ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪಾಕಿಸ್ತಾನದ ಐಎಸ್‌ಐ ಗುರಿಯಾಗಿಸಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಇದರ ಬೆನ್ನಲ್ಲೇ ದೆಹಲಿ ಮತ್ತು ಭೋಪಾಲ್‌ನಲ್ಲಿರುವ ಸಚಿವರ ನಿವಾಸಗಳಿಗೆ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

ನವದೆಹಲಿ/ಭೋಪಾಲ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪಾಕಿಸ್ತಾನದ ಐಎಸ್‌ಐ ಗುರಿಯಾಗಿಸಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಇದರ ಬೆನ್ನಲ್ಲೇ ದೆಹಲಿ ಮತ್ತು ಭೋಪಾಲ್‌ನಲ್ಲಿರುವ ಸಚಿವರ ನಿವಾಸಗಳಿಗೆ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

ಜೊತೆಗೆ ಈಗಾಗಲೇ ‘ಝಡ್‌’ ಭದ್ರತೆ ಹೊಂದಿರುವ ಚೌಹಾಣ್‌ ಅವರಿಗೆ ಮತ್ತಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚೌಹಾಣ್‌ ಅವರನ್ನು ಪಾಕ್‌ನ ಐಎಸ್‌ಐ ಗುರಿ ಮಾಡಿದೆ ಎಂಬ ಮಾಹಿತಿ ಲಭಿಸಿದ ತಕ್ಷಣವೇ ಕೇಂದ್ರ ಗೃಹ ಇಲಾಖೆಯು ಕೂಡಲೇ ಮಧ್ಯ ಪ್ರದೇಶ ಡಿಜಿಪಿ ಮತ್ತು ದೆಹಲಿಯ ವಿಶೇಷ ಕಮಿಷನರ್‌ರಿಗೆ ಪತ್ರ ಬರೆದು ಭದ್ರತೆ ಹೆಚ್ಚಿಸುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ಮತ್ತಷ್ಟು ಬ್ಯಾರಿಕೇಡ್‌ ಹಾಕಿ ಸಂದರ್ಶಕರ ಪರಿಶೀಲನೆ ನಡೆಸಲಾಗುತ್ತಿದೆ.

==

ತಮಿಳುನಾಡು ರೈತರ ಜೊತೆ ಪ್ರಧಾನಿ ಮೋದಿ ಸಂಕ್ರಾಂತಿ ಆಚರಣೆ?

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಜ.13-15ರವರೆಗೆ ತಮಿಳುನಾಡಿನ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ರೈತರೊಂದಿಗೆ ಪೊಂಗಲ್‌ ಹಬ್ಬವನ್ನು ಆಚರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.ತಮಿಳ್ನಾಡು ಭೇಟಿ ವೇಳೆ ಅವರು ರಾಮೇಶ್ವರದಲ್ಲಿ ನಡೆಯಲಿರುವ ಕಾಶಿ ತಮಿಳ್‌ ಸಂಗಮಂ 4.0 ಸಮಾರೋಪದಲ್ಲಿ ಹಾಗೂ ಇತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ರೈತರ ಜತೆ ಪೊಂಗಲ್‌ ಆಚರಿಸಲಿದ್ದಾರೆ ಎಂದು ಹೇಳಲಾಗಿದೆ.

2026ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ತಮಿಳುನಾಡಿನಲ್ಲಿ ಪ್ರಧಾನಿ ಭೇಟಿಯು ಬಹುಮುಖ್ಯ ಪಾತ್ರ ವಹಿಸಲಿದೆ. ಭೇಟಿ ವೇಳೆ ಅವರು ಹಲವು ರಾಜ್ಯ ನಾಯಕರೊಂದಿಗೆ ಬಿಜೆಪಿ ಜತೆ ಮೈತ್ರಿ ಕುರಿತು ಚರ್ಚೆ ನಡೆಸಬಹುದು . ತಮಿಳುನಾಡಿನ ಗ್ರಾಮೀಣ ಮತ್ತು ರೈತಾಪಿ ವರ್ಗದ ಮತ ಸೆಳೆಯಲೂ ಮುಂದಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

==

ಭಾರತಕ್ಕೆ ಶೀಘ್ರ ಹೊಸ ಪ್ರಧಾನಿ: ಕಾಂಗ್ರೆಸ್ಸಿಗ ಚವಾಣ್‌ ಬಾಂಬ್

ಪುಣೆ: ‘ಡಿ.19ಕ್ಕೆ ಅಮೆರಿಕದಲ್ಲಿ ವಿವಾದಾತ್ಮಕ ಜೆಫ್ರಿ ಎಪ್‌ಸ್ಟೀನ್‌ ಲೈಂಗಿಕ ಕಡತಗಳು ಬಿಡುಗಡೆಯಾಗಲಿವೆ. ಅದು ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಹಾಗೇನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ. ಮಹಾರಾಷ್ಟ್ರದಿಂದಲೇ ಒಬ್ಬರು ಪ್ರಧಾನಿಯಾಗುವ ಸಾಧ್ಯತೆಯಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚವಾಣ್ ಹೊಸ ಬಾಂಬ್‌ ಸಿಡಿಸಿದ್ದಾರೆ.ಜೆಫ್ರಿ ಎಪ್‌ಸ್ಟೀನ್ ಅಮೆರಿಕದ ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ 2019ರಲ್ಲಿ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ್ದ. ಆತನ ಲೈಂಗಿಕ ಹಗರಣಗಳ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ. ಇದರಲ್ಲಿ ಅನೇಕ ಗಣ್ಯರ ಹೆಸರಿವೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಚವಾಣ್‌ ಈ ಹೇಳಿಕೆ ನೀಡಿದ್ದಾರೆ.