ಗಂಗೇಲಿ ಮಿಂದರೆ ಬಡತನ ಹೋಗುತ್ತಾ? : ಕುಂಭಮೇಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ, ವಿವಾದ

KannadaprabhaNewsNetwork |  
Published : Jan 28, 2025, 12:50 AM ISTUpdated : Jan 28, 2025, 04:47 AM IST
Mallikarjun Kharge

ಸಾರಾಂಶ

‘ಗಂಗಾ ಸ್ನಾನ ಮಾಡಿದರೆ ಬಡತನ ಕೊನೆಯಾಗುತ್ತಾ? ಅದು ನಿಮ್ಮ ಹೊಟ್ಟೆ ತುಂಬಿಸುತ್ತದೆಯೇ? ಬಿಜೆಪಿಯವರು ಕ್ಯಾಮರಾಗಳಲ್ಲಿ ಚೆನ್ನಾಗಿ ಸ್ನಾನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಮೊವ್‌: ‘ಗಂಗಾ ಸ್ನಾನ ಮಾಡಿದರೆ ಬಡತನ ಕೊನೆಯಾಗುತ್ತಾ? ಅದು ನಿಮ್ಮ ಹೊಟ್ಟೆ ತುಂಬಿಸುತ್ತದೆಯೇ? ಬಿಜೆಪಿಯವರು ಕ್ಯಾಮರಾಗಳಲ್ಲಿ ಚೆನ್ನಾಗಿ ಸ್ನಾನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಲವಾರು ಪಾಪಗಳನ್ನು ಮಾಡಿದ್ದಾರೆ. ಹೀಗಾಗಿ ಅವರು ಗಂಗಾ ನದಿಯಲ್ಲೇ ಎಷ್ಟೇ ಬಾರಿ ಸ್ನಾನ ಮಾಡಿದರೂ ಮುಂದಿನ ನೂರು ಜನ್ಮದಲ್ಲೂ ಸ್ವರ್ಗಕ್ಕೆ ಹೋಗಲಾರರು ಎಂದು ಅವರು ಕಿಡಿಕಾರಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುಂಭಮೇಳದ ಅಂಗವಾಗಿ ಸೋಮವಾರ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪುಣ್ಯ ಸ್ನಾನ ಮಾಡಿದ ಬೆನ್ನಲ್ಲೇ ಖರ್ಗೆ ನೀಡಿದ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸನಾತನಿಗಳಿಗೆ ನೋವು ತರುವ ಈ ಹೇಳಿಕೆ ಕುರಿತು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ವಿಶ್ವ ಹಿಂದೂ ಪರಿಷತ್‌ ಕೂಡಾ ಖರ್ಗೆ ಹೇಳಿಕೆಯನ್ನು ಖಂಡಿಸಿದೆ.

ಕ್ಯಾಮೆರಾಕ್ಕಾಗಿ ಸ್ನಾಹ:

ಮಧ್ಯಪ್ರದೇಶದ ಮಹೂನಲ್ಲಿ ಸೋಮವಾರ ಆಯೋಜಿಸಿದ್ದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ರ್‍ಯಾಲಿಯಲ್ಲಿ ಮಾತನಾಡಿ ಖರ್ಗೆ, ‘ಕ್ಯಾಮರಾದಲ್ಲಿ ಚೆನ್ನಾಗಿ ಕಾಣಿಸುವವರೆಗೂ ಬಿಜೆಪಿ ನಾಯಕರು ಸ್ನಾನ ಮಾಡುತ್ತಿದ್ದರು. ನರೇಂದ್ರ ಮೋದಿಯವರ ಸುಳ್ಳು ಭರವಸೆಗಳ ಬಲೆಗೆ ಬೀಳಬೇಡಿ. ಗಂಗಾ ಸ್ನಾನದಿಂದ ಬಡತನವು ಕೊನೆಗೊಳ್ಳುತ್ತದೆಯೇ? ಅದು ನಿಮ್ಮ ಹೊಟ್ಟೆ ತುಂಬುತ್ತದೆಯೇ? ನಾನು ಯಾರ ನಂಬಿಕೆಯನ್ನು ಪ್ರಶ್ನಿಸಲು ಬಯಸುವುದಿಲ್ಲ. ಯಾರಿಗಾದರೂ ತಪ್ಪು ಎನಿಸಿದರೆ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.

ಜೊತೆಗೆ ‘ಮಗು ಹಸಿವಿನಿಂದ ಸಾಯುತ್ತಿರುವಾಗ, ಶಾಲೆಗೆ ಹೋಗದಿರುವಾಗ, ಕೂಲಿ ಕಾರ್ಮಿಕರಿಗೆ ಬಾಕಿ ಸಿಗುತ್ತಿಲ್ಲ ಎನ್ನುವ ಹಂತದಲ್ಲಿ, ಈ ಜನರು ಸಾವಿರಾರು ರುಪಾಯಿ ಖರ್ಚು ಮಾಡಿ ಗಂಗಾದಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ. ಕ್ಯಾಮರಾದಲ್ಲಿ ಚೆನ್ನಾಗಿ ಕಾಣಿಸುವವರೆಗೂ ಅವರು ಸ್ನಾನ ಮಾಡುತ್ತಲೇ ಇರುತ್ತಾರೆ. ಅಂತಹವರಿಂದ ದೇಶಕ್ಕೆ ಪ್ರಯೋಜನವಿಲ್ಲ. ನಮ್ಮ ನಂಬಿಕೆ ದೇವರ ಮೇಲೆ. ಜನರು ದಿನ ಮನೆಯಲ್ಲಿ ಪೂಜೆ ಮಾಡುತ್ತಾರೆ. ಮಹಿಳೆಯರು ಪೂಜೆ ಮಾಡಿದ ನಂತರವೇ ಮನೆಯಿಂದ ಹೊರಗೆ ಹೋಗುತ್ತಾರೆ. ಯಾವುದೇ ಸಮಸ್ಯೆಯಿಲ್ಲ. ಆದರೆ ಧರ್ಮದ ಹೆಸರಲ್ಲಿ ಬಡವರನ್ನು ಶೋಷಣೆ ಮಾಡುವುದರಲ್ಲಿ ನಮಗೆ ಸಮಸ್ಯೆಯಿದೆ’ ಎಂದರು.

ಸ್ವರ್ಗಕ್ಕಿಲ್ಲ:

ಜೊತೆಗೆ, ಮೋದಿ ಮತ್ತು ಅಮಿತ್‌ ಶಾ ಹಲವು ಪಾಪಗಳನ್ನು ಮಾಡಿದ್ದಾರೆ. ಹೀಗಾಗಿ 100 ಜನ್ಮ ಎತ್ತಿಬಂದರೂ ಇಬ್ಬರೂ ಸ್ವರ್ಗಕ್ಕೆ ಹೋಗಲಾರರು. ಇಬ್ಬರು ಜನರ ಶಾಪದಿಂದಾಗಿ ನರಕಕ್ಕೆ ಹೋಗಲಿದ್ದಾರೆ ಎಂದು ಖರ್ಗೆ ಕಿಡಿಕಾರಿದರು.

ಬೇರೆ ಧರ್ಮದವರ ಬಗ್ಗೆಯೂ ಇದೇ ರೀತಿಹೇಳ್ತೀರಾ?: ಬಿಜೆಪಿ

ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ಕಾಂಗ್ರೆಸ್‌ನ ದ್ವೇಷವು ಕೋಟ್ಯಂತರ ಹಿಂದೂಗಳ ಮೇಲಿನ ನಂಬಿಕೆಯ ದಾಳಿಯಾಗಿದೆ. ಮಹಾಕುಂಭ ಸನಾತನ ನಂಬಿಕೆಯ ಪ್ರತೀಕ. ಇಡೀ ವಿಶ್ವವೇ ಈ ನಂಬಿಕೆ ಗೌರವಿಸುತ್ತಿರುವಾಗ, ಭಾರತದ ದೊಡ್ಡ ವಿರೋಧ ಪಕ್ಷವು ಮಹಾಕುಂಭ ಮತ್ತು ಈ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದೆ. ಮಹಾಕುಂಭ, ಗಂಗಾ ಸ್ನಾನ ಪ್ರಶ್ನಿಸುವ ಖರ್ಗೆಯವರು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಸವಾಲೆಸೆಯುತ್ತೇನೆ. ಬೇರೆ ಯಾವುದಾದರೂ ಧರ್ಮದ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಲಿ, ಇಫ್ತಾರ್‌ ಕೂಟಕ್ಕೆ ಹೋಗುವುದರಿಂದ ಜನರಿಗೆ ಕೆಲಸ ಸಿಗುತ್ತದೆಯೇ? ಬಡತನ ನಿವಾರಣೆಯಾಗುತ್ತದೆಯೇ ಎಂದು ಅವರು ಪ್ರಶ್ನಿಸಬಹುದೇ?’ ಎಂದು ಪ್ರಶ್ನಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ । ಇಸ್ಲಾಮಿಕ್‌ ನಾಯಕನ ಹತ್ಯೆ ಬೆನ್ನಲ್ಲೇ ಹಿಂಸೆಟಾಪ್‌- ಬಾಂಗ್ಲಾ ಶೇಕ್‌- ಭಾರತೀಯ ರಾಯಭಾರಿಗಳ ಮನೆಗೆ ಕಲ್ಲೆಸೆತ । ಭಾರತ, ಹಿಂದು ವಿರೋಧಿ ಘೋಷಣೆ
ಹೂಡಿಕೆಗೆ ಕರೆ ನೀಡುವ ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌