ರಾಮಲಲ್ಲಾ ವಿಗ್ರಹ ಆಯ್ಕೆ ಘೋಷಣೆ 17ಕ್ಕೆ: ಟ್ರಸ್ಟ್‌

KannadaprabhaNewsNetwork |  
Published : Jan 03, 2024, 01:45 AM IST
ರಾಮಮಂದಿರ | Kannada Prabha

ಸಾರಾಂಶ

ಡಿ.29ಕ್ಕೆ 11 ಟ್ರಸ್ಟಿಗಳಿಂದ ಮತದಾನ ಮೂಲಕ ವಿಗ್ರಹ ಆಯ್ಕೆ ಮಾಡಲಾಗಿದ್ದು, ಮತದಾನದ ಲಿಖಿತ ಮಾಹಿತಿಯನ್ನು ಟ್ರಸ್ಟ್‌ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಅಂತಿಮ ಆಯ್ಕೆ ಯಾವುದು ಎಂದು ಇನ್ನೂ ಘೋಷಿಸಿಲ್ಲ. ಜ.17ಕ್ಕೆ ರಾಮಲಲ್ಲಾ ಮೂರ್ತಿ ಅನಾವರಣ ಮಾಡಲಾಗುವುದು ಎಂದು ಚಂಪತ್‌ ರಾಯ್‌ ತಿಳಿಸಿದ್ದಾರೆ. ಜೊತೆಗೆ ಕಂಚಿ ಶ್ರೀಗಳ ಜತೆ ಚರ್ಚೆ ಬಳಿಕ ಅಂತಿಮ ಆಯ್ಕೆ ಮಾಡುವುದಾಗಿ ಟ್ರಸ್ಟ್ ಅಧಿಕಾರಿ ಪ್ರಕಾಶ್‌ ಗುಪ್ತಾ ತಿಳಿಸಿದ್ದಾರೆ.

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮ ಲಲ್ಲಾ ವಿಗ್ರಹವನ್ನು ಡಿ.29ರಂದೇ ಆಯ್ಕೆ ಮಾಡಲಾಗಿದೆ. ಆದರೆ ಮೂವರು ಶಿಲ್ಪಿಗಳು ಕೆತ್ತಿದ ವಿಗ್ರಹದಲ್ಲಿ ಯಾವುದನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಘೋಷಿಸಿಲ್ಲ. ಜ.17ರಂದು ವಿಗ್ರಹವನ್ನು ಅಯೋಧ್ಯೆಯಲ್ಲಿ ‘ನಗರ ಯಾತ್ರೆ’ಗೆ ಕರೆದೊಯ್ದಾಗಲೇ ಯಾವ ವಿಗ್ರಹ ಆಯ್ಕೆಯಾಗಿದೆ ಎಂಬುದು ಜನರಿಗೆ ತಿಳಿಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಸ್ಪಷ್ಟಪಡಿಸಿದ್ದಾರೆ.

ಇನ್ನು ಟ್ರಸ್ಟ್‌ ಕಚೇರಿ ಉಸ್ತುವಾರಿ ಅಧಿಕಾರಿ ಪ್ರಕಾಶ್‌ ಗುಪ್ತಾ ಪಿಟಿಐ ಸುದ್ದಿಸಂಸ್ಥೆ ಮಾತನಾಡಿ, ‘ಕಂಚಿ-ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿಗಳ ಸಲಹೆ ಪಡೆದು ಮೂರ್ತಿಯ ಅಂತಿಮ ಆಯ್ಕೆಯನ್ನು ಸೂಕ್ತ ಸಂದರ್ಭದಲ್ಲಿ ಟ್ರಸ್ಟ್‌ ಮಾಡಲಿದೆ. ಇನ್ನೂ ಯಾವುದೇ ಅಂತಿಮ ಆಯ್ಕೆ ನಡೆದಿಲ್ಲ’ ಎಂದಿದ್ದಾರೆ.

ಶ್ರೀರಾಮ ಮಂದಿರಕ್ಕೆ ಮೂರ್ತಿಯನ್ನು ಕೆತ್ತನೆ ಮಾಡಿರುವ ದೇಶದ ಮೂವರು ಶಿಲ್ಪಿಗಳ ಪೈಕಿ ಕರ್ನಾಟಕ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತನೆ ಮಾಡಿರುವ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎಂಬ ದಟ್ಟ ವದಂತಿಗಳ ಬೆನ್ನಲ್ಲೇ ಮಂದಿರ ಟ್ರಸ್ಟ್‌ನ ಈ ಹೇಳಿಕೆ ಬಂದಿದೆ.

ಸುದ್ದಿಗಾರರ ಜತೆ ಮಾತನಾಡಿದ ಚಂಪತ್‌ ರಾಯ್‌ ‘ಡಿ.29ರಂದು ಅಯೋಧ್ಯೆ ಟ್ರಸ್ಟ್‌ನ ಎಲ್ಲ 11 ಸದಸ್ಯರು ಮತದಾನದ ಮೂಲಕ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಮತದಾನದ ಲಿಖಿತ ಮಾಹಿತಿಯನ್ನು ಸೋಮವಾರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್‌ರಿಗೆ ನೀಡಲಾಗಿದೆ’ ಎಂದರು.

ಆದರೆ, ಜ.17ರವರೆಗೆ ರಾಮನ ಮೂರ್ತಿಯ ಯಾವುದೇ ಚಿತ್ರ ಹಾಗೂ ವಿಡಿಯೋವನ್ನು ಬಹಿರಂಗ ಮಾಡುವುದಿಲ್ಲ. ಯಾವುದೇ ಇತರ ಮಾಹಿತಿಯನ್ನೂ ಬಹಿರಂಗಪಡಿಸುವುದಿಲ್ಲ. ಶಿಲ್ಪಿಗಳು ಮತ್ತು ಆಯ್ಕೆ ಮಾಡಿದ 11 ಜನರನ್ನು ಬಿಟ್ಟು ರಾಮ ಲಲ್ಲಾರನ್ನು ಯಾರೂ ನೋಡಿಲ್ಲ’ ಎಂದು ಇದೇ ವೇಳೆ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಲ್‌ ಸ್ಪಷ್ಟಪಡಿಸಿದರು.

ಇನ್ನೊಬ್ಬ ಟ್ರಸ್ಟ್ ಸದಸ್ಯ ಮಾತನಾಡಿ, ‘ಜ.17ರಂದು ನಡೆಯಲಿರುವ ‘ನಗರ ಯಾತ್ರೆ’ ವೇಳೆ ರಾಮ ಲಲ್ಲಾ ವಿಗ್ರಹಕ್ಕೆ ಕಣ್ಣು ಕಟ್ಟಲಾಗುತ್ತದೆ. ಆದರೆ ಪ್ರಾಣಪ್ರತಿಷ್ಠಾಪನೆ ದಿನವೇ ವಿಗ್ರಹವನ್ನು ಸಾರ್ವಜನಿಕಗೊಳಿಸುವುದು ಸೂಕ್ತ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ