ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯದ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ಜಿಲ್ಲಾಡಳಿತದ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ಧ್ವಜಾರೋಹಣ ನೆರವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.
ಕೇಂದ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೂ ಅಗತ್ಯ ನೆರವು ನೀಡಬೇಕು. ಆದರೆ, ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಹಣದ ಸಮರ್ಪಕ ಪಾಲು ರಾಜ್ಯಕ್ಕೆ ದೊರೆಯುವುದು ಅತ್ಯಗತ್ಯ. ಇತರ ರಾಜ್ಯಗಳ ಅಭಿವೃದ್ಧಿಗೆ ಕರ್ನಾಟಕದ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ. ಹೆದ್ದಾರಿಗಳ ನಿರ್ಮಾಣ ಸೇರಿದಂತೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದ ತೆರಿಗೆ ಆದಾಯ ಬಳಕೆಯಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಶೀಘ್ರ ಗುಣಮುಖರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದರು.