ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗೆ ಕುದಿಯುತ್ತಿದ್ದ ಬಂಡಾಯ, ಭಾನುವಾರ ಒಂದು ಹಂತಕ್ಕೆ ತಾರ್ಕಿಕ ಘಟ್ಟಕ್ಕೆ ಬಂದು ತಲುಪಿದೆ. ಪಕ್ಷದ 20 ಬಂಡಾಯ ಸಂಸದರು ತಮ್ಮ ಬಣವನ್ನು ತ್ರಿಪುರಾದ ಚಿಕ್ಕ ಪಕ್ಷವಾದ ಭಾರತೀಯ ರಾಷ್ಟ್ರವಾದಿ ನಾಗರಿಕ ಪಕ್ಷದಲ್ಲಿ ವಿಲೀನ ಮಾಡಲು ನಿರ್ಧರಿಸಿದ್ದಾರೆ

ನವದೆಹಲಿ : ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗೆ ಕುದಿಯುತ್ತಿದ್ದ ಬಂಡಾಯ, ಭಾನುವಾರ ಒಂದು ಹಂತಕ್ಕೆ ತಾರ್ಕಿಕ ಘಟ್ಟಕ್ಕೆ ಬಂದು ತಲುಪಿದೆ. ಪಕ್ಷದ 20 ಬಂಡಾಯ ಸಂಸದರು ತಮ್ಮ ಬಣವನ್ನು ತ್ರಿಪುರಾದ ಚಿಕ್ಕ ಪಕ್ಷವಾದ ಭಾರತೀಯ ರಾಷ್ಟ್ರವಾದಿ ನಾಗರಿಕ ಪಕ್ಷದಲ್ಲಿ (ಎನ್‌ಸಿಪಿಐ) ವಿಲೀನ ಮಾಡಲು ನಿರ್ಧರಿಸಿದ್ದಾರೆ ಹಾಗೂ ನರೇಂದ್ರ ಮೋದಿ ನೇತೃತ್ವದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಬೆಂಬಲ ಪ್ರಕಟಿಸಿದ್ದಾರೆ.

ಈ ಸಂಬಂಧ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭಾನುವಾರ ಸಂಜೆ ಭೇಟಿ ಮಾಡಿ ಮನವಿ ಮಾಡಿ, ಲೋಕಸಭೆಯಲ್ಲಿ ಪ್ರತ್ಯೇಕ ಆಸನಕ್ಕೆ ಮನವಿ ಮಾಡಿದ್ದಾರೆ. ಇದರೊಂದಿಗೆ ಮಮತಾ ಪಕ್ಷ 2 ಹೋಳಾಗುವುದು ಬಹುತೇಕ ಖಚಿತವಾಗಿದೆ.

ಇದಕ್ಕೂ ಮುನ್ನ ಸ್ಪೀಕರ್‌ಗೆ ಪತ್ರ ಬರೆದಿದ್ದ ಟಿಎಂಸಿ ನಂ.2 ನಾಯಕ ಅಭಿಷೇಕ್‌ ಬ್ಯಾನರ್ಜಿ, ‘ಬಂಡಾಯ ಬಣಕ್ಕೆ ಮಾನ್ಯತೆ ನೀಡಬೇಡಿ. ಕಾನೂನಿನಡಿ ಅದಕ್ಕೆ ಅವಕಾಶವಿಲ್ಲ’ ಎಂದು ಕೋರಿದ್ದರು. ಈ ಸಂಬಂಧ ದೀದಿ ಬಣದ ಸಂಸದೆ ಸಾಗರಿಕಾ ಘೋಷ್‌ ಸ್ಪೀಕರ್‌ರನ್ನೂ ಭೇಟಿಯಾಗಿದ್ದರು. ಆದರೆ ಅಭಿಷೇಕ್‌ಗೆ ಕಾನೂನಾತ್ಮಕವಾಗಿಯೇ ಉತ್ತರ ನೀಡುವ ಉದ್ದೇಶದಿಂದ ಬಂಡಾಯ ಗುಂಪು, ಬರೀ ಗುಂಪಾಗಿ ಗುರುತಿಸಿಕೊಳ್ಳದೇ ಅನ್ಯ ಪಕ್ಷವೊಂದರಲ್ಲಿ ವಿಲೀನ ಆಗುವುದಾಗಿ ಘೋಷಿಸಿದೆ.

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಬಂಡಾಯ ನಾಯಕಿ ಕಾಕೋಲಿ ಘೋಷ್, ‘ಎನ್‌ಸಿಪಿಐನಲ್ಲಿ ವಿಲೀನವಾಗಿ ನಮ್ಮ ಪಕ್ಷ ಮೋದಿ ನೇತೃತ್ವದ ಎನ್‌ಡಿಎಗೆ ಬೆಂಬಲ ನೀಡಲಿದೆ. ಟಿಎಂಸಿಯ 29 ಸಂಸದರ ಪೈಕಿ 20 ಸಂಸದರು ನಮ್ಮ ಬಣದಲ್ಲಿದ್ದು, 3ನೇ 2ರಷ್ಟು ಬಹುಮತ ಹೊಂದಿದ್ದೇವೆ. ಕಾನೂನು ಪ್ರಕಾರ ಪ್ರತ್ಯೇಕ ಮಾನ್ಯತೆ ಪಡೆಯಲು ನಾವು ಅರ್ಹ’ ಎಂದರು.

ಆದರೆ ಇದಕ್ಕೆ ಮಮತಾ ಬಣದ ನಾಯಕ ಮದನ್‌ ಮಿತ್ರಾ ತಿರುಗೇಟು ನೀಡಿದ್ದು. ‘ಇವರೆಲ್ಲ ದೀದಿಗೆ ಎರಡು ಬಗೆದ ದ್ರೋಹಿಗಳು. ಪ್ರತ್ಯೇಕ ಪಕ್ಷದ ಮಾನ್ಯತೆ ಸುಲಭವಲ್ಲ. ಕಾನೂನಾತ್ಮಕವಾಗಿ ಪಕ್ಷ ಹೋರಾಡಬಹುದು’ ಎಂದು ಕಿಡಿಕಾರಿದ್ದಾರೆ. ಹಿರಿಯ ರಾಜಕಾರಣಿ ಹಾಗೂ ರಾಜಕಾರಣಿ ಕಪಿಲ್ ಸಿಬಲ್‌ ಮಾತನಾಡಿ, ‘ಸಂಸದರಷ್ಟೇ ಪ್ರತ್ಯೇಕ ಪಕ್ಷದಲ್ಲಿ ವಿಲೀನ ಆಗಲು ಕಾನೂನು ಪ್ರಕಾರ ಅಸಾಧ್ಯ. ಇದು ಪಕ್ಷದ ಮಟ್ಟದಲ್ಲಿ ಆಗಬೇಕು. ಹೀಗಾಗಿ ಇವರು ಅನರ್ಹತೆಗೆ ಅರ್ಹರು’ ಎಂದಿದ್ದಾರೆ.

ಬಂಡಾಯ 20 ಸಂಸದರಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್‌ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಸಯೋನಿ ಘೋಷ್, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಮಾಲಾ ರಾಯ್, ಬಾಪಿ ಹಲ್ದರ್ ಮತ್ತು ಪ್ರಸೂನ್ ಬ್ಯಾನರ್ಜಿ ಪ್ರಮುಖರಾಗಿದ್ದಾರೆ.

ಬಂಡಾಯ ನಾಯಕರ ತಂತ್ರ ಏನು?:

ಸಂಜೆ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದ ಟಿಎಂಸಿ ನಂ.2 ನಾಯಕ ಅಭಿಷೇಕ್‌ ಬ್ಯಾನರ್ಜಿ, ‘ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ರಾಜಕೀಯ ಪಕ್ಷವೇ ಪ್ರಧಾನವೇ ವಿನಾ ಸಂಸದೀಯ ಪಕ್ಷವಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯಡಿಯೂ ಇವರ ಕ್ರಮ ಸೂಕ್ತವಲ್ಲ. ಆದ್ದರಿಂದ ಹೀಗಾಗಿ ಸಂಸದರ ಪ್ರತ್ಯೇಕ ಗುಂಪಿಗೆ ಮಾನ್ಯತೆ ನೀಡುವುದು ಸಲ್ಲದು. ಪಕ್ಷದ ಅಧಿಕೃತ ನಾಯಕತ್ವ ಅಥವಾ ವಿಪ್‌ಗೆ ವಿರುದ್ಧವಾಗಿ ವರ್ತಿಸುವ ಯಾವುದೇ ಸಂಸದರು ಅನರ್ಹತೆಗೆ ಒಳಗಾಗಬಹುದು’ ಎಂದಿದ್ದರು. ಹೀಗಾಗಿ ಟಿಎಂಸಿಯ ಪ್ರತ್ಯೇಕ ಬಣಕ್ಕೆ ಮಾನ್ಯತೆ ನೀಡಲು ಆಗದು ಎಂದು ಸ್ಪೀಕರ್‌ಗೆ ಸೂಚ್ಯವಾಗಿ ಹೇಳಿದ್ದರು.

ಇದನ್ನು ಮನಗಂಡ ಕಾಕೋಲಿ ಘೋಷ್‌ ದಸ್ತಿದಾರ್‌ ಹಾಗೂ ಸುದೀಪ್‌ ಬಂಡೋಪಾಧ್ಯಾಯ ನೇತೃತ್ವದ ಬಂಡಾಯ ಸಂಸದರ ಗುಂಪು, ಪ್ರತ್ಯೇಕ ಸಂಸದೀಯ ಗುಂಪನ್ನು ರಚಿಸುವುದಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಕಾನೂನು ಅಡೆತಡೆಗಳನ್ನು ನಿವಾರಿಸಲು ನಿರ್ಧರಿಸಿತು. ಬಂಡಾಯ ಬಣವನ್ನು ತ್ರಿಪುರಾದ ಚಿಕ್ಕ ಪಕ್ಷವಾದ ಭಾರತೀಯ ರಾಷ್ಟ್ರವಾದಿ ನಾಗರಿಕ ಪಕ್ಷ (ಎನ್‌ಸಿಪಿಐ) ಜತೆ ವಿಲೀನ ಮಾಡಲು ನಿರ್ಧರಿಸಿತು. ಈ ಮೂಲಕ ಪ್ರತ್ಯೇಕ ಬಣದ ಬದಲು ಪ್ರತ್ಯೇಕ ಪಕ್ಷಕ್ಕೆ ಮಾನ್ಯತೆ ಸಿಗುವುದು ಸುಲಭ ಎಂದು ಸ್ಪೀಕರ್ ಮುಂದೆ ವಾದ ಮಂಡಿಸಿತು.

ಕೇಂದ್ರ ಸಚಿವರ ಭೇಟಿ:

ಇದಕ್ಕೂ ಮುನ್ನ ಬಂಡಾಯ ಸಂಸದರು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ರನ್ನು ಭೇಟಿ ಮಾಡಿದರು. ಈ ವೇಳೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಇದ್ದರು. ಈ ಮೂಲಕ ಬಂಡುಕೋರರು ಬಿಜೆಪಿಯನ್ನು ಬೆಂಬಲಿಸುವ ಪರೋಕ್ಷ ಸುಳಿವು ನೀಡಿದರು. ನಂತರ ಸ್ಪೀಕರ್ ಭೇಟಿಗೆ ಹೊರಟರು.

ಬಂಡಾಯದ ಹಾದಿ

ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲಿನ ಬಳಿಕ ಟಿಎಂಸಿ ನಾಯಕತ್ವದ ವಿರುದ್ಧ ಪಕ್ಷದಲ್ಲಿ ಆಕ್ರೋಶ

ಮಮತಾ ಬ್ಯಾನರ್ಜಿ, ದೀದಿ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ಸಂಸದರು, ಶಾಸಕರ ಅಪಸ್ವರ

80 ಶಾಸಕರಲ್ಲಿ 60, 28 ಲೋಕಸಭಾ ಸಂಸದರಲ್ಲಿ 22, 13 ರಾಜ್ಯಸಭಾ ಸದಸ್ಯರಲ್ಲಿ ಮೂವರು ಬಂಡಾಯ

ಬಂಡಾಯ ಎದ್ದ ಸಂಸದರು, ತ್ರಿಪುರಾದ ಎನ್‌ಸಿಪಿಐನಲ್ಲಿ ವಿಲೀನ. ಕೇಂದ್ರದ ಎನ್‌ಡಿಎಗೆ ಬೆಂಬಲ ಪ್ರಕಟ