‘ ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲ ಪ್ರಯೋಗ ಮಾಡಿದ್ದು ಸರಿ ಅಲ್ಲ’ ಎಂದು ಲೋಕಸಭಾ ವಿಪಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಕೂಡ ಭಾಗವಾಗಿರುವ ಜಾರ್ಖಂಡ್‌ನ ಜೆಎಂಎಂ ಸರ್ಕಾರದ ನಡೆಗೆ ಅಸಮಾಧಾನ ಹೊರ ಹಾಕಿದ್ದಾರೆ.

ಜಾರ್ಖಂಡ್‌ ವಿದ್ಯಾರ್ಥಿಗಳ ವಿರುದ್ಧ ಬಲ ಪ್ರಯೋಗ ತಪ್ಪು- ತಮ್ಮದೇ ಸರ್ಕಾರದ ವಿರುದ್ಧ ರಾಗಾ ಕಿಡಿನವದೆಹಲಿ:‘ ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲ ಪ್ರಯೋಗ ಮಾಡಿದ್ದು ಸರಿ ಅಲ್ಲ’ ಎಂದು ಲೋಕಸಭಾ ವಿಪಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಕೂಡ ಭಾಗವಾಗಿರುವ ಜಾರ್ಖಂಡ್‌ನ ಜೆಎಂಎಂ ಸರ್ಕಾರದ ನಡೆಗೆ ಅಸಮಾಧಾನ ಹೊರ ಹಾಕಿದ್ದಾರೆ.‘ವಿದ್ಯಾರ್ಥಿಗಳಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಮಾತುಕತೆಗಳು ಮಾತ್ರ ಇದಕ್ಕೆ ಪರಿಹಾರ ನೀಡುತ್ತದೆ. ಜಾರ್ಖಂಡ್‌ ಸರ್ಕಾರವು ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದಿದ್ದಾರೆ.

==

ಪಿಟಿಐ ರಾಂಚಿ ಕಳೆದ ತಿಂಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ಬಲಪ್ರಯೋಗ ದೇಶಾದ್ಯಂತ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿರುವ ನಡುವೆಯೇ, ಜಾರ್ಖಂಡ್‌ನಲ್ಲೂ ಅಂಥದ್ದೇ ಪರಿಸ್ಥಿತಿ ಮರುಕಳಿಸಿದೆ. ರಾಜ್ಯ ಲೋಕಸೇವಾ ಆಯೋಗದ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಸಿಬಿಐ ತನಿಖೆಗೆ ಆಗ್ರಹಿಸಿ ಕಳೆದ 17 ದಿನಗಳಿಂದ ಪ್ರತಿಭಟಿಸುತ್ತಿರುವ ಯುವಕರು (ಜೆನ್‌ ಝೀಗಳು), ಸೋಮವಾರ ರಾಜ್ಯ ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿಧಾನಸೌಧದ ಮುಖ್ಯ ದ್ವಾರದ ಸನಿಹ ಅವರನ್ನು ತಡೆಯೊಡ್ಡಿದ ಪೊಲೀಸರ ಜತೆ ಘರ್ಷಣೆ ಉಂಟಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೋಲಿಸರು ಲಾಠಿಚಾರ್ಜ್, ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ್ದಾರೆ.

ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಜೆಎಸ್‌ಎಸ್‌ಸಿ) ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ‘ಜೆಪಿಎಸ್‌ಸಿ- ಜೆಎಸ್‌ಎಸ್‌ಸಿ ಸುಧಾರಣಾ ಮೋರ್ಚಾ’ ನೇತೃತ್ವದಲ್ಲಿ ಕಳೆದ 17 ದಿನಗಳಿಂದ ಈ ಹೋರಾಟ ನಡೆಯುತ್ತಿದೆ. ಸೋಮವಾರ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜನ್ಮದಿನದಂದೇ ವಿದ್ಯಾರ್ಥಿಗಳು ‘ವಿಧಾನಸಭಾ ಘೇರಾವ್’ ಚಳವಳಿ ಹಮ್ಮಿಕೊಂಡಿದ್ದರು.

ಕೈಯಲ್ಲಿ ‘ಜೆಎಸ್‌ಎಸ್‌ಸಿ-ಸಿಜಿಎಲ್‌ ಪರೀಕ್ಷೆ ರದ್ದುಗೊಳಿಸಿ’, ‘ಸಿಬಿಐ ತನಿಖೆ ನಡೆಸಿ’ ಎಂಬ ಬರಹಗಳಿದ್ದ ಫಲಕಗಳನ್ನು ಮತ್ತು ರಾಷ್ಟ್ರಧ್ವಜವನ್ನು ಹಿಡಿದು ಹಳೆಯ ವಿಧಾನಸಭೆ ಕಟ್ಟಡದಿಂದ ಮೆರವಣಿಗೆ ಆರಂಭಿಸಿದ ಯುವಕ-ಯುವತಿಯರು, ವಿಧಾನಸೌಧದ ಸನಿಹ 200 ಮೀ.ವರೆಗೂ ಆಗಮಿಸಿದರು. ಆಗ ಸಾಲು ಸಾಲು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದರು. ಈ ಹಿನ್ನೆಲೆಯಲ್ಲಿ, ಮಧ್ಯಾಹ್ನ ವಿಧಾನಸಭೆಯನ್ನು ಅಂದಿನ ಮಟ್ಟಿಗೆ ಮುಂದೂಡಲಾಯಿತು.

ವಿದ್ಯಾರ್ಥಿಗಳು ಕಲ್ಲು ತೂರಿದರು ಎಂದು ಹೇಳಿರುವ ಪೊಲೀಸರು, 4 ಪೊಲೀಸ್‌ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದಿದ್ದಾರೆ. ಘಟನೆಯು ಬಿಜೆಪಿ-ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಜಲಫಿರಂಗಿ ಮಧ್ಯೆ ರೇನ್‌ ಡಾನ್ಸ್‌:

ಮೆರವಣಿಗೆಯು ಜಗನ್ನಾಥಪುರ ದೇವಾಲಯದ ಸಮೀಪವಿರುವ ಅಂತಿಮ ತಡೆಗೋಡೆಯ ಬಳಿಗೆ ತಲುಪುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಈ ವೇಳೆ ಪ್ರತಿಭಟನಾಕಾರರು ಧಾರಾಕಾರ ನೀರಿನ ಕೆಳಗೇ ತ್ರಿವರ್ಣ ಧ್ವಜ ಬೀಸುತ್ತ ರೇನ್‌ ಡಾನ್ಸ್‌ ಮಾಡಿ ತಮ್ಮ ಆಕ್ರೋಶವನ್ನು ವಿಶಿಷ್ಟವಾಗಿ ವ್ಯಕ್ತಪಡಿಸಿದರು. ಆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಾಗ ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಹಲವು ಮಹಿಳೆಯರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹಲವರಿಗೆ ಗಾಯ, ಆಕ್ರೋಶ:

ಪೊಲೀಸ್ ಲಾಠಿಚಾರ್ಜ್‌ ವೇಳೆ ತಾವು ಗಾಯಗೊಂಡಿರುವುದಾಗಿ ಹಲವಾರು ಪ್ರತಿಭಟನಾಕಾರರು ತಿಳಿಸಿದ್ದಾರೆ. ‘ಲಾಠಿಚಾರ್ಜ್ ಅತ್ಯಂತ ಕ್ರೂರವಾಗಿತ್ತು. ಅನೇಕ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಪೊಲೀಸರು ನಮ್ಮ ತಲೆ, ಕೈಗಳು ಮತ್ತು ಮುಖ ಸೇರಿದಂತೆ ಎಲ್ಲೆಡೆ ಹೊಡೆದಿದ್ದಾರೆ. ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೆವು, ಆದರೆ ಸರ್ಕಾರ ನಮ್ಮ ವಿರುದ್ಧ ಲಾಠಿಗಳನ್ನು ಬಳಸಿತು. ಅವರು ಕೇವಲ ದೈಹಿಕ ಗಾಯಗಳನ್ನು ಉಂಟುಮಾಡಬಲ್ಲರೇ ಹೊರತು, ನಮ್ಮ ಆಲೋಚನೆಗಳಿಗೆ ಹಾನಿ ಮಾಡಲಾರರು’ ಎಂದು ಪ್ರತಿಭಟನಾಕಾರ ಪಿಯೂಷ್ ಕುಮಾರ್ ಸೋನಿ ಹೇಳಿದ್ದಾರೆ.

‘ಪ್ರತಿಭಟನೆಯನ್ನು ಹಾಳುಗೆಡವಲು ಸಮಾಜವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ನಮ್ಮ ಪ್ರತಿಭಟನೆಯಲ್ಲಿ ಅವು ಸೇರಿಕೊಳ್ಳುವುದನ್ನು ತಡೆಯಲು ಸುಮಾರು 500 ಸ್ವಯಂಸೇವಕರನ್ನು ನಿಯೋಜಿಸಿದ್ದೇವೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್ ತಿಳಿಸಿದೆ.

ಆ್ಯಂಬುಲನ್ಸ್‌ನಲ್ಲೇ ಪ್ರತಿಭಟನೆ:

ಕಳೆದ 9 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (ಜೆಎಲ್‌ಕೆಎಂ) ನಾಯಕ ದೇವೇಂದ್ರ ನಾಥ್ ಮಹತೋ ಅವರು ಆ್ಯಂಬ್ಯುಲೆನ್ಸ್‌ನಲ್ಲೇ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ನೂತನ ವಿಧಾನಸಭೆ ಸಂಕೀರ್ಣದ ಸುತ್ತಮುತ್ತಲಿನ 4 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ 1,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸರ್ಕಾರದ ಜತೆ ಜಟಾಪಟಿ:

ಪ್ರತಿಭಟನಾನಿರತ ವಿದ್ಯಾರ್ಥಿಗಳ ಜತೆ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಬಳಿಕ ಭಾನುವಾರ, ಜೆಪಿಎಸ್‌ಸಿ ನಡೆಸಿದ್ದ 14ನೇ ಜೆಪಿಎಸ್ಸಿ ಪರೀಕ್ಷೆ, ಜೆಪಿಎಸ್ಸಿ ಬ್ಯಾಕ್‌ಲಾಗ್‌ ಪರೀಕ್ಷೆ-2023 ಮತ್ತು ಬ್ಯಾಕ್‌ಲಾಗ್ ಪರೀಕ್ಷೆ-2025 ಅನ್ನು ರದ್ದುಪಡಿಸುವುದಾಗಿ ಸರ್ಕಾರ ವಾಗ್ದಾನ ನೀಡಿತ್ತು. ಇ.ಡಿ. ಹಾಗೂ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ, ಸಿಜಿಎಲ್‌ ಪರೀಕ್ಷಾ ರದ್ದತಿ ಮತ್ತು ಸಿಬಿಐ ತನಿಖೆ ಸಾಧ್ಯವಿಲ್ಲ ಎಂದು ತಿಳಿಸಿತ್ತು. ಅಲ್ಲದೆ ಪರೀಕ್ಷಾರ್ಥಿಗಳ ವಯೋಮಿತಿ ಸಡಿಲಿಕೆ ಬಗ್ಗೆ ಒಮ್ಮತ ವ್ಯಕ್ತವಾಗಿರಲಿಲ್ಲ. ಹೀಗಾಗಿ ವಿಧಾನಸೌಧ ಚಲೋ ನಡೆಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದರು.

ಈ ನಡುವೆ, ಪರೀಕ್ಷಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಆರಂಭಿಸಿದೆ.

ಬಿಜೆಪಿಯಿಂದ ಪ್ರತಿಭಟನೆ ಹೈಜಾಕ್‌!:

ಏತನ್ಮಧ್ಯೆ, ‘ಉದ್ಯೋಗಾಕಾಂಕ್ಷಿಗಳ ಶೇ.95ರಷ್ಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದರೂ ಅವರು ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ. ಬಿಜೆಪಿ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಈ ಪ್ರತಿಭಟನೆಯನ್ನು ಹೈಜಾಕ್ (ವಶಕ್ಕೆ) ಮಾಡಿದೆ’ ಎಂದು ರಾಜ್ಯ ಸಚಿವ ಸುದಿವ್ಯ ಕುಮಾರ್ ಆರೋಪಿಸಿದ್ದಾರೆ.

==