ಪತ್ರಕರ್ತೆ ಜೊತೆ ಅಮೆಜಾನ್‌ನ ಸಂಸ್ಥಾಪಕ ಜೆಫ್‌ ಬೆಜೋಜ್‌ ಮದ್ವೆ : ₹5100 ಕೋಟಿ ವೆಚ್ಚ

KannadaprabhaNewsNetwork |  
Published : Dec 23, 2024, 01:03 AM ISTUpdated : Dec 23, 2024, 04:38 AM IST
ಜೆಫ್‌ ಬೆಜೋಜ್‌ | Kannada Prabha

ಸಾರಾಂಶ

ಆನ್ಲೈನ್‌ ಮಾರುಕಟ್ಟೆ ದೈತ್ಯ ಅಮೆಜಾನ್‌ನ ಸಂಸ್ಥಾಪಕ ಜೆಫ್‌ ಬೆಜೋಜ್‌, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್‌ ಸ್ಯಾಂಚೆಜ್‌ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರು. ದಾಟಲಿದೆ ಎನ್ನಲಾಗಿದೆ.

ವಾಷಿಂಗ್ಟನ್‌: ಆನ್ಲೈನ್‌ ಮಾರುಕಟ್ಟೆ ದೈತ್ಯ ಅಮೆಜಾನ್‌ನ ಸಂಸ್ಥಾಪಕ ಜೆಫ್‌ ಬೆಜೋಜ್‌, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್‌ ಸ್ಯಾಂಚೆಜ್‌ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರು. ದಾಟಲಿದೆ ಎನ್ನಲಾಗಿದೆ.

ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ಮುಂದಿನ ಶನಿವಾರ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್ಜಿಗೆ 2019ರಲ್ಲಿ ಡೈವೋರ್ಸ್‌ ನೀಡಿದ್ದ ಬೆಜೋಸ್‌, ಮಾಜಿ ಪತ್ನಿಗೆ 3 ಲಕ್ಷ ಕೋಟಿ ರು.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್‌ ಜೊತೆ ನಂಟು ಹೊಂದಿದ್ದರು. ಪ್ರಸಕ್ತ ಬೆಜೋಸ್‌ ಅವರ ಆಸ್ತಿ 20 ಲಕ್ಷ ಕೋಟಿ ರು.ನಷ್ಟಿದೆ.

ಕೆಲ ತಿಂಗಳ ಹಿಂದೆ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ ವಿವಾಹ ಸಮಾರಂಭದ ಖರ್ಚು ಬರೋಬ್ಬರಿ 5000 ಕೋಟಿ ರು. ದಾಟಿತ್ತು.

ಧರ್ಮದ ಅರ್ಥ ಗೊತ್ತಿಲ್ಲದ ಕಾರಣ ಕಿರುಕುಳ, ದೌರ್ಜನ್ಯ: ಭಾಗವತ್‌

ಅಮರಾವತಿ: ಧರ್ಮದ ಸರಿಯಾದ ಅರ್ಥ ಗೊತ್ತಿಲ್ಲದ ಕಾರಣದಿಂದಾಗಿಯೇ ಇಂದು ವಿಶ್ವದಲ್ಲಿ ಧರ್ಮದ ಹೆಸರಲ್ಲಿ ಕಿರುಕುಳ ಮತ್ತು ದೌರ್ಜನ್ಯದ ಘಟನಗಳು ನಡೆಯುತ್ತಿವೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯಲ್ಲಿನ ಮಹಾನುಭಾವ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌, ‘ಧರ್ಮ ಅತ್ಯಂತ ಮಹತ್ವವಾದುದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಹೇಳಿಕೊಡುವ ಅಗತ್ಯವಿದೆ.ಏಕೆಂದರೆ ಸರಿಯಾದ ರೀತಿಯಲ್ಲಿ ಧರ್ಮದ ಬಗ್ಗೆ ಹೇಳಿಕೊಡದೇ ಹೋದಲ್ಲಿ ಮತ್ತು ಧರ್ಮದ ಕುರಿತು ಪರಿಪೂರ್ಣವಲ್ಲದ ಜ್ಞಾನವು ನಮ್ಮನ್ನು ಅಧರ್ಮದ ಕಡೆಗೆ ಕೊಂಡೊಯ್ಯುತ್ತದೆ. ಇಂದು ವಿಶ್ವದಾದ್ಯಂದ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ದೌರ್ಜನ್ಯಕ್ಕೆ ಧರ್ಮದ ಕುರಿತಾದ ತಪ್ಪುಕಲ್ಪನೆಗಳು ಮತ್ತು ಅದರ ಅರ್ಥ ಗೊತ್ತಿಲ್ಲದೇ ಇರುವುದೇ ಕಾರಣ’ ಎಂದು ಹೇಳಿದ್ದಾರೆ.

ಜೊತೆಗೆ, ಧರ್ಮ ಎಂದೆಂದಿಗೂ ಇದ್ದೇ ಇರುತ್ತದೆ ಮತ್ತು ಎಲ್ಲವೂ ಅದರಂತೆಯೇ ನಡೆಯುತ್ತದೆ. ಈ ಕಾರಣಕ್ಕಾಗಿಯೇ ಅದನ್ನು ಸನಾತನ ಎಂದು ಕರೆಯಲಾಗುತ್ತದೆ. ಧರ್ಮದ ನಡವಳಿಕೆಯೇ ಧರ್ಮವನ್ನು ಕಾಪಾಡುತ್ತದೆ ಎಂದು ಭಾಗವತ್‌ ಹೇಳಿದ್ದಾರೆ.

ಮುಂಬೈ ಪಾಲಿಕೆಗೆ ಮೈತ್ರಿ ಬಿಟ್ಟು ಏಕಾಂಗಿ ಸ್ಪರ್ಧೆ: ಉದ್ಧವ್‌ ಬಣ ನಿರ್ಧಾರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವ ಮಹಾ ವಿಕಾಸ್‌ ಅಘಾಡಿಯ ಭಾಗವಾಗಿದ್ದ ಶಿವಸೇನೆ (ಉದ್ಧವ್‌ ಬಣ), ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ನಾಯಕ ಸಂಜಯ್‌ ರಾವುತ್‌, ‘ಬಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಉದ್ಧವ್‌ ಠಾಕ್ರೆ, ಇತರೆ ನಾಯಕರು ಮಾತುಕತೆ ನಡೆಸಿದ್ದಾರೆ. ಮುಂಬೈ ಪ್ರಾಂತ್ಯದಲ್ಲಿ ಶಿವಸೇನೆ ಈಗಲೂ ಪ್ರಬಲವಾಗಿದೆ. ಉಳಿದಂತೆ ಇತರೆ ಪಾಲಿಕೆಗಳಲ್ಲಿ ಮಹಾ ವಿಕಾಸ್‌ ಅಘಾಡಿಯೊಂದಿಗೇ ಸ್ಪರ್ಧಿಸಲಿದೆ’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ, ಮೈತ್ರಿಯಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿದೆ.

ಗಾಂಧೀಜಿ ಭಾರತಕ್ಕಲ್ಲ ಪಾಕ್‌ಗೆ ರಾಷ್ಟ್ರಪಿತ: ಗಾಯಕ ಅಭಿಜಿತ್‌

ಮುಂಬೈ: ‘ಮಹಾತ್ಮ ಗಾಂಧಿ ಭಾರತಕ್ಕಲ್ಲ, ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತ’ ಎಂದು ಬಾಲಿವುಡ್‌ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಶುಭಾಂಕರ್‌ ಮಿಶ್ರಾ ಅವರ ಜತೆ ಪೋಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ಭಾರತ ಈ ಮೊದಲೇ ಇದ್ದ ದೇಶ. ಪಾಕಿಸ್ತಾನವು ಭಾರತದಿಂದ ಭಾಗವಾಗಿ ಹೋಯಿತು. ಅದಕ್ಕೆ ಮಹಾತ್ಮ ಗಾಂಧೀಜಿಯವರೇ ಕಾರಣ. ಆದರೆ ದುರದೃಷ್ಟವಶಾತ್‌ ನಾವು ಗಾಂಧೀಜಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆಯುತ್ತಿದ್ದೇವೆ. ಆದರೆ ನಿಜವಾಗಿಯೂ ಮಹಾತ್ಮ ಗಾಂಧೀಜಿ ಅವರು ಪಾಕಿಸ್ತಾನದ ರಾಷ್ಟ್ರಪಿತ ಎಂದು ಹೇಳಿದ್ದಾರೆ.

ಅಭಿಜಿತ್‌ ಅವರು ಶಾರುಖ್‌ ಖಾನ್‌ ಸೇರಿದಂತೆ ಅನೇಕ ಬಾಲಿವುಡ್‌ ಸ್ಟಾರ್‌ ನಟರಿಗೆ ಹಾಡಿದ್ದಾರೆ.

ಪ್ರಿಯಾಂಕಾ ಜಯಕ್ಕೆ ಕೋಮುವಾದಿ ಮುಸ್ಲಿಂ ಬೆಂಬಲ ಕಾರಣ: ಸಿಪಿಎಂ

ವಯನಾಡು: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ಗೆಲುವಿನ ಹಿಂದೆ ಕೋಮುವಾದಿ ಮುಸ್ಲಿಂ ಸಂಘಟನೆಯ ಬೆಂಬಲವಿದೆ ಎಂದು ಸಿಪಿಐ(ಎಂ)ನ ಎ. ವಿಜಯರಾಘವನ್‌ ದೂರಿದ್ದಾರೆ. ವಯನಾಡಲ್ಲಿ ನಡೆದ ಪಕ್ಷದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ‘ರಾಹುಲ್‌ ಹಾಗೂ ಪ್ರಿಯಾಂಕಾ ಗೆದ್ದದ್ದು ಕೋಮುವಾದಿ ಮುಸ್ಲಿಂ ಸಂಘಟನೆಯ ಬೆಂಬಲದಿಂದ. ಅವರ ಬೆಂಬಲವಿಲ್ಲದಿದ್ದರೆ ದೆಹಲಿ ತಲುಪಿ ವಿಪಕ್ಷದ ನಾಯಕನಾಗಲು ರಾಹುಲ್‌ಗೆ ಸಾಧ್ಯವಿತ್ತೇ? ಪ್ರಿಯಾಂಕಾರ ಪ್ರಚಾರ ಸಭೆಯಲ್ಲಿ ಯಾರಿದ್ದರು?’ ಎಂದು ಪ್ರಶ್ನಿಸಿದ್ದಾರೆ. ವಯನಾಡು ಲೋಕಸಭಾ ಚುನಾವಣೆಯ ಮುನ್ನ ಕಾಂಗ್ರೆಸ್‌ ಹಾಗೂ ಜಮಾತ-ಇ-ಇಸ್ಲಾಮಿ ನಡುವೆ ನಂಟಿದೆ ಎಂದು ವಿಜಯನ್‌ ಹೇಳಿದ್ದರು.

ಅಯೋಧ್ಯೆ ಬಾಲರಾಮನ ಪ್ರತಿಷ್ಠಾಪನೆಗೆ 1 ವರ್ಷ: ಜ.11ರಿಂದ ಕಾರ್ಯಕ್ರಮ

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು, ಬಾಲರಾಮನ ಪ್ರತಿಷ್ಠಾಪನೆಯಾಗಿ ಜನವರಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆ ಜ.11ರಿಂದ 3 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.11ರ ಪುಷ್ಯ ಶುಕ್ಲ ದ್ವಾದಶಿಯಂದು ಕನ್ನಡಿಗ ಅರುಣ್‌ ಯೋಗಿರಾಜ್‌ ಕೆತ್ತಿದ ಬಾಲರಾಮನಿಗೆ ಮಹಾಭಿಷೇಕ ಮಾಡಿ, ಮಧ್ಯಾಹ್ನ 12.20ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ವಾರ್ಷಿಕೋತ್ಸವದ ಕಾರ್ಯಕ್ರಮ ಮಂದಿರ ಆವರಣದ 5 ಕಡೆಗಳಲ್ಲಿ, ಯಜ್ಞ ಮಂಟಪ, ಯಾತ್ರಿ ಕೇಂದ್ರದಲ್ಲಿ, ಆನಂದ ತಿಲದಲ್ಲಿ ಇರಲಿವೆ. ಪ್ರಾಣ ಪ್ರತಿಷ್ಠಾಪನೆಗೆ ಯಾರನ್ನು ಆಹ್ವಾನಿಸಲು ಆಗಲಿಲ್ಲವೋ ಅವರಿಗೆಲ್ಲಾ ವಾರ್ಷಿಕೋತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಚಳಿ ಹೆಚ್ಚಳ ಬೆನ್ನಲ್ಲೇ ದಿಲ್ಲಿ ಮಾಲಿನ್ಯ ಮತ್ತೆ ಗಂಭೀರದ ಮಟ್ಟಕ್ಕೆ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಂಜು ಕವಿದ ವಾತಾವರಣ ಹೆಚ್ಚಿದ ಬೆನ್ನಲ್ಲೇ ವಾಯುಮಾಲಿನ್ಯ ಪ್ರಮಾಣ ಮತ್ತೆ ಗಂಭೀರಕ್ಕೆ ತಲುಪಿದೆ. ಭಾನುವಾರ ರಾಷ್ಟ್ರರಾಜಧಾನಿ ವಲಯದಲ್ಲಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಕಳಪೆ ಎಂದು ಪರಿಗಣಿಸಲಾಗುವ 406 ಅಂಕಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಚಳಿಯೂ ವಿಪರೀತವಿದ್ದು, ಇಲ್ಲಿನ ಜನ ಪರದಾಡುವಂತಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣದಂತಹ ಕಾರ್ಯಗಳನ್ನು ನಿರ್ಬಂಧಿಸುವ ಗ್ರಾಪ್‌-4ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅಲ್ಲದೆ, ವಾಯು ಮಾಲಿನ್ಯದಿಂದ ಇಲ್ಲಿನ ನಿವಾಸಿಗಳಿಗೆ ಸದ್ಯಕ್ಕೆ ಮುಕ್ತಿ ಇಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ