ನವದೆಹಲಿ: ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ಸೇರಿದಂತೆ ನಾಲ್ವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ತಮಿಳುನಾಡಿನಿಂದ ಕಮಲ್ ರಾಜ್ಯಸಭೆಗೆ ಪ್ರವೇಶಿಸಿದ್ದರು. ಉಳಿದಂತೆ ಡಿಎಂಕೆಯ ರಜತಿ, ಎಸ್. ಆರ್. ಶಿವಲಿಂಗಂ, ಪಿ. ವಿಲ್ಸನ್ ಸೇರಿದಂತೆ ನಾಲ್ವರೂ ತಮಿಳಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಗುರುವಾರ ತಮಿಳುನಾಡಿನ 6 ರಾಜ್ಯಸಭಾ ಸದಸ್ಯರು ಅವಧಿ ಪೂರೈಸಿದ ಹಿನ್ನೆಲೆ ನಿವೃತ್ತಿ ಹೊಂದಿದ್ದರು.
ಕಮಲ್ ಇತ್ತೀಚೆಗೆ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು.
ಇಂಟೆಲ್‌ನಿಂದ ಈ ವರ್ಷ 24 ಸಾವಿರ ಉದ್ಯೋಗ ಕಡಿತ
ನ್ಯೂಯಾರ್ಕ್: ಅಮೆರಿಕದ ಪ್ರಮುಖ ಚಿಪ್ ಉತ್ಪಾದನಾ ಸಂಸ್ಥೆ ಇಂಟೆಲ್ ಕಂಪನಿ ಈ ವರ್ಷಾಂತ್ಯದಲ್ಲಿ 24 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡಲಿದೆ. ಸಂಸ್ಥೆಯ ಪುನರ್ ರಚನೆ ಭಾಗವಾಗಿ ಈ ಉದ್ಯೋಗ ಕಡಿತ ನಡೆಯಲಿದೆ ಎಂದು ಹೇಳಲಾಗಿದೆ.ತೀವ್ರಗತಿಯಲ್ಲಿ ಬೆಳೆಯುತ್ತಿರುವ ಎಐ ಚಿಪ್ ಮಾರುಕಟ್ಟೆಯಲ್ಲಿ ಕಂಪನಿಯು ನಿರೀಕ್ಷಿತ ಸಾಧನೆ ತೋರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಸಿಇಒ ಲಿಪ್-ಬು ಟಾನ್ ಅವರು ವೆಚ್ಟ ಕಡಿತಕ್ಕೆ ಮುಂದಾಗಿದ್ದಾರೆ. ಅದರ ಭಾಗವಾಗಿ ದೊಡ್ಡಮಟ್ಟದ ಉದ್ಯೋಗ ಕಡಿತಕ್ಕೆ ಕೈಹಾಕಿದ್ದಾರೆ.
2024ರ ಅಂತ್ಯದಲ್ಲಿ ಇಂಟೆಲ್ ಕಂಪನಿ ವಿಶ್ವಾದ್ಯಂತ 1.09 ಲಕ್ಷ ಸಿಬ್ಬಂದಿ ಹೊಂದಿದೆ. ಸಿಬ್ಬಂದಿ ಪುನರ್ ರಚನೆ ಬಳಿಕ ಸಂಸ್ಥೆಯ ಸಿಬ್ಬಂದಿ ಸಂಖ್ಯೆ ಸುಮಾರು 75 ಸಾವಿರಕ್ಕಿಳಿಯಲಿದೆ. ಉದ್ಯೋಗ ಕಡಿತ ಮತ್ತು ಲಾಭದಾಯಕವಲ್ಲದ ಕ್ಷೇತ್ರಗಳಿಂದ ಹೊರಬರುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಇದರ ಪರಿಣಾಮ ಕಂಪನಿಯ ಜರ್ಮನಿ, ಪೋಲ್ಯಾಂಡ್, ಕೋಸ್ಟರಿಕಾ ಮತ್ತು ಅಮೆರಿಕದ ಯೋಜನೆಗಳ ಮೇಲೂ ಬೀಳಲಿದೆ ಎಂದು ಹೇಳಲಾಗಿದೆ.ಈ ಹಿಂದೆ ಇಂಟೆಲ್ ಕಂಪನಿಯು ಜರ್ಮನಿ ಮತ್ತು ಪೋಲೆಂಡ್‌ನಲ್ಲಿ ಶತಕೋಟಿ ಡಾಲರ್‌ನ ಕಾರ್ಖಾನೆಗಳನ್ನು ಸ್ಥಾಪಿಸಲು ಉದ್ದೇಶಿಸಿತ್ತು. ವೆಚ್ಚಕಡಿತದ ಭಾಗವಾಗಿ ಕಂಪನಿಯು ಈ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾಪವನ್ನು ಮುಂದೂಡಿತ್ತು. ಇದೀಗ ಸಂಪೂರ್ಣವಾಗಿ ಕೈಬಿಡಲು ಉದ್ದೇಶಿಸಿದೆ.
ಮದುವೆಗೂ ಮುನ್ನ ಎಚ್‌ಐವಿ ಪರೀಕ್ಷೆ ಕಡ್ಡಾಯಕ್ಕೆ ಕಾನೂನು ಜಾರಿಗೆ ಮೇಘಾಲಯ ಚಿಂತನೆ
ಶಿಲ್ಲಾಂಗ್: ರಾಜ್ಯದಲ್ಲಿ ಹೆಚ್ಚುತ್ತಿರುವ ಎಚ್‌ಐವಿ/ಏಡ್ಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮದುವೆಗೆ ಮೊದಲು ಎಚ್‌ಐವಿ/ಏಡ್ಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಹೊಸ ಕಾನೂನನ್ನು ರೂಪಿಸುವ ಬಗ್ಗೆ ಮೇಘಾಲಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವೆ ಅಂಪರೀನ್ ಲಿಂಗ್ಡೋ ಶುಕ್ರವಾರ ಹೇಳಿದ್ದಾರೆ.ಹೊಸ ಕಾನೂನು ರಚಿಸಲು ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸಾಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಆ ಬಳಿಕ ಮಾತನಾಡಿದ ಅವರು, ‘ಎಚ್‌ಐವಿ ಹರಡುವಿಕೆಯಲ್ಲಿ ಮೇಘಾಲಯ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ರಾಜ್ಯದ ಪೂರ್ವ ಖಾಸಿ ಹಿಲ್ಸ್ ಒಂದರಲ್ಲೇ 3,432 ಎಚ್‌ಐವಿ/ಏಡ್ಸ್ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ ಕೇವಲ 1,581 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವಾಗ, ಮೇಘಾಲಯ ತನ್ನದೇ ಆದ ಕಾನೂನುಗಳನ್ನು ಏಕೆ ಹೊಂದಿರಬಾರದು? ಈ ಕಾನೂನುಗಳು ದೊಡ್ಡ ಸಮುದಾಯಕ್ಕೆ ಪ್ರಯೋಜನ ನೀಡುತ್ತವೆ’ ಎಂದರು.
ನಾಡಿದ್ದಿನಿಂದ ಸುಗಮ ಕಲಾಪ ಸಂಭವ
ನವದೆಹಲಿ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಮುಂಗಾರು ಅಧಿವೇಶನದ 5ನೇ ದಿನವಾದ ಶುಕ್ರವಾರ ಕೂಡ ಉಭಯ ಸದನಗಳಲ್ಲೂ ಕಲಾಪ ಸಾಧ್ಯವಾಗಲಿಲ್ಲ. ಆದರೆ ಸೋಮವಾರದಿಂದ ಸುಗಮ ಕಲಾಪ ನಡೆಸಲು ಆಡಳಿತ ಹಾಗೂ ವಿಪಕ್ಷಗಳು ಸಮ್ಮತಿಸಿವೆ.
ಶುಕ್ರವಾರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಘೋಷಣೆ ಕೂಗಿ, ತೀವ್ರ ಪ್ರತಿಭಟನೆ ನಡೆಸಿದವು. ಹೀಗಾಗಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.ಬಳಿಕ ಶುಕ್ರವಾರ ವಿವಿಧ ಪಕ್ಷಗಳ ಹಿರಿಯ ನಾಯಕರ ಜೊತೆ ಸಭೆ ನಡೆಸಿದ ಬಿರ್ಲಾ, ’ಸೋಮವಾರ ಆಪರೇಷನ್ ಸಿಂದೂರ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಎಲ್ಲ ನಾಯಕರು ಸಮ್ಮತಿಸಿದ್ದಾರೆ’ ಎಂದರು.
ವಿಪಕ್ಷಗಳ ಬೇಡಿಕೆಯಂತೆ, ಜು.28ರಂದು ಲೋಕಸಭೆಯಲ್ಲಿ ಹಾಗೂ ಜು.29ರಂದು ರಾಜ್ಯಸಭೆಯಲ್ಲಿ ಆಪರೇಷನ್ ಸಿಂದೂರದ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಹಾಗಾಗಿ ಸೋಮವಾರದಿಂದ ಕಲಾಪ ಸುಗಮವಾಗಿ ನಡೆಯುವ ನಿರೀಕ್ಷೆಯಿದೆ.ಬಳಿಕ ಬಿಹಾರ ಮತಪಟ್ಟಿ ಪರಿಷ್ಕರಣೆ ಕುರಿತ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ಸಂಸದೀಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಜುಮ್ಮು ಗಡಿಯಲ್ಲಿ ನೆಲಬಾಂಬ್ ಸ್ಫೋಟ: ಅಗ್ನಿವೀರ ಯೋಧ ಹುತಾತ್ಮ
ಪೂಂಛ್: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಶುಕ್ರವಾರ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಒಬ್ಬ ಅಗ್ನಿವೀರ ಯೋಧ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಕೃಷ್ಣ ಘಾಟಿ ಪ್ರದೇಶದಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ 7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ ಲಲಿತ್ ಕುಮಾರ್ ಮರಣವನ್ನಪ್ಪಿದ್ದಾರೆ. ಇನ್ನಿಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಗ್ನಿವೀರ ಲಲಿತ್ ಕುಮಾರ್ ಅವರ ಬಲಿದಾನಕ್ಕೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬದ ಜೊತೆ ನಿಲ್ಲುವುದಾಗಿ ಭರವಸೆ ನೀಡಿದೆ.