ಪಾಕ್‌ ದಾಳಿಗೆ ಕನ್ನಡಿಗ ರಾವ್‌ರ ಆಕಾಶ್‌ ಏರ್‌ ಡಿಫೆನ್ಸ್‌ನಿಂದ ತಡೆ

Follow Us

ಸಾರಾಂಶ

ಪಾಕ್‌ ಕಡೆಯಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್‌ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.

 ನವದೆಹಲಿ: ಆಪರೇಷನ್‌ ಸಿಂದೂರದ ಭಾಗವಾಗಿ ಒಂದು ಕಡೆ ಬೆಂಗಳೂರಿನಲ್ಲಿ ಉತ್ಪಾದಿಸಲಾದ ‘ಸ್ಕೈ ಸ್ಟ್ರೈಕರ್‌’ ಆತ್ಮಾಹುತಿ ಡ್ರೋನ್‌ ಪಾಕಿಸ್ತಾನದ ಮೇಲೆರಗಿ ಉಗ್ರರ ನೆಲೆಗಳನ್ನು ಆಹುತಿ ಪಡೆಯುತ್ತಿದ್ದರೆ, ಇನ್ನೊಂದೆಡೆ ಪಾಕ್‌ ಕಡೆಯಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್‌ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಪದ್ಮಶ್ರೀ ಪುರಸ್ಕೃತ ಡಾ. ಪ್ರಹ್ಲಾದ್‌ ರಾಮ ರಾವ್‌(78) ಅವರು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆಕಾಶ್‌ ಯೋಜನೆಯ ಅತಿ ಕಿರಿಯ ಯೋಜನಾ ನಿರ್ದೇಶಕರಾಗಿದ್ದರು. ಇವರಿಗೆ ಭಾರತದ ಕ್ಷಿಪಣಿ ಮನುಷ್ಯ ಎಂದೇ ಖ್ಯಾತರಾಗಿರುವ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರೇ ಈ ಜವಾಬ್ದಾರಿ ವಹಿಸಿದ್ದರು ಎನ್ನುವುದು ವಿಶೇಷ.

ಹೈದರಾಬಾದ್‌ನಲ್ಲಿರುವ ಭಾರತ್ ಡೈನಾಮಿಕ್ಸ್ ಲಿ.ನಲ್ಲಿ ಉತ್ಪಾದನೆಯಾಗುತ್ತಿರುವ ಆಕಾಶ್‌ ವ್ಯವಸ್ಥೆಯನ್ನು 15 ವರ್ಷದ ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದ್ದು, ಅದು ಇಂದು ದೇಶರಕ್ಷಣೆಗೆ ನಿಂತಿರುವುದನ್ನು ನೋಡಿ ರಾಮರಾವ್‌, ‘ನನ್ನ ಮಗು ನಿಖರವಾಗಿ ಕೆಲಸ ಮಾಡುತ್ತ ವೈರಿಯ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುತ್ತಿರುವುದನ್ನು ನೋಡುತ್ತಿದ್ದರೆ, ಇದು ಜೀವನದಲ್ಲೇ ನನ್ನ ಪಾಲಿಗೆ ಸಂತಸದ ದಿನ ಎನಿಸುತ್ತಿದೆ. ಅದು ನಿರೀಕ್ಷೆಗೂ ಮೀರಿ ಅದ್ಭುತವಾಗಿ ಕೆಲಸ ಮಾಡುತ್ತಿದೆ’ ಎಂದು ಭಾವುಕವಾಗಿ ನುಡಿದಿದ್ದಾರೆ.

ಇದೇ ವೇಳೆ, ಡ್ರೋನ್‌ಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ ಅಷ್ಟೇ ಅಲ್ಲದೆ, ಅಮೆರಿಕದ ಎಫ್‌-16 ಯುದ್ಧವಿಮಾನಗಳನ್ನೂ ತಡೆಹಿಡಿಯಬಲ್ಲ ಆಕಾಶ್‌ ವ್ಯವಸ್ಥೆಯನ್ನು ದೇಶರಕ್ಷಣೆಗೆ ಬಳಸಲು ಸೇನೆ ಹಿಂದೇಟು ಹಾಕುತ್ತಿದ್ದುದನ್ನೂ ಅವರು ನೆನೆದಿದ್ದಾರೆ.

ಡಾ. ಪ್ರಹ್ಲಾದ್‌ ಯಾರು ?:

1947ರಲ್ಲಿ ಬೆಂಗಳೂರಿನಲ್ಲಿ (ಅಂದಿನ ಮದ್ರಾಸ್‌ ಸಂಸ್ಥಾನ) ಜನಿಸಿದ ಪ್ರಹ್ಲಾದ್‌ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್‌ ಪದವಿ, ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಏರೋನಾಟಿಕಲ್‌ ಮತ್ತು ಆಸ್ಟ್ರಾನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

1971ರಲ್ಲಿ ಡಿಆರ್‌ಡಿಒದ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ರಾಮರಾವ್‌, ಬಳಿಕ 1997ರಲ್ಲಿ ಅದರ ನಿರ್ದೇಶಕರಾಗಿ ಬಡ್ತಿ ಪಡೆದರು. ಇವರು ಪುಣೆಯ ಡಿಐಡಟಿಯ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಾಧನಾ ಸಂಸ್ಥಾನದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಆಕಾಶ್‌ ಹೊಣೆ ರಾವ್‌ರದ್ದು

ಹೈದ್ರಾಬಾದ್‌ನ ಡಿಆರ್‌ಡಿಒ ಕೇಂದ್ರದಲ್ಲಿದ್ದ ಡಾ.ಪ್ರಹ್ಲಾದ್‌ ರಾವ್‌

ಈ ವೇಳೆ ರಾವ್‌ಗೆ ಆಕಾಶ್‌ ಹೊಣೆ ವಹಿಸಿದ್ದ ಡಾ. ಅಬ್ದುಲ್‌ ಕಲಾಂ

ಸತತ 15 ವರ್ಷದ ಪರಿಶ್ರಮದಿಂದ ಆಕಾಶ್‌ ಏರ್‌ಡಿಫೆನ್ಸ್‌ ಅಭಿವೃದ್ಧಿ

ಇದೀಗ ದೇಶ ರಕ್ಷಣೆಯಲ್ಲಿ ವ್ಯವಸ್ಥೆ ಕ್ಷಮತೆ ನೋಡಿ ರಾವ್‌ಗೆ ಸಂಭ್ರಮ