;Resize=(412,232))
ನವದೆಹಲಿ : ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿ-ನರೇಗಾ) ಯೋಜನೆಯ ಹೆಸರು ಬದಲಾಯಿಸಿ ‘ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆ (ವಿಬಿ-ಜಿ ರಾಮ್ ಜಿ) ಎಂದು ನಾಮಕರಣ ಮಾಡುವ ವಿಧೇಯಕವನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ವಿಧೇಯಕವನ್ನು ಒಪ್ಪಲು ನಿರಾಕರಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಸಂಸದರು, ಸಂಸದೀಯ ಸಮಿತಿ ಪರಾಮರ್ಶೆಗೆ ಒಪ್ಪಿಸುವಂತೆ ಆಗ್ರಹಿಸಿ ಕೋಲಾಹಲ ನಡೆಸಿದ್ದಾರೆ.
ಇನ್ನೊಂದೆಡೆ, ‘ಗಾಂಧೀಜಿ ಹೆಸರು ತೆಗೆದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಾತ್ಮ ಗಾಂಧಿಯವರನ್ನು ಅವಮಾನಿಸಿದೆ’ ಎಂದು ಆರೋಪಿಸಿ ವಿಪಕ್ಷ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಈ ನಡುವೆ ಮಸೂದೆ ಚರ್ಚೆ ಮುಂದುವರಿಯಲಿರುವ ಕಾರಣ ಮುಂದಿನ 3 ದಿನಗಳ ಮಟ್ಟಿಗೆ ಕಾಂಗ್ರೆಸ್ ತನ್ನ ಎಲ್ಲ ಸಂಸದರೂ ಹಾಜರಿರಬೇಕೆಂದು ವಿಪ್ ಜಾರಿ ಮಾಡಿದೆ.
ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದಕ್ಕೆ ವಿರೋಧ ಪಕ್ಷದ ತೀವ್ರ ಆಕ್ಷೇಪದ ನಡುವೆಯೂ, ಕೃಷಿ ಸಚಿವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ‘ವಿಬಿ- ಜಿ ರಾಮ್ ಜಿ ಮಸೂದೆ-2025’ ಅನ್ನು ಮಂಡಿಸಿದರು.
‘ನಮ್ಮ ಸರ್ಕಾರವು ಮಹಾತ್ಮ ಗಾಂಧಿಯವರ ಮೇಲೆ ನಂಬಿಕೆ ಇಡುವುದಲ್ಲದೆ ಅವರ ತತ್ವಗಳನ್ನು ಸಹ ಅನುಸರಿಸುತ್ತದೆ, ಮೋದಿ ಸರ್ಕಾರವು ಹಿಂದಿನ ಸರ್ಕಾರಗಳಿಗಿಂತ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹೊಸ ಯೋಜನೆ, ಗ್ರಾಮೀಣ ಜನರ ಉದ್ಯೋಗದ ಅವಧಿಯನ್ನು ವರ್ಷಕ್ಕೆ 100ರಿಂದ 125ಕ್ಕೆ ಹೆಚ್ಚಿಸುತ್ತದೆ. ಸಕಾಲಕ್ಕೆ ಕೂಲಿ ಸಿಗುವಂತೆ ನೋಡಿಕೊಳ್ಳುತ್ತದೆ’ ಎಂದರು.
ಆದರೆ ಮಂಡನೆ ಹಂತದಲ್ಲಿಯೇ ವಿಪಕ್ಷ ಸದಸ್ಯರು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸುವಂತೆ ಒತ್ತಾಯಿಸಿದರು.
ಪ್ರಿಯಾಂಕಾ ಗಾಂಧಿ ಮಾತನಾಡಿ, ‘ನರೇಗಾ ಯೋಜನೆಯಡಿ ಬಡವರಿಗೆ 100 ದಿನಗಳ ಉದ್ಯೋಗ ಸಿಗುತ್ತದೆ. ಪ್ರಸ್ತುತ ಮಸೂದೆ ಬಡವರ ಉದ್ಯೋಗ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಕೇಂದ್ರೀಯ ಪಾಲನ್ನು ಶೇ.90ರ ಬದಲು ಶೇ.60ಕ್ಕೆ ಇಳಿಸಿ ರಾಜ್ಯದ ಪಾಲನ್ನು ಶೇ.10ರಿಂದ 40ಕ್ಕೆ ಹೆಚ್ಚಿಸಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ತನ್ನ ಹೊಣೆಯಿಂದ ಜಾರಿಕೊಳ್ಳುತ್ತಿದೆ’ ಎಂದರು.
‘ಮಹಾತ್ಮ ಗಾಂಧಿ ತಮ್ಮ ಕುಟುಂಬದವರಲ್ಲ, ಆದರೆ ಅವರು ದೇಶದ ಪ್ರತಿ ಕುಟುಂಬದಿಂದ ಬಂದವರು’ ಎಂದೂ ಪ್ರಿಯಾಂಕಾ ಅವರು ಬಿಜೆಪಿಗೆ ತಿವಿದರು.
ತರೂರ್ ಕೂಡ ಗರಂ:
ಇತ್ತೀಚೆಗೆ ಮೋದಿ ಬಗ್ಗೆ ಮೃದು ಧೋರಣೆ ತಾಳಿರುವ ಕಾಂಗ್ರೆಸ್‌ನ ಶಶಿ ತರೂರ್ ಅವರೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ‘ಮಸೂದೆಯಲ್ಲಿ ರಾಮನ ಹೆಸರು ಎಳೆದು ತಳಬೇಡಿ. ರಾಮ್ ಕಾ ನಾಮ್ ಬದ್ನಾಮ್ ನ ಕರೋ (ಭಗವಾನ್ ರಾಮನ ಹೆಸರನ್ನು ದೂಷಿಸಬೇಡಿ). ಹೆಸರು ಬದಲಾವಣೆ ಮಾಡುವುದು ತಾತ್ವಿಕ ಅಡಿಪಾಯದ ಮೇಲಿನ ದಾಳಿ’ ಎಂದರು.
ಡಿಎಂಕೆಯ ಟಿ.ಆರ್. ಬಾಲು, ‘ರಾಷ್ಟ್ರಪಿತನನ್ನು ಪ್ರಸ್ತುತ ಸರ್ಕಾರ ಅಪಹಾಸ್ಯ ಮಾಡುತ್ತಿದೆ. ಮಸೂದೆ ಸೆಲೆಕ್ಟ್ ಕಮಿಟಿಯ ಪರಾಮರ್ಶೆಗೆ ಹೋಗಬೇಕು’ ಎಂದರು.
ಫೋಟೋ ಹಿಡಿದು ಪ್ರತಿಭಟನೆ:
ಒಂದು ಹಂತದಲ್ಲಿ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಬಂದು, ಮಹಾತ್ಮ ಗಾಂಧಿಯವರ ಛಾಯಾಚಿತ್ರಗಳನ್ನು ಹಿಡಿದು, ರಾಷ್ಟ್ರಪಿತನ ಹೆಸರನ್ನು ಅಳಿಸುವುದಕ್ಕ ಅಸಮ್ಮತಿ ವ್ಯಕ್ತಪಡಿಸಿದರು.
ಸಂಸತ್ತಿನ ಹೊರಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ನರೇಗಾ ಯೋಜನೆಯಲ್ಲಿ ಬದಲಾವಣೆ ತಂದು ಬಡವರ ಹೊಟ್ಟೆ ಮೇಲೆ ಹೊಡೆಯುವುದು ಮೋದಿ ಸರ್ಕಾರದ ಗುರಿ’ ಎಂದು ಕಿಡಿಕಾರಿದರು.
ದೇಶಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿ-ನರೇಗಾ) ಯೋಜನೆಯ ಹೆಸರು ಬದಲಾಯಿಸಿ ‘ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ ಯೋಜನೆ (ವಿಬಿ-ಜಿ ರಾಮ್ ಜಿ) ಎಂದು ನಾಮಕರಣ ಮಾಡುವ ವಿಧೇಯಕದ ವಿರುದ್ಧ ಬುಧವಾರ ದೇಶವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಎಲ್ಲ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ದೇಶದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಆಯೋಜಿಸಲು ಸೂಚಿಸಿದ್ದಾರೆ.
ಬಡವರ ಹೊಟ್ಟೆಗೆ ಹೊಡೆವುದೇ ಗುರಿ
ನರೇಗಾ ಯೋಜನೆಯಲ್ಲಿ ಬದಲಾವಣೆ ತಂದು ಬಡವರ ಹೊಟ್ಟೆ ಮೇಲೆ ಹೊಡೆಯುವುದು ಮೋದಿ ಸರ್ಕಾರದ ಗುರಿ.
- ರಾಹುಲ್ ಗಾಂಧಿ, ವಿಪಕ್ಷ ನಾಯಕ
ತಾತ್ವಿಕ ಅಡಿಪಾಯ ಮೇಲೆಯೇ ದಾಳಿ
ರಾಮನ ಹೆಸರು ಎಳೆದು ತಳಬೇಡಿ. ಭಗವಾನ್ ರಾಮನ ಹೆಸರನ್ನು ದೂಷಿಸಬೇಡಿ. ಹೆಸರು ಬದಲಾವಣೆ ಮಾಡುವುದು ತಾತ್ವಿಕ ಅಡಿಪಾಯದ ಮೇಲಿನ ದಾಳಿ.
- ಶಶಿ ತರೂರ್ ಕಾಂಗ್ರೆಸ್ ಸಂಸದ