ಟ್‌ ಕೂಡಾ ಎತ್ತಿಹಿಡಿದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!