ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ : ಸಂಪುಟ ನಿರ್ಣಯಕ್ಕೆ ಉಪರಾಜ್ಯಪಾಲ ಮನೋಜ್‌ ಸಿನ್ಹಾ ಅಸ್ತು

KannadaprabhaNewsNetwork | Updated : Oct 20 2024, 04:57 AM IST

ಸಾರಾಂಶ

ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಸಿಎಂ ಒಮರ್‌ ಅಬ್ದುಲ್ಲಾ ನೇತೃತ್ವದ ಸಚಿವ ಸಂಪುಟ ಅಂಗೀಕರಿಸಿದ ನಿರ್ಣಯವನ್ನು ಶನಿವಾರ ಉಪರಾಜ್ಯಪಾಲ ಮನೋಜ್‌ ಸಿನ್ಹಾ ಅನುಮೋದಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಸಿಎಂ ಒಮರ್‌ ಅಬ್ದುಲ್ಲಾ ನೇತೃತ್ವದ ಸಚಿವ ಸಂಪುಟ ಅಂಗೀಕರಿಸಿದ ನಿರ್ಣಯವನ್ನು ಶನಿವಾರ ಉಪರಾಜ್ಯಪಾಲ ಮನೋಜ್‌ ಸಿನ್ಹಾ ಅನುಮೋದಿದ್ದಾರೆ.

ಒಮರ್‌ ನೇತೃತ್ವದ ಸಂಪುಟ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಬಯಸದೇ ಸಿನ್ಹಾ ಅವರು ನಿರ್ಣಯ ಅನುಮೋದಿಸಿದ್ದಾರೆ ಎಂದು ರಾಜಭವನ ವಕ್ತಾರರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ನಕ್ಸಲರಿಂದ ಐಇಡಿ ಸ್ಫೋಟ: 2 ಐಟಿಬಿಪಿ ಯೋಧರು ಹುತಾತ್ಮ

ನಾರಾಯಣಪುರ: ಛತ್ತೀಸ್‌ಗಢದಲ್ಲಿ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ (ಐಇಡಿ) ಸ್ಫೋಟಗೊಂಡು ಇಂಡೋ ಟಿಬೇಟನ್‌ ಗಡಿ ಪೊಲೀಸ್‌ನ (ಐಟಿಬಿಪಿ) ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.ಮಧ್ಯಾಹ್ನ 12 ಗಂಟೆ ವೇಳೆಗೆ ಕೊಡ್ಲಿಯಾರ್‌ ಗ್ರಾಮದಲ್ಲಿ ಐಟಿಬಿಪಿ ಪೊಲೀಸರು, ಬಿಎಸ್‌ಎಫ್‌ ಮತ್ತು ಛತ್ತೀಸ್‌ಗಢದ ಜಿಲ್ಲಾ ಮೀಸಲು ಪೊಲೀಸರು ಜಂಟಿಯಾಗಿ ನಕ್ಸಲ್‌ ವಿರುದ್ಧ ಕಾರ್ಯಾಚರಣೆ ನಡೆಸಿ ಹಿಂತಿರುಗುತ್ತಿದ್ದರು. ಈ ವೇಳೆ ಐಇಡಿ ಸ್ಫೋಟಗೊಂಡಿದೆ. ಮೃತರಲ್ಲಿ ಒಬ್ಬರು ಮಹಾರಾಷ್ಟ್ರದ ಸತಾರಾದವರಾದರೆ ಇನ್ನೊಬ್ಬರು ಆಂಧ್ರಪ್ರದೇಶದ ಕಡಪಾದವರು.

3 ದಿನದಲ್ಲಿ 1.22 ಲಕ್ಷ ಭಕ್ತರಿಂದ ಅಯ್ಯಪ ದರ್ಶನ: ನೂಕುನುಗ್ಗಲು

ಪಟ್ಟಣಂತಿಟ್ಟ (ಕೇರಳ): ತುಲಾ ಮಾಸದಲ್ಲಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, ಈ ಬಾರಿ ಆ.16ರಿಂದ ಇಲ್ಲಿಯವರೆಗೆ 1.22 ಲಕ್ಷ ಮಂದಿ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಇದರಿಂದ ಸರತಿಯಲ್ಲಿ ನೂಕುನುಗ್ಗಲು ಉಂಟಾಗಿದೆ.ಈ ಬಾರಿ ಆನ್‌ಲೈನ್‌ ಬುಕ್ಕಿಂಗ್‌ನ ಸಂಖ್ಯೆಯೂ ಏರಿಕೆಯಾಗಿದ್ದು, ಶುಕ್ರವಾರ ಮತ್ತು ಶನಿವಾರ 2 ದಿನದಲ್ಲಿ ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ 50,000 ಮಂದಿ ಬುಕ್‌ ಮಾಡಿಕೊಂಡಿದ್ದಾರೆ.ವಾರ್ಷಿಕ ಮಂಡಲ ಪೂಜೆ ಆರಂಭಕ್ಕೂ ಮುನ್ನ ಭಕ್ತರ ಸಂಖ್ಯೆ ಏರಿಕೆಯಾಗಿದ್ದು, ಮುಂದೆ ಮಾಲೆ ಧರಿಸಿ ಬರುವ ಭಕ್ತಾದಿಗಳು ಸಂಖ್ಯೆಯೂ ಅಧಿಕವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಂ ಇಂಟರ್ನ್‌ಶಿಪ್‌ ಯೋಜನೆಯಲ್ಲಿ 1.25 ಅವಕಾಶ

ನವದೆಹಲಿ: ಪಿಎಂ ಇಂಟರ್ನ್‌ಶಿಪ್‌ ಯೋಜನೆಯಡಿಯಲ್ಲಿ ವಿವಿಧ ಕಂಪೆನಿಗಳಿಂದ 1.25 ಲಕ್ಷ ಇಂಟರ್ನ್‌ಶಿಪ್‌ ಅವಕಾಶಗಳು ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.

ಈ ಪೋರ್ಟಲ್ ಅಕ್ಟೋಬರ್‌ 12ರ ಸಂಜೆ 5 ಗಂಟೆಯಿಂದ ಚಾಲನೆಗೊಂಡಿತ್ತು. ಇದರಲ್ಲಿ ಸುಮಾರು 250 ಕಂಪೆನಿಗಳು ನೋಂದಣಿಯಾಗಿದ್ದು, 1.25 ಲಕ್ಷ ಇಂಟರ್ನ್‌ಶಿಪ್‌ ಆಫರ್‌ಗಳನ್ನು ನೀಡಿವೆ. ಈ ಉಪಕ್ರಮವು ಡಿ. 2ರಂದು ಆರಂಭವಾಗಲಿದೆ.ಕಾರ್ಪೋರೇಟ್‌ ವ್ಯವಹಾರಗಳ ಇಲಾಖೆ www.pminternship.mca.gov.in ಅಡಿಯಲ್ಲಿ 21ರಿಂದ 24 ವರ್ಷದ ಯುವಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಯೋಜನೆ ಅಡಿಯಲ್ಲಿ ಯುವಕರಿಗೆ 1 ವರ್ಷದ ವರೆಗೂ ಪ್ರತಿ ತಿಂಗಳು ₹5,000 ಆರ್ಥಿಕ ನೆರವು ನೀಡಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.

ಆನ್‌ಲೈನ್‌ನಲ್ಲೇ ಪಾಕ್‌ ಯುವತಿ ವರಿಸಿದ ಬಿಜೆಪಿ ನಾಯಕನ ಮಗ!

ಲಖನೌ: ಉತ್ತರ ಪ್ರದೇಶ ಜೌನ್‌ಪುರ್‌ ಜಿಲ್ಲೆಯ ಬಿಜೆಪಿ ಕಾರ್ಪೋರೇಟರ್‌ ಮಗನೊಬ್ಬ ಆನ್‌ಲೈನ್‌ನಲ್ಲೇ ಪಾಕಿಸ್ತಾನದ ಯುವತಿಯೊಬ್ಬಳನ್ನು ಮದುವೆಯಾದ ಪ್ರಸಂಗ ನಡೆದಿದೆ.

ಬಿಜೆಪಿ ಕಾರ್ಪೋರೇಟರ್‌ ತೆಹ್ಸಿನ್ ಶಾಹಿದ್ ಅವರು ತಮ್ಮ ಮಗ ಮೊಹಮ್ಮದ್‌ ಅಬ್ಬಾಸ್‌ ಹೈದರ್‌ ವಿವಾಹವನ್ನು ಲಾಹೋರ್‌ನ ತಮ್ಮ ಸಂಬಂಧಿಕರ ಮಗಳಾದ ಆಂಡಲೀಬ್‌ ಜಹಾರಾ ಜತೆ ನಿಶ್ಚಯಿಸಿದ್ದರು.ವರ್ಷದ ಹಿಂದೆಯೇ ವರನ ಕಡೆಯವರು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಿಕ್ಕಿರಲಿಲ್ಲ. ಹುಡುಗಿಯ ತಾಯಿ ರಾಣಾ ಯಾಸ್ಮಿನ್‌ ಜೈದಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಶೀಘ್ರವೇ ಮದುವೆ ಮಾಡಿ ಮುಗಿಸಿಎ ಎಂದು ಒತ್ತಡ ಹೇರಿದ್ದರು. ಆದ್ದರಿಂದ ಆನ್‌ಲೈನ್‌ನಲ್ಲಿಯೇ ವಿವಾಹ ನಡೆಸಲಾಗಿದೆ.

ವರನ ಕಡೆಯ ಸಂಬಂಧಿಯೊಬ್ಬರು ವಧುವಿನ ಮನೆಯನ್ನು ತಲುಪಿದ್ದರು. ಬಳಿಕ ಅನೇಕ ಬಿಜೆಪಿ ನಾಯಕರೂ ಸೇರಿದಂತೆ ಎಲ್ಲ ಸಂಬಂಧಿಕರು ಮೊಬೈಲ್‌ ಮೂಲಕವೇ ವಿವಾಹಕ್ಕೆ ಸಾಕ್ಷಿಯಾದರು.

Share this article