ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ.
ನವದೆಹಲಿ: ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ.
ವಾಡಿಕೆಯಂತೆ ಈ ವರ್ಷ ವಿದೇಶಿ ಅತಿಥಿಯಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಭಾಗಿಯಾಗಲಿದ್ದಾರೆ. ಇವರನ್ನು ಪದ್ಧತಿಯಂತೆ 21 ಗನ್ ಸೆಲ್ಯೂಟ್, ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲಾಗುವುದು.
3 ದಿನ ಭಾರತದಲ್ಲಿರಲಿರುವ ಉರ್ಸುಲಾ ಮತ್ತು ಕೋಸ್ಟಾರ ಆಗಮನ ಕೇವಲ ರಾಜತಾಂತ್ರಿಕ ಸಂಬಂಧದ ಪ್ರತೀಕವಾಗಿರದೆ, ಇಡೀ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದೆ. ಇದಕ್ಕೆ ಕಾರಣ, ಗಣರಾಜ್ಯೋತ್ಸವದ ಮರುದಿನ ಏರ್ಪಡಲಿರುವ ವ್ಯಾಪಾರ ಒಪ್ಪಂದ.
ವಂದೇ ಮಾತರಂ ಪರಿಕಲ್ಪನೆ:
ಈ ಬಾರಿ ಗಣರಾಜ್ಯೋತ್ಸವದಂದು ದೇಶದ ಸೇನಾ ಸಾಮರ್ಥ್ಯ ಮತ್ತು ಶ್ರೀಮಂತ ಸಂಸ್ಕೃತಿ ಸಂಭ್ರಮಿಸಲಾಗುವುದು. ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಣತಂತ್ರ ದಿನವನ್ನು ಅದೇ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದೆ. ಬೆಳಿಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಪಥಸಂಚಲನ ಪ್ರಾರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ. 18 ಕವಾಯತುಗಳ ಪ್ರದರ್ಶನ, 13 ಮಿಲಿಟರಿ ಬ್ಯಾಂಡ್ಗಳು ಭಾಗಿಯಾಗಲಿವೆ. 2500 ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. 10,000 ಅತಿಥಿಗಳು ಭಾಗಿಯಾಗಲಿದ್ದಾರೆ. ಪ್ರಾಣಿಗಳ ಪಡೆಯೂ ಮೊದಲ ಬಾರಿ ಸೇರ್ಪಡೆಗೊಳ್ಳಲಿದೆ.
30 ಸ್ತಬ್ಧ ಚಿತ್ರ, ಸಿಂದೂರದ ಟ್ಯಾಬ್ಲೋ:
ವಂದೇ ಮಾತರಂ ಮತ್ತು ಆತ್ಮ ನಿರ್ಭರ ಕಲ್ಪನೆಯಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ 30 ಟ್ಯಾಬ್ಲೋಗಳು ಕರ್ತವ್ಯಪಥದಲ್ಲಿ ಸಾಗಲಿವೆ. 17 ರಾಜ್ಯಗಳ ಹಾಗೂ 13 ಸಚಿವಾಲಯಗಳ ಪ್ರದರ್ಶನವಿರಲಿವೆ. ಆಪರೇಷನ್ ಸಿಂದೂರದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಗಿರುವುದರಿಂದ ಈ ಬಾರಿ ಪರೇಡ್ನಲ್ಲಿ ‘ಆಪರೇಷನ್ ಸಿಂದೂರ್: ವಿಕ್ಟರಿ ಥ್ರೂ ಜಾಯಿಂಟ್ನೆಸ್‘ ಎಂಬ ಶೀರ್ಷಿಕೆಯಲ್ಲಿ ತ್ರಿಸೇನಾ ಟ್ಯಾಬ್ಲೋ ಪ್ರದರ್ಶಿಸಲಿದೆ. ಕರ್ನಾಟಕದ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ.
ಭಾರತ ಪರ್ವದಲ್ಲಿ ಕರ್ನಾಟಕ ಟ್ಯಾಬ್ಲೋ:
ಕರ್ತವ್ಯಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗದೊದ್ದರೂ ಕೆಂಪು ಕೋಟೆಯಲ್ಲಿ ಅಯೋಜಿಸುವ ಭಾರತ ಪರ್ವದಲ್ಲಿ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ವರೆಗೆ(ಮಿಲೆಟ್ ಟು ಮೈಕ್ರೋಚಿಪ್) ಎಂಬ ಸ್ಥಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕೃಷಿಯಿಂದ ಕೈಗಾರಿಕೆ ವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಪಯಣವನ್ನು ಪ್ರದರ್ಶಿಸಲಿದೆ.
ಯುದ್ಧ ವಿಮಾನ ಪ್ರದರ್ಶನ:
ವೈಮಾನಿಕ ಕಸರತ್ತಿನ ವೇಳೆ ಭಾರತೀಯ ವಾಯುಪಡೆಯ 7 ಯುದ್ಧ ವಿಮಾನಗಳು ಆಪರೇಷನ್ ಸಿಂದೂರದ ರಚನೆ ಮಾಡಲಿವೆ. ಇದರಲ್ಲಿ 2 ರಫೇಲ್, 2 ಸುಖೋಯ್-30 ಎಂಕೆಐ, 2 ಮಿಗ್ 29 ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನಗಳು ಭಾಗವಹಿಸಲಿವೆ. ಗರುಡ ಮತ್ತು ಪ್ರಹಾರ್ ಎಂಬ ಇನ್ನು ಎರಡು ರಚನೆಗಳನ್ನು ವಾಯುಪಡೆ ರಚಿಸಲಿದೆ. ವಾಯುಪಡೆಯ 26 ವಿಮಾನಗಳು ಭಾಗವಹಿಸಲಿವೆ.
ಮುರ್ಮುಗೆ ಮಹಿಳಾ ಅಧಿಕಾರಿ ಸಾಥ್:
ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜ ಅನಾವರಣ ಮಾಡುವ ವೇಳೆ, ಭಾರತೀಯ ವಾಯುಪಡೆಯ ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಅಕ್ಷಿತಾ ಧನಕರ್ ಅವರು ಜತೆಗಿರಲಿದ್ದಾರೆ. ಇವರು ಹರ್ಯಾಣದವರಾಗಿದ್ದಾರೆ.
ಹೇಗಿರಲಿದೆ ಬೀಟಿಂಗ್ ರೀಟ್ರೀಟ್ ?
ಜ.29ರಂದು ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ನಡೆಯಲಿದೆ. ಇದು ಗಣರಾಜ್ಯೋತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಮಾರಂಭವನ್ನು ದೆಹಲಿಯ ವಿಜಯ್ ಚೌಕ್ನಲ್ಲಿ ನಡೆಸಲಾಗುತ್ತದೆ. ಸೇನೆ, ನೌಕಾಪಡೆ, ವಾಯುಪಡೆ, ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳು ಬ್ಯಾಂಡ್ಗಳಿಂದ ಸಂಗೀತ ಪ್ರದರ್ಶನ ನೀಡುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಪತಿ ವಹಿಸುತ್ತಾರೆ. 1950ರ ದಶಕದಲ್ಲಿ ಮೊದಲು ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರ ಭೇಟಿಯ ಸಮಯದಲ್ಲಿ ನಡೆಸಲಾಯಿತು. ಅಂದಿನಿಂದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗದ ಗೌರವಾರ್ಥ ನಡೆಸಿಕೊಂಡು ಬರಲಾಗುತ್ತಿದೆ.

