ಶ್ರೀಹರಿಕೋಟಾ : ಭಾರತೀಯ ನೆಲದಿಂದ ಉಡಾವಣೆಯಾಗುತ್ತಿರುವ ಅತಿ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 4410 ಕೇಜಿ ತೂಕದ ಇಸ್ರೋ ನಿರ್ಮಿತ ಸಿಎಂಎಸ್-3 ಉಪಗ್ರಹ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾನುವಾರ ಸಂಜೆ 5.26ಕ್ಕೆ ಉಡಾವಣೆಯಾಗಿ, ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ. ‘ಬಾಹುಬಲಿ’ ಎಂದೇ ಕರೆಯಲ್ಪಡುವ 43.5 ಮೀ. ಉದ್ದದ ಬಲಿಷ್ಠ ಎಲ್‌ವಿಎಂ3-ಎಂ5 ರಾಕೆಟ್, 4,410 ಕೆಜಿ ತೂಕದ ಸಿಎಂಎಸ್-3 ಉಪಗ್ರಹವನ್ನು ಹೊತ್ತು ಶ್ರೀಹರಿಕೋಟಾದ 2ನೇ ಉಡಾವಣಾ ವೇದಿಕೆಯಿಂದ ನಭಕ್ಕೆ ಜಿಗಿಯಿತು. ಈ ವೇಳೆ ರಾಕೆಟ್‌ನ ಬಾಲದಿಂದ ಉತ್ಪತ್ತಿಯಾದ ಗಾಢ ಕೇಸರಿ ಬಣ್ಣದ ಹೊಗೆ ಗಮನ ಸೆಳೆಯಿತು. ನಂತರ ಉದ್ದೇಶಿತ ಭೂಸ್ಥಿರ ವರ್ಗಾವಣೆ ಕಕ್ಷೆಗೆ (ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್) ಉಪಗ್ರಹವನ್ನು ಕೂರಿಸುವಲ್ಲಿ ಯಶಸ್ವಿಯಾಯಿತು.
ಉಡಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಮತ್ತೊಂದು ಹೆಮ್ಮೆ ಎಂದಿದ್ದಾರೆ.
ಈ ನಡುವೆ ಮಾತನಾಡಿದ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ‘ಉಡಾವಣಾ ವಾಹನವು ಉಪಗ್ರಹವನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಕೂರಿಸಿದೆ. ಈ ರಾಕೆಟ್‌ನ ಹಿಂದಿನ ಉಡಾವಣೆಯಾದ ಚಂದ್ರಯಾನ-3 ದೇಶಕ್ಕೆ ಹೆಮ್ಮೆ ತಂದಿತ್ತು. ಈಗ ಅತಿ ಭಾರದ ಉಪಗ್ರಹವನ್ನು ಕೊಂಡೊಯ್ಯುವ ಮೂಲಕ ಮತ್ತೊಂದು ಹೆಮ್ಮೆ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಸಿಎಂಎಸ್-03 ಉಪಗ್ರಹವು ಸಾಗರ ಪ್ರದೇಶಗಳಿಗೆ ನಿಖರವಾದ ಸಂವಹನ ಸೇವೆಗಳನ್ನು ಒದಗಿಸುತ್ತದೆ. ನೌಕಾಪಡೆಯ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳ ನಡುವೆ ತತ್‌ಕ್ಷಣ ಧ್ವನಿ, ದತ್ತಾಂಶ ಮತ್ತು ವೀಡಿಯೊ ಸಂಪರ್ಕವನ್ನು ಕಲ್ಪಿಸುತ್ತದೆ. ಸಾಗರ ಪ್ರದೇಶದಲ್ಲಿ ನೌಕೆಗಳ ಚಲನೆಯನ್ನು ಟ್ರ್ಯಾಕ್ ಮಾಡಿ, ಶತ್ರು ಚಟುವಟಿಕೆಗಳನ್ನು ಗಮನಿಸುತ್ತದೆ. ಇದು ಹೈ-ಬ್ಯಾಂಡ್‌ವಿಡ್ತ್ ಇಂಟರ್ನೆಟ್ ಮತ್ತು ಉಪಗ್ರಹ ಟೆಲಿಫೋನ್ ಸೇವೆಯನ್ನು ಸಹ ಒದಗಿಸುತ್ತದೆ. ಒಟ್ಟಿನಲ್ಲಿ ನೌಕಾಪಡೆಯ ಕಣ್ಣು ಮತ್ತು ಕಿವಿಯಂತೆ ಕೆಲಸ ಮಾಡಲಿದ್ದು, ಭಾರತದ ಸಮುದ್ರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲಿದೆ.
ಆತ್ಮನಿರ್ಭರತೆಯತ್ತ ಹೆಜ್ಜೆ
:ಈ ಹಿಂದೆ ಭಾರವಾದ ಉಪಗ್ರಹಗಳನ್ನು ಉಡಾಯಿಸಲು ಫ್ರಾನ್ಸ್‌ನ ಗಯಾನಾದ ಕೌರೌ ಉಡಾವಣಾ ನೆಲೆಯನ್ನು ಇಸ್ರೋ ಬಳಸಿಕೊಳ್ಳುತ್ತಿತ್ತು. 2018ರ ಡಿ.5ರಂದು ತನ್ನ ಅತ್ಯಂತ ಭಾರವಾದ (5854 ಕೆಜಿ) ಸಂವಹನ ಉಪಗ್ರಹವಾದ ಜಿಎಸ್‌ಎಟಿ-11 ಅನ್ನು ಗಯಾನಾದಿಂದ ಉಡಾವಣೆ ಮಾಡಿತ್ತು. ಆದರೆ ಇದೇ ಮೊದಲ ಬಾರಿ 4000 ಕೆಜಿಗಿಂತ ಅಧಿಕ ತೂಕದ ಉಪಗ್ರಹವೊಂದನ್ನು ಭಾರತದ ನೆಲದಿಂದಲೇ ಉಡಾವಣೆ ಮಾಡಲಾಗಿದೆ.
ಎಲ್‌ವಿಎಂ3 ರಾಕೆಟ್:
ಎಲ್‌ವಿಎಂ3 ರಾಕೆಟ್ ಭಾರತದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನ. ಇದನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಭೂಸ್ಥಿರ ವರ್ಗಾವಣೆ ಕಕ್ಷೆಗೆ (ಜಿಟಿಒ) 4,000 ಕೆಜಿ ಮತ್ತು ಕಡಿಮೆ ಭೂಕಕ್ಷೆಗೆ (ಎಲ್‌ಇಒ) 8,000 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು.