ಬೈರೂತ್: ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖ್ಯಸ್ಥ ಎಂದೇ ಬಿಂಬಿತನಾಗಿದ್ದ ಧರ್ಮಗುರು ಹಾಶಿಮ್ ಸಫೈದ್ದೀನ್ ಕೂಡಾ ಬೈರೂತ್‌ನ ಹೊರಭಾಗದಲ್ಲಿ ನಡೆದ ವಾಯುದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್ ಸೇನೆ ಮಂಗಳವಾರ ಖಚಿತಪಡಿಸಿದೆ. ಆದರೆ ಹಿಜ್ಬುಲ್ಲಾ ಇನ್ನೂ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಅಕ್ಟೋಬರ್ ಆರಂಭದಲ್ಲಿ ನಡೆಸಿದ ದಾಳಿಯಲ್ಲಿ ಸಫೈದ್ದೀನ್ ಸೇರಿದಂತೆ 25 ಹಿಜ್ಬುಲ್ಲಾ ನಾಯಕರು ಹತರಾಗಿರುವುದಾಗಿ ಇಸ್ರೇಲ್ ಹೇಳಿದೆ. ಸೆ.27ರಂದು ದಕ್ಷಿಣ ಬೈರೂತ್ ಮೇಲೆ ವಾಯುದಾಳಿ ನಡೆಸಿದ್ದ ಇಸ್ರೇಲಿ ಸೇನೆ, ಹಿಜ್ಬುಲ್ಲಾ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾನನ್ನು ಬಲಿ ಪಡೆದಿತ್ತು. ಇದೀಗ ಆತನ ನಂತರ ಸಂಘಟನೆಯ ಮುಖ್ಯಸ್ಥನಾಗಲಿದ್ದ ಸಫೈದ್ದೀನ್ ಕೂಡ ಸಾವಿಗೀಡಾಗಿರುವುದಾಗಿ ತಿಳಿಸಿದೆ.
ಸಂಘರ್ಷದ ನಡುವೆಯೇ ಕೆನಡಾ ಬೇಕರಿಯಲ್ಲಿ ಸಿಖ್ ಯುವತಿ ಶವ ಪತ್ತೆ
ಒಟ್ಟಾವಾ: ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಬಿಕ್ಕಟ್ಟು ಉದ್ಭವವಾಗಿರುವ ನಡುವೆಯೇ, ಕೆನಡಾ ವಾಲ್‌ಮಾರ್ಟ್ ಮಳಿಗೆಯ ಬೇಕರಿಯೊಂದರಲ್ಲಿ 19 ವರ್ಷದ ಸಿಖ್ ಯುವತಿಯ ಶವ ಪತ್ತೆಯಾಗಿದೆ. ಮೃತ ಯುವತಿ ವಾಲ್‌ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ. ಆದರೆ ಈಕೆಯ ಗುರುತು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದು, ಮೃತ ಮಹಿಳೆ ನಮ್ಮ ಸಮುದಾಯಕ್ಕೆ ಸೇರಿದವಳು ಎಂದು ಮೆರಿಟೈಮ್ ಸಿಖ್ ಸೊಸೈಟಿ ತಿಳಿಸಿದೆ ಬುಧವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ಮಾರ್ಟ್‌ನ ವಾಕ್-ಇನ್ ಓವನ್ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಮೋದಿಯನ್ನು ತುಂಡು ತುಂಡು ಮಾಡುವೆ ಎಂದ ಕೈ ಸಂಸದ ಇಮ್ರಾನ್ ವಿರುದ್ಧ ದೋಷಾರೋಪ
ಸಹರಾನ್ಪುರ್: 2014ರಲ್ಲಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ತುಂಡು ತುಂಡು ಮಾಡುವೆ ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿರುದ್ಧ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ ಆರೋಪ ಸಾಬೀತಾದರೆ 5-7 ವರ್ಷ ಶಿಕ್ಷೆ ಆಗುವ ಕಾಯ್ದೆಯನ್ನು ಹೊರಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಇಮ್ರಾನ್ ಸಂಸತ್ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಸಹರಾನ್‌ಪುರದ ಲಬ್ಕರಿ ಎಂಬಲ್ಲಿ ಮಾತನಾಡುವ ವೇಳೆ, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಇದ್ದಾರೆ. ನಾವು ಬಯಸಿದರೆ ಮೋದಿಯನ್ನು ತುಂಡು ತುಂಡು ಮಾಡುತ್ತೇವೆ ಎಂದು ಅಬ್ಬರಿಸಿದ್ದರು. ಈ ಹೇಳಿಕೆ ವಿರುದ್ಧ ಕುಸುಮ್ ವೀರ್ ಸಿಂಗ್ ಎಂಬುವವರು ದೂರು ನೀಡಿದ್ದರು.
ಪೈರಸಿಯಿಂದ ಮನರಂಜನಾ ಉದ್ಯಮಕ್ಕೆ ₹22400 ಕೋಟಿ ನಷ್ಟ
‘ಇವೈ’ ಮತ್ತು ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಿದ್ಧಪಡಿಸಿರುವ ವರದಿ ಅನ್ವಯ ಭಾರತದಲ್ಲಿ ಮನರಂಜನಾ ವಲಯದಲ್ಲಿನ ಕೃತಿಚೌರ್ಯ ಉದ್ಯಮವು 22400 ಕೋಟಿ ರು.ನಷ್ಟು ಗಾತ್ರ ಹೊಂದಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮದಿಂದ ಉತ್ಪತ್ತಿಯಾಗುವ ಆರ್ಥಿಕತೆಯಲ್ಲಿ ವಿಭಾಗವಾರು ಆದಾಯದಲ್ಲಿ ಇದು ಇದು ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
==