ದುಬೈ: ಅಮೆರಿಕದ ಭಾರೀ ಬಾಂಬ್ ದಾಳಿ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮೇಲೆ ‘ಟ್ರೂ ಪ್ರಾಮಿಸ್ 3’ ಹೆಸರಲ್ಲಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಅದರ ಬೆನ್ನಲ್ಲೇ ಇರಾನ್‌ನ ಫೋರ್ಡೋ ಪರಮಾಣು ನೆಲೆ, 6 ವಿಮಾನ ನಿಲ್ದಾಣ, ರೆವಲ್ಯೂಷನರಿ ಗಾರ್ಡ್ಸ್ ಕಚೇರಿ, ಕುಖ್ಯಾತಿ ಇವಿನ್ ಜೈಲಿನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ 15 ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮುಗಿಲೆತ್ತರದ ಕಪ್ಪುಹೊಗೆ ಕಂಡುಬಂದಿದೆ.
ಇರಾನ್ ದಾಳಿ:
ಅಮೆರಿಕದ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್, ಸೋಮವಾರ ಇಸ್ರೇಲ್ ರಾಜಧಾನಿ ಟೆಲ್ ಅವಿವ್, ಹಫಿಯಾ ಸೇರಿ ಹಲವು ನಗರಗಳ ಆಯಕಟ್ಟಿನ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಪವಿತ್ರ ನಗರಿ ಜೆರುಸಲೆಂನಲ್ಲೂ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ.
ದಾಳಿ ತೀವ್ರಗೊಳಿಸಿದ ಇಸ್ರೇಲ್:
ಈ ನಡುವೆ ಇರಾನ್ ವಿರುದ್ಧ ಸೋಮವಾರ ತೀವ್ರ ಪ್ರತಿದಾಳಿ ಸಂಘಟಿಸಿರುವ ಇಸ್ರೇಲ್ ಶತ್ರು ದೇಶದ ವಾಯುಸೇನೆಯ ನಡುಮುರಿಯಲೆತ್ನಿಸಿದೆ. ಪೂರ್ವ, ಪಶ್ಚಿಮ ಮತ್ತು ಕೇಂದ್ರ ಇರಾನ್‌ನಲ್ಲಿರುವ ಆರು ಏರ್ಪೋರ್ಟ್‌ಗಳು ಸೇರಿ ಪ್ರಮುಖ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದೆ. ಈ ವೇಳೆ ಏರ್ಪೋರ್ಟ್‌ನ ಭೂಗತ ಕಟ್ಟಡಗಳಲ್ಲಿ ಇರಿಸಿದ್ದ ಇಂಧನ ಮರುಪೂರಣ ವಿಮಾನ, ಎಫ್.-14, ಎಫ್-5 ಮತ್ತು ಎಎಚ್-1 ಯುದ್ಧ ವಿಮಾನಗಳು ಸೇರಿ ಒಟ್ಟು 15 ವಿಮಾನಗಳು, ಒಂದು ಹೆಲಿಕಾಪ್ಟರ್‌ಗೆ ಭಾರೀ ಹಾನಿಯಾಗಿದೆ.ಜತೆಗೆ, ಟೆಹ್ರಾನ್‌ನ ಪ್ಯಾಲೆಸ್ತೇನ್ ಸ್ವ್ಕೇರ್, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಮತ್ತು ಇತರೆ ಪ್ರಾದೇಶಿಕ ಭದ್ರತಾ ಪಡೆಗಳ ಕಮಾಂಡ್ ಸೆಂಟರ್‌ಗಳ ಮೇಲೂ ದಾಳಿ ನಡೆಸಿದೆ.
ಅಣುನೆಲೆ ಮೇಲೆ ಮತ್ತೆ ದಾಳಿ:
ಇನ್ನು ಭಾನುವಾರ ಅಮೆರಿಕ ಬಾಂಬ್ ಹಾಕಿದ್ದ ಫೋರ್ಡೋ ಪರಮಾಣು ಕೇಂದ್ರ ಮತ್ತು ಅದನ್ನು ಸಂಪರ್ಕಿಸುವ ರಸ್ತೆಗಳ ಮೇಲೂ ಇಸ್ರೇಲ್ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಫೋರ್ಡೋ ಕೇಂದ್ರಕ್ಕೆ ಸಂಪರ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದೆ.ಜೈಲ್‌ಗೂ ದಾಳಿ ಬಿಸಿ:
ಟೆಹ್ರಾನ್‌ನಲ್ಲಿರುವ ವಿದೇಶಿಗರು ಮತ್ತು ರಾಜಕೀಯ ಕೈದಿಗಳನ್ನಿರಿಸಿರುವ ನಟೋರಿಯಸ್ ಇವಿನ್ ಜೈಲಿನ ಗೇಟ್ ಮೇಲೂ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಈ ಜೈಲಲ್ಲಿ ವಿದೇಶಿಗರು, ರಾಜಕೀಯ ಕೈದಿಗಳನ್ನು ಇಡಲಾಗಿದ್ದು, ಅವರನ್ನು ಮುಂದಿಟ್ಟುಕೊಂಡು ಇರಾನ್ ಆಡಳಿತವು ಪಾಶ್ಚಿಮಾತ್ಯ ದೇಶಗಳ ಜತೆಗೆ ಸಂಧಾನದ ಮಾತುಕತೆ ನಡೆಸುತ್ತಿತ್ತು ಎಂದು ಹೇಳಲಾಗಿದೆ. ಖೈಬರ್ ಕ್ಷಿಪಣಿಯಿಂದ ದಾಳಿ:
ಇಸ್ರೇಲ್ ಮೇಲೆ ಇದೇ ಮೊದಲ ಬಾರಿಗೆ ಹಲವು ಸಿಡಿತಲೆಗಳನ್ನು ಹೊಂದಿರುವ ಖೈಬರ್ ಕ್ಷಿಪಣಿ ಬಳಸಿ ಭಾರೀ ನಡೆಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಇಸ್ರೇಲ್‌ನ ಟೆಲ್‌ಅವೀಲ್, ಹಫಿಯಾ, ಇತರೆಡೆ ಕೆಲಕಟ್ಟಡಗಳಿಗೆ ಹಾನಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇರಾನ್ ದಾಳಿಗೆ ಅಶ್‌ಹೋಡ್ ವಿದ್ಯುತ್ ಘಟಕಕ್ಕೂ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಎಲ್ಲಾ ಸೇನಾ ನೆಲೆ ಸುತ್ತ ತೆರವು ಶುರು ಇರಾನ್ ದಾಳಿ ಬೆನ್ನಲ್ಲಿ ಮುನ್ನೆಚ್ಚರಿಕೆ ಕ್ರಮ
ವಾಷಿಂಗ್ಟನ್: ಇರಾನ್‌ನ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಕಡೆಯಿಂದ ಭಾರೀ ಪ್ರತಿದಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ದೇಶಗಳಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳ ಸುತ್ತ ತೆರವಿಗೆ ಅಮೆರಿಕ ಮುಂದಾಗಿದೆ.ಈಗಾಗಲೇ ಸಿರಿಯಾ, ಕತಾರ್, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಜಾಗೃತವಾಗಿರುವ ದೊಡ್ಡಣ್ಣ ಮುನ್ನೆಚ್ಚರಿಕಾ ಕ್ರಮವಾಗಿ, ಅನ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಬಹ್ರೈನ್, ಕುವೈತ್, ಯುಎಇ, ಸೌದಿ ಅರೇಬಿಯಾ, ಜೋರ್ಡನ್, ಈಜಿಪ್ಟ್‌ನಲ್ಲಿರುವ ತನ್ನೆಲ್ಲಾ ಸೇನಾ ನೆಲಗಳ ಸುತ್ತಲಿನ 1. ಕಿ.ಮೀ. ಪ್ರದೇಶವನ್ನು ತುರ್ತಾಗಿ ತೆರವು ಮಾಡುವಂತೆ ಸೂಚಿಸಿದೆ. ಜತೆಗೆ, ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಗಳನ್ನೂ ಸಕ್ರಿಯಗೊಳಿಸಿದೆ.
ಒಟ್ಟು 51 ದೇಶಗಳಲ್ಲಿ ಅಮೆರಿಕದ 128 ಸೇನಾ ನೆಲೆಗಳಿವೆ. ಕುವೈತ್, ಇರಾಕ್‌ನಲ್ಲಿ 3, ಯುಎಇ, ಈಜಿಪ್ಟ್ ಮತ್ತು ಸೌದಿ ಅರೇಬಿಯಾದಲ್ಲಿ 2, ಕತಾರ್, ಸಿರಿಯಾ, ಜೋರ್ಡನ್ ಮತ್ತು ಬಹ್ರೈನ್‌ನಲ್ಲಿ 1 ಅಮೆರಿಕದ ನೆಲೆಗಳಿವೆ.
ಇರಾನ್‌ನಲ್ಲಿ ನಾಯಕತ್ವ ಬದಲು ಅಮೆರಿಕ ಗುರಿ?
ವಾಷಿಂಗ್ಟನ್: ‘ಇರಾನ್ ಅಣ್ವಸ್ತ್ರ ನೆಲೆಗಳ ನಾಶವಷ್ಟೇ ನಮ್ಮ ಗುರಿ , ಅಲ್ಲಿನ ನಾಯಕತ್ವ ಬದಲು ಅಲ್ಲ’ ಎಂದಿದ್ದ ಅಮೆರಿಕ ಇದೀಗ ತನ್ನ ಹೊಸ ವರಸೆ ತೋರಿಸಿದೆ. ‘ಇರಾನ್‌ನ ನಾಯಕತ್ವ ಯಾಕೆ ಬದಲಾಗಬಾರದು’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಈ ಮೂಲಕ ಇರಾನ್‌ನ ಪರಮೋಚ್ಚ ನಾಯಕ ಖಮೇನಿಯೇ ಅಮೆರಿಕದ ಮುಂದಿನ ಗುರಿ ಎಂಬ ಸುಳಿವು ನೀಡಿದ್ದಾರೆ.
ಇರಾನ್ ನಾಯಕತ್ವ ಬದಲಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ ಆಡಳಿತ ಬದಲಾವಣೆ ಎನ್ನುವ ಪದವನ್ನು ಬಳಸುವುದು ರಾಜಕೀಯವಾಗಿ ಸರಿಯಲ್ಲ. ಆದರೆ ಇರಾನ್ ಪ್ರಸ್ತುತ ಆಡಳಿತ ಅಸ್ಥಿರವಾಗಿದೆ. ಹೀಗಾಗಿ ಇರಾನ್‌ನನ್ನು ಮತ್ತೆ ಶ್ರೇಷ್ಠಗೊಳಿಸಲು ಆಡಳಿತದಲ್ಲಿ ಬದಲಾವಣೆ ಏಕೆ ಆಗಬಾರದು?’ ಎಂದು ಪ್ರಶ್ನಿಸಿದ್ದಾರೆ.
ಇರಾನ್‌ಗೆ ನೆರವು ನೀಡಲು ನಾವು ಸದಾ ಸಿದ್ಧ: ರಷ್ಯಾ
ಮಾಸ್ಕೋ: ಪ್ರಸ್ತುತ ಇಸ್ರೇಲ್ ಜತೆಗೆ ಕಾಳಗಕ್ಕಿಳಿದಿರುವ ಇರಾನ್‌ಗೆ ಹಲವು ವಿಧಗಳಲ್ಲಿ ಸಹಾಯ ಮಾಡಲು ಸಿದ್ಧ ಎಂದು ರಷ್ಯಾ ಹೇಳಿದೆ.
ಇರಾನ್‌ನ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ಮಾಡುತ್ತಿದ್ದಂತೆ, ಅದರ ಬದ್ಧವೈರಿ ರಷ್ಯಾ ಕೂಡ ಕದನಪ್ರವೇಶ ಮಾಡುವ ನಿರೀಕ್ಷೆಯಿತ್ತು. ಈ ಬಗ್ಗೆ ಅಧ್ಯಕ್ಷ ಪುಟಿನ್ ನಿವಾಸವಾದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, ‘ಇರಾನ್‌ಗೆ ಯಾವ ರೀತಿಯ ಸಹಾಯವನ್ನಾದರೂ ಮಾಡಲು ಸಿದ್ಧ.
ಈಗಾಗಲೇ ಮದ್ಯಸ್ಥಿಕೆ ವಹಿಸುವ ಬಗ್ಗೆ ಪ್ರಸ್ತಾಪಿಸಿದ್ದೇವೆ. ಇದೂ ಸಹ ಮಹತ್ವದ್ದು’ ಎಂದು ಹೇಳಿದ್ದಾರೆ.ಅತ್ತ ರಷ್ಯಾ ನೇರವಾಗಿ ಯುದ್ಧಕ್ಕೆ ಇಳಿಯದಿರುವುದಕ್ಕೆ ಕಾರಣ ತಿಳಿಸಿರುವ ಪುಟಿನ್, ‘20 ಲಕ್ಷ ರಷ್ಯನ್ನರು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳ ಜತೆ ನಮಗೆ ಸುದೀರ್ಘವಾದ ಸಂಬಂಧವಿದೆ. ರಷ್ಯಾದ ಜನಸಂಖ್ಯೆಯಲ್ಲಿ ಶೇ.15ರಷ್ಟು ಮುಸಲ್ಮಾನರಿದ್ದಾರೆ’ ಎಂದು ಹೇಳಿದ್ದಾರೆ. ಜತೆಗೆ, ಯುದ್ಧದಲ್ಲಿ ಇರಾನ್ ಪರವಾಗಿ ಪ್ರವೇಶಿಸಿದ್ದಕ್ಕೆ ರಷ್ಯಾದ ನಿಷ್ಠೆಯನ್ನು ಪ್ರಶ್ನಿಸಿದವರನ್ನು ಅವರು ‘ಪ್ರಚೋದಕರು’ ಎಂದು ಕರೆದಿದ್ದಾರೆ.