ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಇಲ್ಲ: ನಿತೀಶ್‌ ಕುಮಾರ್

KannadaprabhaNewsNetwork |  
Published : Jan 07, 2024, 01:30 AM ISTUpdated : Jan 07, 2024, 10:43 AM IST
ನಿತೀಶ್‌ ಕುಮಾರ್‌ | Kannada Prabha

ಸಾರಾಂಶ

ವಿಪಕ್ಷಗಳ ‘ಇಂಡಿಯಾ’ ಕೂಟದಲ್ಲಿ ಇನ್ನಷ್ಟು ಬಿರುಕು ಮೂಡಿದ್ದು, ಟಿಎಂಸಿ, ಶಿವಸೇನೆ ಬಳಿಕ ಕಾಂಗ್ರೆಸ್‌ಗೆ ಜೆಡಿಯು ಬಿಸಿ ತಟ್ಟಿದೆ. ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾತುಕತೆ ನಡೆಸುವುದಿಲ್ಲ ಎಂದು ಭಿನ್ನರಾಗ ಎಳೆದಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ವಿಪಕ್ಷಗಳ ಇಂಡಿಯಾ ಕೂಟದಲ್ಲಿ ದಿನೇ ದಿನೇ ಒಡಕು ಹೆಚ್ಚಾಗುತ್ತಿದೆ. ಟಿಎಂಸಿ, ಶಿವಸೇನೆ ಬಳಿಕ ಜೆಡಿಯು ಕೂಡ ಬಿಹಾರದಲ್ಲಿ ತಾನು ಕಾಂಗ್ರೆಸ್‌ ಜೊತೆ ಸೀಟು ಹಂಚಿಕೊಳ್ಳುವುದಿಲ್ಲ ಎಂದು ಸಡ್ಡು ಹೊಡೆದಿದೆ.ಬಿಹಾರದಲ್ಲಿ ನಾವು 16 ಲೋಕಸಭಾ ಸಂಸದರನ್ನು ಹೊಂದಿದ್ದೇವೆ. 

ಈ ಸೀಟುಗಳನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾವು ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸುವುದಿಲ್ಲ. ನಮ್ಮ ಸೀಟು ಹಂಚಿಕೆಯೇನಿದ್ದರೂ ಆರ್‌ಜೆಡಿ ಜೊತೆಗೆ ಮಾತ್ರ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೆಡಿಯು ಸ್ಪಷ್ಟವಾಗಿ ಹೇಳಿದೆ.

‘ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಮೊದಲು ಆರ್‌ಜೆಡಿ ಜೊತೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡಿ ಫೈನಲ್‌ ಮಾಡಿಕೊಳ್ಳಲಿ. ಕೊನೆಗೆ ನಾವು ಆರ್‌ಜೆಡಿ ಜೊತೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡುತ್ತೇವೆ. ಕಾಂಗ್ರೆಸ್‌ ಜೊತೆ ನಮ್ಮ ಮಾತುಕತೆ ಇಲ್ಲ’ ಎಂದು ಬಿಹಾರದ ಸಚಿವ ಸಂಜಯ್‌ ಕುಮಾರ್‌ ಝಾ ಹೇಳಿದ್ದಾರೆ.

ಇಂಡಿಯಾ ಕೂಟಕ್ಕೆ ನಿತೀಶ್‌ ಕುಮಾರ್‌ ಅವರನ್ನು ಸಂಚಾಲಕರನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್‌ ಮೇಲೆ ಒತ್ತಡ ಹೇರುವ ತಂತ್ರವಾಗಿಯೂ ಜೆಡಿಯು ಈ ನಿಲುವು ತಾಳಿರಬಹುದು ಎಂದು ಹೇಳಲಾಗುತ್ತಿದೆ. 

ನಿತೀಶ್‌ ಅವರನ್ನೇ ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು, ಮಲ್ಲಿಕಾರ್ಜುನ ಖರ್ಗೆ ಬೇಡ ಎಂದು ಈಗಾಗಲೇ ಜೆಡಿಯು ನಾಯಕರು ಹೇಳಿದ್ದಾರೆ.ಬಿಹಾರದಲ್ಲಿ 40 ಲೋಕಸಭಾ ಸೀಟುಗಳಿದ್ದು, 2019ರ ಚುನಾವಣೆಯಲ್ಲಿ ಬಿಜೆಪಿ 17, ಜೆಡಿಯು 16, ಕಾಂಗ್ರೆಸ್‌ 1 ಹಾಗೂ ಲೋಕಜನಶಕ್ತಿ ಪಾರ್ಟಿ 6 ಸೀಟುಗಳನ್ನು ಗೆದ್ದಿವೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷಗಳು ತಾವು ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಈ ಹಿಂದೆ ತಿಳಿಸಿದ್ದವು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ