ಬೆಂಗಳೂರು : ಡಿಜಿಟಲ್ ವಂಚನೆಯ ಪರ್ವ ಮುಂದುವರಿದಿದೆ. ಖಾಸಗಿ ಫೈನಾನ್ಸ್ ಕಂಪನಿಯೊಂದರ ಆ್ಯಪ್ ಹ್ಯಾಕ್ ಮಾಡಿ ಕೇವಲ ಎರಡೂವರೆ ತಾಸಲ್ಲಿ 49 ಕೋಟಿ ರು. ದೋಚಿದ್ದ ಸೈಬರ್ ವಂಚನೆ ಜಾಲದ ಇಬ್ಬರು ದುಷ್ಕರ್ಮಿಗಳನ್ನು ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಉದಯಪುರದ ಸಂಜಯ್ ಪಾಟೀಲ್ ಹಾಗೂ ಬೆಳಗಾವಿಯ ಇಸ್ಮಾಯಿಲ್ ರಶೀದ್ ಅತ್ತಾರ್ ಬಂಧಿತರು. ಇವರು ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಿದ್ದ 10 ಕೋಟಿ ರು. ಅನ್ನು ಈ ವೇಳೆ ಜಪ್ತಿ ಮಾಡಲಾಗಿದೆ. ಇನ್ನು ದುಬೈನಲ್ಲಿರುವ ಈ ವಂಚಕ ಜಾಲದ ಇಬ್ಬರು ಮಾಸ್ಟರ್ ಮೈಂಡ್‌ಗಳ ಬಗ್ಗೆ ಹಾಗೂ ಉಳಿದ 39 ಕೋಟಿ ರು. ಹಣ ಜಪ್ತಿಗೆ ತನಿಖೆ ಮುಂದುವರಿದಿದೆ.
ಕೆಲ ದಿನಗಳ ಹಿಂದೆ ವಿಸ್ಡಂ ಫೈನಾನ್ಸ್ ಕಂಪನಿಯ ಆ್ಯಪ್ ಹ್ಯಾಕ್ ಮಾಡಿ ಹಣ ದೋಚಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಾಜಸ್ಥಾನ ಹಾಗೂ ಬೆಳಗಾವಿಯಲ್ಲಿ ಇಬ್ಬರನ್ನು ಬಂಧಿಸಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವಿಸ್ಡಂ ಫೈನಾನ್ಸ್ ಕಂಪನಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ. ಈ ಕಂಪನಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೆಲವೇ ತಾಸಲ್ಲಿ ಗ್ರಾಹಕರಿಗೆ ಸಾಲ ಒದಗಿಸುತ್ತದೆ. ಆದರೆ ಇದಕ್ಕೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಪ್ರತ್ಯೇಕ ಆ್ಯಪ್ ಅನ್ನು ಗ್ರಾಹಕರಿಗೆ ನೀಡಿದೆ. ಈ ಆ್ಯಪ್ ಅನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರ ಜಾಲ, ಎರಡೂವರೆ ತಾಸಲ್ಲಿ 49 ಕೋಟಿ ರು. ಅನ್ನು 1,782 ವ್ಯಕ್ತಿಗಳ ಹೆಸರಿನಲ್ಲಿ 656 ವಿವಿಧ ನಕಲಿ ಖಾತೆಗಳಿಗೆ ವರ್ಗಾಯಿಸಿತ್ತು.
ಈ ಗ್ಯಾಂಗ್‌ನ ರಾಜಸ್ಥಾನ ಮೂಲದ ಇಬ್ಬರು ಮಾಸ್ಟರ್ ಮೈಂಡ್‌ಗಳು ದುಬೈನಲ್ಲಿ ನೆಲೆಸಿದ್ದಾರೆ. ಇವರು ಟೆಲಿಗ್ರಾಂ ಆ್ಯಪ್ ಮೂಲಕ ಇತರೆ ಆರೋಪಿಗಳನ್ನು ಸಂಘಟಿಸಿದ್ದರು. ಬಳಿಕ ಹಾಂಕಾಂಗ್ ಹ್ಯಾಕರ್‌ಗಳ ಮೂಲಕ ಆ್ಯಪ್ ಹ್ಯಾಕ್ ಮಾಡಿಸಿ ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಇದಕ್ಕೆ ಅಗತ್ಯವಾದ ನಕಲಿ ಬ್ಯಾಂಕ್ ಖಾತೆಗಳನ್ನು ಬೆಳಗಾವಿಯ ಅತ್ತಾರ್ ಪೂರೈಸಿದ್ದರೆ, ಐದು ಸರ್ವರ್‌ಗಳನ್ನು ರಾಜಸ್ಥಾನದ ಸಂಜಯ್ ಪಾಟೀಲ್ ನೀಡಿದ್ದ. ವಿಸ್ಡಂ ಕಂಪನಿಯಿಂದ 27.39 ಲಕ್ಷ ಹಣ ಸಂಜಯ್ ಪಾಟೀಲ್ ಖಾತೆಗೆ ವರ್ಗಾವಣೆಯಾಗಿತ್ತು. ಹಾಗೆಯೇ 5.5 ಕೋಟಿ ರು. ಹಣ ಎಥೆನಾಲ್ ಸೈನ್ಸ್ ಟೆಕ್ ಕಂಪನಿಯ ಹೈದರಾಬಾದ್ ಖಾತೆಗೆ ಜಮೆಯಾಗಿತ್ತು.
ಓದಿದ್ದು ಬರೀ 10ನೇ ಕ್ಲಾಸ್
ಸೈಬರ್ ವಂಚನೇಲಿ ಮಾಸ್ಟರ್!
ಸಂಜಯ್ ಪಾಟೀಲ್ ಓದಿದ್ದು 8ನೇ ತರಗತಿ, ಈತ ಕೊಳಾಯಿ ರಿಪೇರಿ ಕೆಲಸಗಾರನಾಗಿದ್ದ. ಇನ್ನು ಅತ್ತಾರ್ 10ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ತೊಡಗಿದ್ದ.
ವಂಚಕರ ಕೃತ್ಯ ಏನು?
- ಖಾಸಗಿ ಫೈನಾನ್ಸ್ ಕಂಪನಿ ಆ್ಯಪ್ ಹ್ಯಾಕ್ ಮಾಡಿದ್ದರು
- 656 ನಕಲಿ ಖಾತೆಗೆ 49 ಕೋಟಿ ರು. ವರ್ಗ ಮಾಡಿದ್ದರು
- ದುಬೈ ಮಾಸ್ಟರ್ ಮೈಂಡ್‌ಗಳಿಂದ ಹ್ಯಾಕ್‌ಗೆ ನೆರವು
- ಕಂಪನಿ ದೂರು ನೀಡುತ್ತಿದ್ದಂತೆಯೇ ಪೊಲೀಸರ ತನಿಖೆ
- ಬೆಳಗಾವಿ, ರಾಜಸ್ಥಾನದ ಇಬ್ಬರ ಸೆರೆ, ₹10 ಕೋಟಿ ಜಪ್ತಿ
- ಬಾಕಿ ₹39 ಕೋಟಿ ಜಪ್ತಿಗೆ, ಉಳಿದವರ ಬಂಧನಕ್ಕೆ ಕ್ರಮ