ನವದೆಲಿ: ಶನಿವಾರ ಘೋಷಣೆಯಾದ 2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಖ್ಯಾತ ಗಾಯಕ ಸೋನು ನಿಗಮ್ ಅಸಮಧಾನ ವ್ಯಕ್ತ ಪಡಿಸಿದ್ದು, ‘ಕಿಶೋರ್ ಕುಮಾರ್, ಶ್ರೇಯಾ ಘೋಷಾಲ್, ಅಲ್ಕಾ ಯಾಗ್ನಿಕ್, ಸುನಿಧಿ ಚೌಹಾಣ್‌ಗೆ ಪ್ರಶಸ್ತಿ ನೀಡದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ ಜಗತ್ತಿನಾದ್ಯಂತ ಜನರನ್ನು ಪ್ರೇರೆಪಿಸಿದ ಇಬ್ಬರು ಗಾಯಕರಿದ್ದಾರೆ. ಅವರಲ್ಲಿ ಒಬ್ಬರಾದ ಮಹಮ್ಮದ್ ರಫಿಗೆ ಪದ್ಮಶ್ರೀ ದೊರತಿದೆ. ಇನ್ನೊಬ್ಬರಾದ ಕಿಶೋರ್ ಕುಮಾರ್ ಅವರಿಗೆ ಮರಣೋತ್ತರವಾಗಿಯೂ ಪ್ರಶಸ್ತಿ ನೀಡಿಲ್ಲ. ಪ್ರಸ್ತುತ ಇರುವ ಗಾಯಕರಲ್ಲಿ ಅಲ್ಕಾ ಯಾಗ್ನಿಕ್ ಸುದೀರ್ಘ ವೃತ್ತಿ ಜೀವನವನ್ನು ಹೊಂದಿದ್ದಾರೆ. ಆದರೂ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಶ್ರೇಯಾ ಘೋಷಾಲ್ ತಮ್ಮ ಪ್ರತಿಭೆ ಸಾಬೀತು ಪಡಿಸಿದ್ದಾರೆ. ಅವರನ್ನೂ ಗೌರವಿಸಬೇಕು. ಸುನಿಧಿ ಚೌಹಾಣ್ ತಮ್ಮ ಧ್ವನಿಯಿಂದ ಎಲ್ಲರನ್ನೂ ಪ್ರೇರೆಪಿಸಿದ್ದಾರೆ. ಆದರೂ ಅವರಿಗೆ ಏನೂ ಸಿಕ್ಕಿಲ್ಲ’ ಎಂದಿದ್ದಾರೆ.
ಕದನ ವಿರಾಮ ಬೆನ್ನಲ್ಲೇ ಪ್ಯಾಲೆಸ್ತೀನ್ ನಾಗರಿಕರು ಉತ್ತರ ಗಾಜಾಕ್ಕೆ ವಾಪಸ್
ದೇರ್ ಅಲ್-ಬಾಲಾ: ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಘೋಷಣೆ ಬಳಿಕ ಇಸ್ರೇಲ್ ಮೊದಲ ಬಾರಿ ಉತ್ತರ ಗಡಿಯ ಪ್ರತಿಬಂಧ ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಯುದ್ಧದ ಕಾರಣ ಮನೆ ತೊರೆದಿದ್ದ ಸಾವಿರಾರು ಪ್ಯಾಲೆಸ್ತೀನಿಯನ್ನರು ಸೋಮವಾರ ಉತ್ತರ ಗಾಜಾ ಪ್ರದೇಶದತ್ತ ಮುಖ ಮಾಡಿದ್ದಾರೆ. ಇಸ್ರೇಲ್ ಹಮಾಸ್ ನಡುವೆ ಕಳೆದ 15 ತಿಂಗಳುಗಳಿಂದ ಯುದ್ಧ ಜಾರಿಯಲ್ಲಿತ್ತು. ಕದನ ವಿರಾಮ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಪ್ಯಾಲೆಸ್ತೀನಿಯನ್ನರು ಗಾಜಾಕ್ಕೆ ಮರಳಿದ್ದಾರೆ. ಹಮಾಸ್ ಬಂಡುಕೋರರು 33 ಒತ್ತೆಯಾಳುಗಳನ್ನು ಮತ್ತು ಇಸ್ರೇಲ್ 700 ಜನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಒಪ್ಪಂದದ ಭಾಗವಾಗಿದೆ.
ದಿಲ್ಲಿ ಜನತೆಗೆ ಆಪ್ 15 ಗ್ಯಾರಂಟಿ ಘೋಷಣೆ
ನವದೆಹಲಿ: ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯೇರಲು ಪಣ ತೊಟ್ಟಿರುವ ಆಮ್‌ಆದ್ಮಿ ಪಕ್ಷ ರಾಜ್ಯದ ಜನತೆಗೆ ಭರಪೂರ ಯೋಜನೆ ಘೋಷಿಸಿದ್ದು, ಮಹಿಳೆಯರಿಗೆ ಮಾಸಿಕ 2100 ರು. ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸೇರಿದಂತೆ ಒಟ್ಟು 15 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಸದ್ಯ ಜಾರಿಯಲ್ಲಿರುವ ಉಚಿತ ಯೋಜನೆಗಳಾದ ಶಿಕ್ಷಣ, ಆರೋಗ್ಯ ಸೇವೆ, ಮಹಿಳೆಯರಿಗೆ ಬಸ್ ಪ್ರಯಾಣ, ನೀರು ಮತ್ತು ವಿದ್ಯುತ್ ಜೊತೆಗೆ ಇನ್ನು ಕೆಲವು ಹೊಸ ಭರವಸೆ ನೀಡಿದೆ.ದಿಲ್ಲಿ ಜನತೆಗೆ ಉದ್ಯೋಗ, ಮಹಿಳೆಯರಿಗೆ ಮಾಸಿಕ 2,100 ರು., ಸಂಜೀವಿನಿ ಯೋಜನಾ ಅಡಿಯಲ್ಲಿ ಹಿರಿಯರಿಗೆ ಉಚಿತ ಆರೋಗ್ಯ ಸೇವೆ, ಬಾಕಿ ನೀರಿನ ಬಿಲ್ ಮನ್ನಾ, ದಿನದ 24 ಗಂಟೆಯೂ ನೀರಿನ ಸೌಲಭ್ಯ, ಯಮುನಾ ನದಿ ಶುದ್ಧೀಕರಣ, ದಿಲ್ಲಿಯ ರಸ್ತೆ ವಿಶ್ವ ದರ್ಜೆಗೆ, ವಿದೇಶದಲ್ಲಿ ಕಲಿಯುವ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುರುಷರಿಗೆ ಮೆಟ್ರೋ ಪ್ರಯಾಣದಲ್ಲಿ ಶೇ.50ರಷ್ಟು ರಿಯಾಯಿತಿ, ಅರ್ಚಕರು ಮತ್ತು ಗುರುದ್ವಾರ ಗ್ರಂಥಿಗಳಿಗೆ ಮಾಸಿಕ 18 ಸಾವಿರ ರು., ಬಾಡಿಗೆದಾರರಿಗೂ ಉಚಿತ ವಿದ್ಯುತ್, ನೀರು, ಒಳಚರಂಡಿ ವ್ಯವಸ್ಥೆ ಸುಧಾರಣೆ, ಅರ್ಹರಿಗೆ ರೇಷನ್ ಕಾರ್ಡ್, ಆಟೋ ಮತ್ತು ಕ್ಯಾಬ್ ಚಾಲಕರ ಪುತ್ರಿ ವಿವಾಹಕ್ಕೆ 1 ಲಕ್ಷ ರು. , 10 ಲಕ್ಷ ರು ಜೀವ ವಿಮೆ ಮತ್ತು 5 ಲಕ್ಷ ರು.ಆರೋಗ್ಯ ವಿಮೆ ನೀಡುವುದಾಗಿ ಘೋಷಿಸಿದ್ದಾರೆ.
ಇದೇ ವೇಳೆ ಕೇಜ್ರಿವಾಲ್ ಒಂದು ವೇಳೆ ಆಪ್ ಅನ್ನು ಅಧಿಕಾರದಲ್ಲಿ ಉಳಿಸಿಕೊಂಡರೆ ದೆಹಲಿಯ ಜನತೆಗೆ ಉಚಿತ ಯೋಜನೆಗಳಿಂದ ತಿಂಗಳಿಗೆ 25000 ರು. ಉಳಿತಾಯವಾಗಲಿದೆ ಎಂದಿದ್ದಾರೆ.
ಕೇರಳದ ನರಭಕ್ಷಕ ಹುಲಿ ಶವ ಪತ್ತೆ: ಹೊಟ್ಟೆಯಲ್ಲಿ ಮಹಿಳೆಯ ಬಟ್ಟೆ, ಓಲೆ!
ವಯನಾಡ್: 2 ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದ ನರಭಕ್ಷಕ ಹುಲಿಯು ಕೇರಳದ ವಯನಾಡಿನಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದೆ. ಶವಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮೃತ ಮಹಿಳೆಯ ಕೂದಲು, ಬಟ್ಟೆ ಮತ್ತು ಒಂದು ಜೋಡಿ ಕಿವಿಯೋಲೆಗಳು ದೊರೆತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾಫಿ ಕೊಯ್ಯಲು ತೋಟಕ್ಕೆ ತೆರಳಿದ್ದ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದರು. ಸುಮಾರು 4-5 ವರ್ಷದ ಹೆಣ್ಣು ಹುಲಿಯನ್ನು ಸೋಮವಾರ ಮುಂಜಾನೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಪತ್ತೆ ಹಚ್ಚಿತ್ತು. ನಂತರ ಪಿಲಕಾವು ಪ್ರದೇಶದ ಮನೆಯೊಂದರ ಹಿಂದೆ ಶವವಾಗಿ ಕಂಡುಬಂದಿದೆ.
ಕೊಲಂಬಿಯಾ ಶಾಕ್‌ಗೆ ಸೆನ್ಸೆಕ್ಸ್ 824 ಅಂಕ ಕುಸಿತ: 7 ತಿಂಗಳ ಕನಿಷ್ಠ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 824 ಅಂಕಗಳ ಭಾರೀ ಕುಸಿತ ಕಂಡು 75366 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕಳೆದ 7 ತಿಂಗಳಲ್ಲಿಯೇ ಸೆನ್ಸೆಕ್ಸ್‌ನ ಕನಿಷ್ಠ ಅಂಕವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 263 ಅಂಕ ಕುಸಿದು 22829ರಲ್ಲಿ ಅಂತ್ಯವಾಗಿದೆ. ಕೊಲಂಬಿಯಾ ಮೇಲೆ ಅಮೆರಿಕದ ಶೇ.25ರಷ್ಟು ಸುಂಕ ಹೇರಿದ ಸುದ್ದಿ ಸೋಮವಾರ ಭಾರತ ಸೇರಿದಂತೆ ಬಹುತೇಕ ಜಾಗತಿಕ ಷೇರುಪೇಟೆ ಮೇಲೆ ಪ್ರಭಾವ ಬೀರಿ ಸೂಚ್ಯಂಕ ಇಳಿಕೆಗೆ ಕಾರಣವಾಯ್ತು. ಐಟಿ, ಟೆಲಿಕಾಂ, ಇಂಧನ ವಲಯದ ಷೇರುಗಳು ಭಾರೀ ಕುಸಿತ ಕಂಡವು.