ಐತಿಹಾಸಿಕ ರಣಜಿ ಕಿರೀಟ ಮೇಲೆ ಕರ್ನಾಟಕ ಕಣ್ಣು

Published : Feb 24, 2026, 12:17 PM IST
Ranaji

ಸಾರಾಂಶ

8 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಜಮ್ಮು-ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಟೂರ್ನಿಯ ಫೈನಲ್‌ ಮಂಗಳವಾರ ನಗರದಲ್ಲಿ ಆರಂಭವಾಗಲಿದೆ.

ಅಜೀಜ ಅಹ್ಮದ ಬಳಗಾನೂರ

 ಹುಬ್ಬಳ್ಳಿ : 8 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಜಮ್ಮು-ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಟೂರ್ನಿಯ ಫೈನಲ್‌ ಮಂಗಳವಾರ ನಗರದಲ್ಲಿ ಆರಂಭವಾಗಲಿದೆ. ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣ ಇದೇ ಮೊದಲ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ಆತಿಥ್ಯ ವಹಿಸಲಿದ್ದು, ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ದಶಕದ ಬಳಿಕ ಫೈನಲ್ :

2014-15ರಲ್ಲಿ ಕರ್ನಾಟಕ ತಂಡವು ಕೊನೆ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಫೈನಲ್ ಪ್ರವೇಶಿಸಿರಲಿಲ್ಲ. ಈ ಬಾರಿ 7 ಲೀಗ್ ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ, ಒಂದು ಪಂದ್ಯ ಸೋತಿದೆ. ಮುಂಬೈ ವಿರುದ್ಧ ಕ್ವಾಟರ್‌ನಲ್ಲಿ ಅಮೋಘ ಗೆಲುವು ಸಾಧಿಸಿದ್ದ ತಂಡ, ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧದ ಪಂದ್ಯ ಡ್ರಾ ಮಾಡಿಕೊಂಡಿತ್ತು. ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದರಿಂದ ಫೈನಲ್ ತಲುಪಿದೆ.

ಮತ್ತೊಂದೆಡೆ, ಜಮ್ಮು-ಕಾಶ್ಮೀರ 67 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದೆ. ಈ ಬಾರಿ ಅಜೇಯವಾಗಿರುವ ತಂಡ ಮಧ್ಯಪ್ರದೇಶದ ವಿರುದ್ಧ ಕ್ವಾಟರ್ ಫೈನಲ್‌ ಹಾಗೂ ಮಾಜಿ ಚಾಂಪಿಯನ್ ಪಶ್ಚಿಮ ಬಂಗಾಳ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದೆ.

ಭಾರೀ ಪೈಪೋಟಿ ನಿರೀಕ್ಷೆ:

ಕರ್ನಾಟಕ ತಂಡ ಸ್ಟಾರ್‌ ಆಟಗಾರರಿಂದ ತುಂಬಿದ್ದು, ಗೆಲುವಿನ ವಿಶ್ವಾಸದಲ್ಲಿದೆ. ಕೆ.ಎಲ್‌.ರಾಹುಲ್‌(3 ಪಂದ್ಯದಲ್ಲಿ 457 ರನ್‌), ಕರುಣ್ ನಾಯರ್‌(8 ಪಂದ್ಯದಲ್ಲಿ 699 ರನ್‌), ನಾಯಕ ದೇವದತ್‌ ಪಡಿಕ್ಕಲ್‌(5 ಪಂದ್ಯದಲ್ಲಿ 532 ರನ್‌), ಆರ್‌.ಸ್ಮರಣ್‌(8 ಪಂದ್ಯದಲ್ಲಿ 950 ರನ್‌) ತಂಡದ ಆಧಾರಸ್ತಂಭಗಳಾಗಿದ್ದಾರೆ. ಮಯಾಂಕ್‌ ಅಗರ್‌ವಾಲ್‌ ಕೂಡಾ ತಂಡದಲ್ಲಿದ್ದಾರೆ. ಶ್ರೇಯಸ್‌ ಗೋಪಾಲ್‌(9 ಪಂದ್ಯದಲ್ಲಿ 46 ವಿಕೆಟ್ ಹಾಗೂ 442 ರನ್‌) ಆಲ್ರೌಂಡ್‌ ಆಟ ತಂಡಕ್ಕೆ ನಿರ್ಣಾಯಕವಾಗಿದ್ದು, ಬೌಲಿಂಗ್‌ನಲ್ಲಿ ವಿದ್ವತ್‌ ಕಾವೇರಪ್ಪ, ವೈಶಾಖ್‌, ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್‌ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ.

ಅತ್ತ ಜಮ್ಮು-ಕಾಶ್ಮೀರ ತಂಡ ತನ್ನ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದು, ಕರ್ನಾಟಕ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದೆ. 9 ಪಂದ್ಯದಲ್ಲಿ ಬರೋಬ್ಬರಿ 55 ವಿಕೆಟ್‌ ಪಡೆದಿರುವ ವೇಗಿ ಆಕಿಬ್‌ ನಬಿ ತಂಡದ ಟ್ರಂಪ್‌ಕಾರ್ಡ್‌. ಸುನಿಲ್‌ ಕುಮಾರ್‌(29 ವಿಕೆಟ್‌) ತಂಡದಲ್ಲಿರುವ ಮತ್ತೋರ್ವ ಪ್ರಮುಖ ಬೌಲರ್‌. ಆದರೆ ತಂಡದಲ್ಲಿ ಗಾಯದ ಸಮಸ್ಯೆ ಇದೆ. ಅಗ್ರ ಕ್ರಮಾಂಕದ ಬ್ಯಾಟರ್‌ ಶುಭಮ್‌ ಕಜೂರಿಯಾ ಹಾಗೂ ಎಡಗೈ ಸ್ಪಿನ್ನರ್‌ ವನ್ಶರಾಜ್‌ ಶರ್ಮಾ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನಿಸಿದೆ. ಆಲ್ರೌಂಡರ್‌ ಅಬ್ದುಲ್‌ ಸಮದ್‌ ತಂಡಕ್ಕೆ ಬಲ ಒದಗಿಸಲಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್‌, ಜಿಯೋಹಾಟ್‌ಸ್ಟಾರ್‌.

ಪಂದ್ಯ ವೀಕ್ಷಣೆಗೆ ಟಿಕೆಟ್‌

ಫೈನಲ್‌ ಪಂದ್ಯ ವೀಕ್ಷಣೆಗೆ ಈ ಬಾರಿ ಉಚಿತ ಪ್ರವೇಶವಿಲ್ಲ. ವೀಕ್ಷಕರಿಗಾಗಿ ಕ್ರೀಡಾಂಗಣದ 3 ಮತ್ತು 4ನೇ ದ್ವಾರಗಳಿಂದ ಪ್ರವೇಶ ಕಲ್ಪಿಸಲಾಗಿದೆ. 3ನೇ ಗೇಟ್ ಮೂಲಕ ಪ್ರವೇಶಕ್ಕೆ ₹200 ಹಾಗೂ 4ನೇ ಗೇಟ್ ಪ್ರವೇಶಕ್ಕೆ ₹100 ನಿಗದಿಗೊಳಿಸಲಾಗಿದೆ. ಪ್ರತಿದಿನ ಬೆಳಗ್ಗೆ 8.30ರಿಂದ ಟಿಕೆಟ್ ವಿತರಣೆ ಪ್ರಾರಂಭವಾಗಲಿದೆ. ದಿನಕ್ಕೆ 5000 ಟಿಕೆಟ್‌ ಮಾತ್ರ ನೀಡಲಾಗುತ್ತದೆ. ನಗದು ಹಾಗೂ ಯುಪಿಐ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

15ನೇ ಫೈನಲ್‌, 9ನೇ

ಟ್ರೋಫಿ ಜಯದ ಕನಸು

ಕರ್ನಾಟಕ ತಂಡ 15ನೇ ಬಾರಿ ರಣಜಿ ಫೈನಲ್‌ ಆಡುತ್ತಿದೆ. ಈ ಹಿಂದೆ 8 ಬಾರಿ ಟ್ರೋಫಿ ಗೆದ್ದಿದ್ದರೆ, 6 ಬಾರಿ ಫೈನಲ್‌ನಲ್ಲಿ ಸೋತಿದೆ. 42 ಬಾರಿ ಚಾಂಪಿಯನ್‌ ಆಗಿರುವ ಮುಂಬೈ ರಣಜಿಯಲ್ಲಿ ಅತ್ಯಂತ ಯಶಸ್ವಿ ತಂಡ. ಟ್ರೋಫಿ ಗಳಿಕೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ