ರಾಮನ ಜೊತೆಗಿನ ಜಾನಕಿಯ ಅನನ್ಯ ಪ್ರೇಮಕಥೆ

Published : Jul 12, 2026, 11:25 AM IST
Janaki Awards

ಸಾರಾಂಶ

ಜಾನಕಿ ಅವರನ್ನು ಉಸಿರಾಗಿಸಿಕೊಂಡಿದ್ದು ಅವರ ಪತಿ ರಾಮಪ್ರಸಾದ್. ಮೊದಲ ನೋಟದಲ್ಲೇ ಮೆಚ್ಚುಗೆಯಾಗಿ, ಅದು ಸ್ನೇಹಕ್ಕೆ ತಿರುಗಿ ಕೊನೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಳಿಗೆಯಿಂದ ಹಿಡಿದು ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಹೆಗಲಿಗೆ ಹೆಗಲಾಗಿ ನಿಂತವರು

 ಎಸ್‌.ಜಾನಕಿ ಗಾಯನವನ್ನು ಹೇಗೆ ಉಸಿರಾಗಿಸಿಕೊಂಡಿದ್ದರೋ, ಅದೇ ರೀತಿ ಜಾನಕಿ ಅವರನ್ನು ಉಸಿರಾಗಿಸಿಕೊಂಡಿದ್ದು ಅವರ ಪತಿ ರಾಮಪ್ರಸಾದ್. ಮೊದಲ ನೋಟದಲ್ಲೇ ಮೆಚ್ಚುಗೆಯಾಗಿ, ಅದು ಸ್ನೇಹಕ್ಕೆ ತಿರುಗಿ ಕೊನೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಳಿಗೆಯಿಂದ ಹಿಡಿದು ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಹೆಗಲಿಗೆ ಹೆಗಲಾಗಿ, ಉಸಿರಿಗೆ ಉಸಿರಾಗಿ ನಿಂತವರು ರಾಮಪ್ರಸಾದ್‌. ರಾಗ ತಾಳದಷ್ಟೇ ಒಂದಾಗಿ ಬಾಳಿ ಬದುಕಿದವರು ರಾಮಪ್ರಸಾದ್‌ ಮತ್ತು ಜಾನಕಿ ಜೋಡಿ.

ಮೊದಲ ನೋಟ:

ಜಾನಕಿ ಬಾಲಪ್ರತಿಭೆ. ಆಕೆ ವೇದಿಕೆಯೊಂದರಲ್ಲಿ ಹಾಡುತ್ತಿದ್ದಾಗ ಮೊದಲ ಬಾರಿ ರಾಮಪ್ರಸಾದ್‌ ಅವರನ್ನು ನೋಡಿದ್ದರು. ಅಲ್ಲಿಯೇ ಆಕೆಯ ಸುಮಧುರ ಕಂಠಕ್ಕೆ ಮಾರುಹೋದರು. ಮುಂದೆ ರಾಮಪ್ರಸಾದ್‌ರ ತಂದೆಯ ಮೂಲಕ ಇಬ್ಬರ ಪರಿಚಯವಾಯಿತು. ಆ ಸ್ನೇಹ ವೈವಾಹಿಕ ಜೀವನಕ್ಕೆ ಕಾಲಿಡುವವರೆಗೂ ಮುಂದುವರಿಯಿತು.

1956ರಲ್ಲಿ ಜಾನಕಿ ತಮ್ಮ 18ನೇ ವಯಸ್ಸಿನಲ್ಲಿ ರಾಮಪ್ರಸಾದ್‌ರನ್ನು ವಿವಾಹವಾದರು. ರಾಮಪ್ರಸಾದ್ ತಮ್ಮ ತಂದೆಯ ಮೂಲಕ ಎವಿಎಂ ಸ್ಟುಡಿಯೋಗೆ ಜಾನಕಿ ಬಗ್ಗೆ ಪತ್ರ ಬರೆಯುವಂತೆ ಮನವೊಲಿಸಿದರು. ವಿವಾಹವಾದ 1 ವರ್ಷದ ನಂತರ, 1957ರಲ್ಲಿ ಜಾನಕಿಗೆ ಮೊದಲ ಹಿನ್ನೆಲೆ ಗಾಯಕಿಯಾಗಿ ಹಾಡುಗಾರಿಕೆಯ ಅವಕಾಶ ದೊರೆಯಿತು. ಅಲ್ಲಿಂದ ಅವರ ಸಂಗೀತಯಾನ ಹೊಸ ಪ್ರಭೆಯೊಂದಿಗೆ ಆರಂಭವಾಯಿತು.

ತಮ್ಮ ಜೀವನವನ್ನೇ ಪತ್ನಿಯ ಸಂಗೀತ ವೃತ್ತಿಗೆ ಸಮರ್ಪಿಸಿದರು

ರಾಮು ಎಂದು ಜಾನಕಿ ಪ್ರೀತಿಯಿಂದ ಕರೆಯುತ್ತಿದ್ದ ರಾಮಪ್ರಸಾದ್ ತಮ್ಮ ಜೀವನವನ್ನೇ ಪತ್ನಿಯ ಸಂಗೀತ ವೃತ್ತಿಗೆ ಸಮರ್ಪಿಸಿದರು. ಪ್ರತಿ ರೆಕಾರ್ಡಿಂಗ್ ಸೆಷನ್‌ಗೂ ಅವರು ಜೊತೆಯಲ್ಲಿರುತ್ತಿದ್ದರು. ‘ಅವರು ನನ್ನ ಸಂಗೀತಕ್ಕೆ ಹುಚ್ಚರಾಗಿದ್ದರು. ರೆಕಾರ್ಡಿಂಗ್ ಸಮಯದಲ್ಲೂ ನನ್ನನ್ನು ಒಬ್ಬಳನ್ನೇ ಬಿಡುತ್ತಿರಲಿಲ್ಲ. ನನಗೂ ಅವರನ್ನು ಬಿಟ್ಟಿರಲಾಗುತ್ತಿರಲಿಲ್ಲ. ಅವರು ತಮ್ಮ ಇಡೀ ಜೀವನವನ್ನೇ ನನಗಾಗಿ ಮುಡಿಪಾಗಿಟ್ಟರು. ಅವರ ಬೆಂಬಲವಿಲ್ಲದಿದ್ದರೆ ನಾನು ಇಂದಿನ ಸ್ಥಾನಕ್ಕೆ ಬರುತ್ತಿರಲಿಲ್ಲ’ ಎಂದು ಜಾನಕಿ ಸಂದರ್ಶನದಲ್ಲಿ ಭಾವುಕರಾಗಿ ನುಡಿದಿದ್ದಾರೆ.

ರಾಮು-ಜಾನಕಿ ಸಂಬಂಧ ಕೇವಲ ಪತಿ-ಪತ್ನಿಯ ಸಂಬಂಧವಾಗಿರಲಿಲ್ಲ. ಅದು ಸ್ನೇಹ, ಬೆಂಬಲ ಮತ್ತು ಅನನ್ಯ ಹೊಂದಾಣಿಕೆಯ ಸಂಗಮವಾಗಿತ್ತು. ಜಾನಕಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ರಾಮು 1997ರಲ್ಲಿ ನಿಧನರಾದರು. ಈ ದಂಪತಿಗೆ ಮುರಳಿ ಕೃಷ್ಣ ಎಂಬ ಒಬ್ಬ ಮಗನಿದ್ದಾನೆ. ಅವರೂ ಸಂಗೀತ ಕ್ಷೇತ್ರದಲ್ಲಿದ್ದಾರೆ. ‘ಅವರು ನನ್ನೊಂದಿಗಿದ್ದರು, ಇಂದು ನನ್ನೊಂದಿಗಿದ್ದಾರೆ ಮತ್ತು ಮುಂದೆಯೂ ನನ್ನ ಆಲೋಚನೆಗಳಲ್ಲಿ ಜೀವಂತವಾಗಿರುತ್ತಾರೆ’ ಎಂದು ಜಾನಕಮ್ಮ ಪತಿಯನ್ನು ಆರ್ದ್ರ ಹೃದಯದಿಂದ ನೆನಪಿಸಿಕೊಂಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

32 ಕರೂರು ಸಂತ್ರಸ್ತ ಕುಟುಂಬಗಳಿಗೆ ವಿಜಯ್‌ ಸರ್ಕಾರಿ ನೌಕರಿ
ಎಥೆನಾಲ್‌ ಮಿಶ್ರಣ ಏಕೆ ಅಗತ್ಯ ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ