ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ ಭಾರತ ಉಪಗ್ರಹ ಉಡಾವಣೆ

KannadaprabhaNewsNetwork |  
Published : Jan 04, 2024, 01:45 AM IST
ರಾಕೆಟ್‌ ಉಡಾವಣೆ | Kannada Prabha

ಸಾರಾಂಶ

ಇದೇ ಮೊದಲ ಬಾರಿಗೆ ಇಸ್ರೋದಿಂದ ಫಾಲ್ಕನ್‌-9 ರಾಕೆಟ್‌ ಬಳಕೆ ಮಾಡಿದ್ದು, ಜಿಸ್ಯಾಟ್‌-20 ಉಪಗ್ರಹ ಉಡಾವಣೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಅದನ್ನು ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಫ್ಲೋರಿಡಾದಿಂದ ಉಡಾವಣೆ ಮಾಡಲಾಗುತ್ತದೆ.

ನವದೆಹಲಿ: ಭಾರತದ ಸಂಪರ್ಕ ಉಪಗ್ರಹವಾದ ಜಿಸ್ಯಾಟ್‌-20 ಉಪಗ್ರಹದ ಉಡಾವಣೆಗಾಗಿ ಇದೇ ಮೊದಲ ಬಾರಿಗೆ ಸ್ಪೇಸ್‌ಎಕ್ಸ್‌ ಸಂಸ್ಥೆಯ ಫಾಲ್ಕನ್‌- 9 ರಾಕೆಟನ್ನು ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ. 230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಫಾಲ್ಕನ್‌-9 ರಾಕೆಟ್‌ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ. ನಮಗೆ ಬೇಕಾದ ಸಮಯದಲ್ಲಿ ಇತರ ರಾಕೆಟ್‌ಗಳು ಲಭ್ಯವಿಲ್ಲದ ಕಾರಣ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥನ್‌ ಹೇಳಿದ್ದಾರೆ. ಇಸ್ರೋದಿಂದ ವಾಣಿಜ್ಯ ಉಡಾವಣೆಗಳನ್ನು ನಡೆಸುವ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದ್ದು, ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಏನಿದು ಜಿಸ್ಯಾಟ್‌-20 ಉಪಗ್ರಹ?

ಉಪಗ್ರಹ ಆಧಾರಿತ ಇಂಟರ್ನೆಟ್‌ ವ್ಯವಸ್ಥೆ ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ ಭಾರತದ ಎಲ್ಲಾ ಪ್ರದೇಶಗಳನ್ನು ಒಳಗೊಳ್ಳುವಂತೆ ಮಾಡಲು ಇಸ್ರೋ ತಯಾರಿಸಿರುವ ಸಂಪರ್ಕ ಉಪಗ್ರಹವೇ ಜಿಸ್ಯಾಟ್‌-20. ಇದು ಸುಮಾರು 4700 ಕೇಜಿ ತೂಕವಿದ್ದು, ಸೆಕೆಂಡಿಗೆ 48 ಜಿಬಿಯಂತೆ ಇಂಟರ್ನೆಟ್‌ ಸೌಲಭ್ಯ ಒದಗಿಸಲಿದೆ. ಅಲ್ಲದೇ ಇದು ಅಂಡಮಾನ್‌ ಮತ್ತು ಲಕ್ಷದ್ವೀಪಗಳನ್ನು ಸಹ ಒಳಗೊಳ್ಳಲಿದೆ ಎಂದು ಎನ್‌ಎಸ್‌ಐಎಲ್‌ ನಿರ್ದೇಶಕ ರಾಧಾಕೃಷ್ಣನ್‌ ದೊರೈರಾಜನ್‌ ಹೇಳಿದ್ದಾರೆ. ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ರಾಕೆಟ್‌ಗಳು ಭಾರತದ ಬಳಿ ಇಲ್ಲ ಎಂಬುದನ್ನು ಈ ಒಪ್ಪಂದ ಬಹಿರಂಗಗೊಳಿಸಿದೆ. ಈ ಮೊದಲು ಅತಿ ಭಾರದ ಉಪಗ್ರಹಗಳನ್ನು ಭಾರತ ಫ್ರಾನ್ಸ್‌ನ ಅರೀನಾಸ್ಪೇಸ್‌ ಸಂಸ್ಥೆಯ ಸಹಯೋಗದೊಂದಿಗೆ ಕೈಗೊಳ್ಳುತ್ತಿತ್ತು. ಇಸ್ರೋದ ಬಾಹುಬಲಿ ಎಂದು ಕರೆಸಿಕೊಳ್ಳುವ ಜಿಎಸ್‌ಎಲ್‌ವಿ ಮಾರ್ಕ್‌3 ಉಪಗ್ರಹಕ್ಕೆ ಈ ಸಾಮರ್ಥ್ಯವಿದ್ದರೂ ದೊಡ್ಡ ಮಟ್ಟದ ಯೋಜನೆಗಳಿಗೆ ಅದನ್ನು ಬಳಸಿಕೊಳ್ಳುತ್ತಿಲ್ಲ. ಅಲ್ಲದೇ ಮುಂದಿನ ತಲೆಮಾರಿನ ರಾಕೆಟ್‌ ಉತ್ಪಾದಕತೆಯಲ್ಲಿ ಇಸ್ರೋ ತೊಡಗಿದ್ದು, ಇದು 10 ಸಾವಿರ ಕೇಜಿಯನ್ನು ಹೊತ್ತೊಯ್ಯಬಲ್ಲದು ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ