ಇನ್ನು ಸರ್ಕಾರದಿಂದಲೇ 108 ಆ್ಯಂಬುಲೆನ್ಸ್‌ಗಳ ನಿರ್ವಹಣೆ

KannadaprabhaNewsNetwork |  
Published : May 15, 2025, 01:40 AM ISTUpdated : Jun 06, 2025, 10:57 AM IST
108 | Kannada Prabha

ಸಾರಾಂಶ

ರಾಜ್ಯದಲ್ಲಿ ಆಂಬ್ಯುಲೆನ್ಸ್‌ ಸೇವೆಯನ್ನು ಖಾಸಗಿ ಹಿಡಿತದಿಂದ ತಪ್ಪಿಸಲು ಸರ್ಕಾರದಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಹಾಗೂ 104 ಸಹಾಯವಾಣಿ ಸೇವೆ ಒದಗಿಸಲು ನಿರ್ಧರಿಸಲಾಗಿದೆ.  

 ಬೆಂಗಳೂರು : ರಾಜ್ಯದಲ್ಲಿ ಆಂಬ್ಯುಲೆನ್ಸ್‌ ಸೇವೆಯನ್ನು ಖಾಸಗಿ ಹಿಡಿತದಿಂದ ತಪ್ಪಿಸಲು ಸರ್ಕಾರದಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಹಾಗೂ 104 ಸಹಾಯವಾಣಿ ಸೇವೆ ಒದಗಿಸಲು ನಿರ್ಧರಿಸಲಾಗಿದೆ. 

ಚಾಮರಾಜ ನಗರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಈ ಮೊದಲು ಸಹ ಆಂಬ್ಯುಲೆನ್ಸ್‌ಗಳು ಸರ್ಕಾರದ್ದೇ ಆಗಿದ್ದವು. ಅವುಗಳ ನಿರ್ವಹಣೆ ಮಾತ್ರ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತಿತ್ತು. ಗುತ್ತಿಗೆ ಅವಧಿ ಮುಗಿದಿದ್ದು, ಹಲವು ವರ್ಷಗಳಿಂದ ಮರು ಟೆಂಡರ್‌ಗೆ ಪ್ರಯತ್ನಿಸಿದರೂ ಹಲವು ಕಾರಣಗಳಿಗೆ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ (ಆರೋಗ್ಯ ಇಲಾಖೆ) ವತಿಯಿಂದಲೇ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಿಕೊಂಡು ನಾವೇ ಆಂಬ್ಯುಲೆನ್ಸ್‌ಗಳ ನಿರ್ವಹಣೆಗೆ ನಿರ್ಧರಿಸಿದ್ದೇವೆ. ಇದರಿಂದ ನೂರಾರು ಕೋಟಿ ರು. ಹಣವೂ ಉಳಿತಾಯವಾಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 108 ಅಂಬ್ಯುಲೆನ್ಸ್‌ಗಳನ್ನು ಇಲ್ಲಿಯವರೆಗೆ ಖಾಸಗಿ ಏಜನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆಂಬ್ಯುಲೆನ್ಸ್‌ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜೆನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜೆನ್ಸಿಗೆ ಹಣ ಪಾವತಿಯಾದರೂ ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. ಕೊನೆಗೆ ಸರ್ಕಾರ ಹಲವು ಬಾರಿ ಮಧ್ಯಪ್ರವೇಶಿಸಿ ಆಂಬ್ಯುಲೆನ್ಸ್‌ ಚಾಲಕರ ಸಮಸ್ಯೆ ಬಗೆಹರಿಸಬೇಕಾಗಿತ್ತು.‌ ಇದೀಗ ಸರ್ಕಾರವೇ ಆಂಬ್ಯುಲೆನ್ಸ್‌ ನಿರ್ವಹಣೆ ಮಾಡುವುದರಿಂದ ಇನ್ನು ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

108 ಆಂಬ್ಯುಲೆನ್ಸ್‌ ಜತೆಗೆ ರಾಜ್ಯ ಸರ್ಕಾರದ ಆಂಬ್ಯುಲೆನ್ಸ್‌ಗಳನ್ನೂ ಇದೇ ಸೇವೆಗೆ ವಿಲೀನ ಮಾಡಿಕೊಳ್ಳಲಾಗುವುದು. ರಾಜ್ಯಮಟ್ಟದಲ್ಲಿ ಒಂದು ನಿಯಂತ್ರಣ ಕೊಠಡಿ ವ್ಯವಸ್ಥೆ ಮಾಡಿ ಜಿಲ್ಲಾಮಟ್ಟದಲ್ಲಿ ಒಂದು ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. 2-3 ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಸಿದ್ಧತೆ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್‌ ತಿಳಿಸಿದರು.

ನೂರಾರು ಕೋಟಿ ಉಳಿತಾಯ:

108 ಆಂಬ್ಯುಲೆನ್ಸ್‌ ಮಾಲಿಕತ್ವ ಸರ್ಕಾರದ ಬಳಿ ಇದೆ. ಆಂಬ್ಯುಲೆನ್ಸ್‌ ಡಿಸೇಲ್‌ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿತ್ತು. ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜನ್ಸಿಯವರು ನಿರ್ವಹಣೆ ಮಾಡುತ್ತಿದ್ದರು. ಏಜೆನ್ಸಿ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ಹಣ ಉಳಿತಾಯವಾಗಲಿದೆ. ಅಲ್ಲದೆ ವ್ಯವಸ್ಥೆಯಲ್ಲೂ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

PREV
Read more Articles on

Recommended Stories

ಚು.ಆಯುಕ್ತರ ವಾಗ್ದಂಡನೆಗೆ ಇಂಡಿಯಾ ಕೂಟ ಚಿಂತನೆ
ಟ್ರಂಪ್‌-ಜೆಲೆನ್ಸ್‌ಕಿ ಕದನ ವಿರಾಮ ಸಭೆ