ನವದೆಹಲಿ: ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿವೆ. ದೇಶಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಈ ನಾಲ್ಕೂ ರಾಜ್ಯಗಳ ಚುನಾವಣೆ ಮಹತ್ವದ್ದಾಗಿದೆ. ಆದರೆ, ಮೈತ್ರಿ ಕುರಿತ ಗೊಂದಲ, ಪಕ್ಷದ ನಾಯಕರ ನಡುವಿನ ಆಂತರಿಕ ಕಚ್ಚಾಟದಿಂದಾಗಿ ಕಾಂಗ್ರೆಸ್ ಈ ನಾಲ್ಕೂ ರಾಜ್ಯಗಳಲ್ಲಿ ತನ್ನದೇ ಆದ ಸಮಸ್ಯೆ ಎದುರಿಸುತ್ತಿದೆ.
ಕೇರಳದಲ್ಲಿ ಮಣಿಶಂಕರ್ ಅಯ್ಯರ್ ಶಾಕ್
ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರವನ್ನು ಕೆಳಗಿಳಿಸಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆ ತೀವ್ರ ಇರಿಸು ಮುರುಸು ಉಂಟು ಮಾಡಿದೆ. ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದಾಗಿ ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಯ್ಯರ್ ಭಾನುವಾರ ಹೇಳಿಕೆ ನೀಡಿದ್ದರು. ಜತೆಗೆ ಪಿಣರಾಯ್ ಕಾರ್ಯಗಳನ್ನೂ ಹೊಗಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಅಯ್ಯರ್ ಹೇಳಿಕೆಯನ್ನು ಚುನಾವಣಾ ಲಾಭಕ್ಕೆ ಎಲ್‌ಡಿಎಫ್ ಬಳಸಿಕೊಳ್ಳುವ ಆತಂಕ ಶುರುವಾಗಿದೆ.
ಅಸ್ಸಾನಲ್ಲಿ ಆಂತರಿಕ ಫೈಟ್
ಅಸ್ಸಾಂ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿದೆ ಎನ್ನುವಾಗಲೇ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭುಪೇನ್ ಕುಮಾರ್ ಬೋರಾಹ್ ಅವರು ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದು, ವರಿಷ್ಠರ ಮನವೊಲಿಕೆ ಬಳಿಕ ನಿಲುವು ಬದಲಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ. ಸಂಸದ ಗೌರವ್ ಗಗೋಯ್ ಅವರ ಅತಿಯಾದ ಮಧ್ಯಪ್ರವೇಶದಿಂದ ಬೇಸತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಗಗೋಯ್ ಸೇರಿ ಹಲವು ಮುಖಂಡರು, ವರಿಷ್ಠರ ಮನವೊಲಿಕೆ ಬಳಿಕ ತಮ್ಮ ನಿರ್ಧಾರ ಬದಲಿಸಿದ್ದಾರೆ. ಈ ನಡುವೆ, ಎಡಪಕ್ಷಗಳ ಜತೆಗಿನ ಸೀಟು ಹಂಚಿಕೆ ವಿಚಾರವೂ ಕಾಂಗ್ರೆಸ್ ಪಾಲಿಗೆ ಇಲ್ಲಿ ತಲೆನೋವಾಗಿದೆ.
ತಮಿಳುನಾಡಲ್ಲಿ ಡಿಎಂಕೆ ಜತೆ ಕಿತ್ತಾಟ
ತಮಿಳುನಾಡಿನಲ್ಲಿ ಮಿತ್ರಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಅಧಿಕಾರ ಹಂಚಿಕೆ, ಸೀಟು ಹಂಚಿಕೆ ವಿಚಾರವಾಗಿ ಚುನಾವಣೆಗೆ ಮುನ್ನವೇ ಅಪಸ್ವರ ಶುರುವಾಗಿದೆ. ಡಿಎಂಕೆ ಸರ್ಕಾರದ ಕೆಲ ನಿರ್ಧಾರಗಳನ್ನು ಬಹಿರಂಗವಾಗಿಯೇ ಟೀಕಿಸುತ್ತಿರುವ ಸ್ಥಳೀಯ ನಾಯಕರು ಈ ಬಾರಿ ನಟ ವಿಜಯ್ ಅವರ ಟಿವಿಕೆ ಪಕ್ಷದ ಜತೆಗೆ ಮೈತ್ರಿಮಾಡಿಕೊಳ್ಳುವಂತೆ ವರಿಷ್ಠರಿಗೆ ಕೋರಿದ್ದಾರೆ. ಡಿಎಂಕೆ ಜತೆಗಿನ ಮೈತ್ರಿಗೆ ಪಕ್ಷದ ಸಂಸದ ಮಣಿಕಂ ಟಾಗೋರ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತ್ರ ಅಧಿಕಾರ ಹಂಚಿಕೆ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವುದು. ಕೈ ನಾಯಕರ ಕಣ್ಣುಕೆಂಪು ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಏಕಾಂಗಿ ಹೋರಾಟ
ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಮತ್ತೊಂದು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಮೂಲಕ ಹಿಂದಿನಿಂದ ಎಡಪಕ್ಷಗಳ ಜತೆ ಮಾಡಿಕೊಂಡು ಬಂದಿದ್ದ ಮೈತ್ರಿಯನ್ನು ಮುರಿಯಲೂ ಮುಂದಾಗಿದೆ. ಮೈತ್ರಿ ವಿಚಾರವಾಗಿ ಪಕ್ಷದೊಳಗೆ ಮೂಡದ ಒಮ್ಮತದಿಂದಾಗಿ ಇಂಥ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಇಂಡಿಯಾ ಒಕ್ಕೂಟದ ಭಾಗವಾಗಿರುವ ಮತ್ತೊಂದು ಮಿತ್ರಪಕ್ಷವಾದ ತೃಣಮೂಲ ಕಾಂಗ್ರೆಸ್ ಕೂಡ ಚುನಾವಣಾ ಪೂರ್ವ ಮೈತ್ರಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿದೆ.
