ಪ.ಬಂಗಾಳ - ಒಡಿಶಾ ನಡುವೆ ಜಗನ್ನಾಥ ದೇಗುಲ ವಿವಾದ

KannadaprabhaNewsNetwork |  
Published : May 03, 2025, 12:17 AM ISTUpdated : May 03, 2025, 04:58 AM IST
ಜಗನ್ನಾಥ ಮಂದಿರ | Kannada Prabha

ಸಾರಾಂಶ

ಏ.30ರಂದು ದಿಘಾದಲ್ಲಿ ಉದ್ಘಾಟನೆಯಾದ ಜಗನ್ನಾಥ ಮಂದಿರವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವೆ ವಿವಾದಕ್ಕೆ ಕಾರಣವಾಗಿದೆ. 

ಕೋಲ್ಕತಾ: ಏ.30ರಂದು ದಿಘಾದಲ್ಲಿ ಉದ್ಘಾಟನೆಯಾದ ಜಗನ್ನಾಥ ಮಂದಿರವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವೆ ವಿವಾದಕ್ಕೆ ಕಾರಣವಾಗಿದೆ. 250 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ದೇಗುಲಕ್ಕೆ ‘ಜಗನ್ನಾಥ ಧಾಮ’ ಎಂದು ಹೆಸರಿಡಲು ಬಂಗಾಳ ನಿರ್ಧರಿಸಿದ್ದೇ ಇದಕ್ಕೆ ಕಾರಣ.

ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವಾಲಯವಿದೆ. ಈಗ ಬಂಗಾಳದ ದೇವಸ್ಥಾನಕ್ಕೂ ಅದೇ ಹೆಸರಿಡುವುದು ಗೊಂದಲಕ್ಕೆ ಎಡೆಮಾಡಿಕೊಡಬಹುದು ಎಂಬುದು ಒಂದು ಕಾರಣವಾದರೆ, ಹಿಂದೂ ಶಾಸ್ತ್ರದ ಪ್ರಕಾರ ಶಂಕರಾಚಾರ್ಯರು ಸ್ಥಾಪಿಸಿದ 4 ಯಾತ್ರಾ ಸ್ಥಳಗಳಿಗೆ ಮಾತ್ರವೇ ‘ಧಾಮ’ ಎಂದು ಕರೆಯಬಹುದು ಎಂಬುದು ಇನ್ನೊಂದು ವಾದ. ಅಂತೆಯೇ, ಪುರಿಯ ದೇವಾಲಯಕ್ಕೆ ಸಂಬಂಧಿಸಿದ ಚಿಹ್ನೆಗಳಾದ ನೀಲಚಕ್ರ ಮತ್ತು ಬನವನ್ನು ಹೋಲುವ ಚಿತ್ರವು ಬಂಗಾಳ ಸರ್ಕಾರ ಪ್ರಚಾರಕ್ಕೆ ಬಳಿಸಿರುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ‘ಜಗನ್ನಾಥ ಧಾಮ ನೋಡಲು ಪುರಿಗೆ ಹೋಗಬೇಕೆಂದಿಲ್ಲ’ ಎಂದ ಘೋಷಣೆಗಳು ವಿವಾದವನ್ನು ಇನ್ನಷ್ಟು ಹೆಚ್ಚಿಸಿವೆ.

ಅತ್ತ ಪುರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಹಾಗೂ ದೇವತೆಗಳನ್ನು ನಿತ್ಯ ಸಿಂಗರಿಸುವ ಸೇವಕರಿಗೆ ದಿಘಾ ಮಂದಿರಕ್ಕೆ ಹೋಗದಂತೆ ಸೂಚಿಸಲಾಗಿದೆ.

ಇದು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದ್ದು, ‘ಉದ್ಘಾಟನೆಯಾಗಿದ್ದು ದೇವಸ್ಥಾನವೇ ಅಥವಾ ಸಾಂಸ್ಕೃತಿಕ ಕೇಂದ್ರವೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್‌, ‘ಪ್ರಭು ಜಗನ್ನಾಥರ ಹೆಗಲೇರಿ ಸಿಎಂ ಮಮತಾ ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಪದ್ಮಶ್ರೀ ವಿಜೇತ ಮರಳು ಕಲಾಕಾರ ಸುದರ್ಶನ್‌ ಪಟ್ನಾಯಕ್‌, ‘ಇದರಿಂದ ಜಗನ್ನಾಥ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ’ ಎಂದಿದ್ದಾರೆ.

ಕೆಲ ವರ್ಷಗಳ ಹಿಂದೆ ಉಭಯ ರಾಜ್ಯಗಳ ನಡುವೆ ರಸಗುಲ್ಲಾ ಮೂಲದ ಕುರಿತು ವಿವಾದವಾಗಿದ್ದು, ಅದರಲ್ಲಿ ಬಂಗಾಳ ಮೇಲುಗೈ ಸಾಧಿಸಿತ್ತು.

PREV

Recommended Stories

ಭಾರತದಲ್ಲಿನ ಶೇ.10 ಸಿಬ್ಬಂದಿಗೆ ಒರಾಕಲ್‌ ಕಂಪನಿ ಗೇಟ್‌ಪಾಸ್‌
ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!