ರಾಮಸೇತುವಿನ ಮತ್ತಷ್ಟು ರಹಸ್ಯ ಬಿಚ್ಚಿಟ್ಟ ಇಸ್ರೋ!

KannadaprabhaNewsNetwork |  
Published : Jul 11, 2024, 01:30 AM ISTUpdated : Jul 11, 2024, 05:09 AM IST
ಇಸ್ರೋ | Kannada Prabha

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಪುರಾತನ ‘ರಾಮ ಸೇತು’ವಿನ ಕುರಿತಾದ ಮತ್ತಷ್ಟು ರಹಸ್ಯಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ.

ರಾಮೇಶ್ವರಂ (ತಮಿಳುನಾಡು): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಪುರಾತನ ‘ರಾಮ ಸೇತು’ವಿನ ಕುರಿತಾದ ಮತ್ತಷ್ಟು ರಹಸ್ಯಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ.

ರಾಮಸೇತುವಿನ ಕುರಿತು ಇಸ್ರೋ ಹೊಸ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ಒಂದು ಕಾಲದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಭೂ ಸಂಪರ್ಕವಾಗಿದ್ದ ಆಡಮ್ಸ್ ಬ್ರಿಡ್ಜ್ ಅಥವಾ ರಾಮಸೇತುವಿನ ಮೂಲವನ್ನು ದೃಢಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.

 ‘ಸೈಂಟಿಫಿಕ್ ರಿಪೋರ್ಟ್ಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇಸ್ರೋ ವಿಜ್ಞಾನಿಗಳು ಅಮೆರಿಕದ ‘ಐಸಿಇಸ್ಯಾಟ್‌-2’ ಉಪಗ್ರಹದ ಸುಧಾರಿತ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಮುಳುಗಿದ ಸೇತುವೆಯ ಹೆಚ್ಚಿನ ರೆಸಲ್ಯೂಶನ್ (10 ಮೀ. ರೆಸಲ್ಯೂಶನ್) ನಕ್ಷೆಯನ್ನು ರಚಿಸಿದ್ದಾರೆ. ಅಕ್ಟೋಬರ್ 2018ರಿಂದ ಅಕ್ಟೋಬರ್ 2023ರವರೆಗೆ ಅಧ್ಯಯನ ಮಾಡಲಾಗಿದೆ.

ಗಿರಿಬಾಬು ದಂಡಬಾತುಲ ನೇತೃತ್ವದ ಸಂಶೋಧನಾ ತಂಡವು ನೀರೊಳಗಿನ ವಿವರವಾದ ನಕ್ಷೆಯು ಧನುಷ್ಕೋಡಿಯಿಂದ ತಲೈಮನ್ನಾರ್‌ವರೆಗಿನ ಸೇತುವೆಯ ಸಂಪರ್ಕವನ್ನು ಸಾಬೀತುಪಡಿಸಿದೆ. ಈ ಪೈಕಿ ಶೇ. 99.98ರಷ್ಟು ಭಾಗ ಆಳವಿಲ್ಲದ ನೀರಿನಲ್ಲಿ ಮುಳುಗಿದೆ. ಜೊತೆಗೆ ಮನ್ನಾರ್ ಕೊಲ್ಲಿ ಮತ್ತು ಪಾಕ್ ಜಲಸಂಧಿ ನಡುವೆ 11 ಕಿರಿದಾದ ಕಾಲುವೆಗಳನ್ನು ಕಂಡುಹಿಡಿದಿದೆ. ಈ ಕಾಲುವೆಗಳು ಸಮುದ್ರದ ಅಲೆಗಳಿಂದ ರಾಮಸೇತುವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ರಾಮಸೇತು ಇತಿಹಾಸ:ಮುಳುಗಿದ ರಚನೆಯನ್ನು ಈಸ್ಟ್ ಇಂಡಿಯಾ ಕಂಪನಿಯು ಆಡಮ್ಸ್ ಬ್ರಿಡ್ಜ್ ಎಂದು ಕರೆದಿತ್ತು. ಆದರೆ ಭಾರತೀಯರು ಇದನ್ನು ರಾಮಸೇತು ಎನ್ನುತ್ತಾರೆ. ರಾಮಾಯಣದಲ್ಲಿ ರಾಮನ ವಾನರಸೇನೆಯು, ರಾವಣನ ರಾಜ್ಯವಾದ ಶ್ರೀಲಂಕಾವನ್ನು ತಲುಪಲು ಈ ಸೇತುವೆ ನಿರ್ಮಿಸಿತ್ತು. ರಾವಣದಿಂದ ಅಪಹರಣಕ್ಕೆ ಒಳಗಾಗಿದ್ದ ರಾಮನ ಹೆಂಡತಿ ಸೀತೆಯನ್ನು ರಕ್ಷಿಸಲು ವಾನರ ಸೇನೆಯು ಈ ಸೇತುವೆ ಮೂಲಕ ಲಂಕೆ ತಲುಪಿತ್ತು ಎಂದು ಉಲ್ಲೇಖಿಸಲಾಗಿದೆ.

ಕ್ರಿ.ಶ. 9ನೇ ಶತಮಾನದಲ್ಲಿ ಪರ್ಷಿಯನ್ ನಾವಿಕರು ಈ ಸೇತುವೆಯನ್ನು ಸೇತು ಬಂಧೈ ಅಥವಾ ಸಮುದ್ರದ ಮೇಲಿನ ಸೇತುವೆ ಎಂದು ಉಲ್ಲೇಖಿಸಿದ್ದಾರೆ. ರಾಮೇಶ್ವರಂ ದೇವಾಲಯದ ದಾಖಲೆಗಳು, ಸೇತುವೆಯು ಕ್ರಿ. ಶ. 1480 ರವರೆಗೂ ಸಮುದ್ರ ಮಟ್ಟಕ್ಕಿಂತ ಮೇಲಿತ್ತು. ಆದರೆ ಅದು ಪ್ರಬಲವಾದ ಚಂಡಮಾರುತದಿಂದ ಧ್ವಂಸವಾಗಿತ್ತು ಎಂದು ಸೂಚಿಸುತ್ತವೆ

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ