ಅಮೆರಿಕದಲ್ಲಿ ಅಕ್ರಮ ಭಾರತೀಯ ವಲಸಿಗರ ಪತ್ತೆ ಕಾರ್ಯ ಆರಂಭ : ಸಿಖ್‌ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ

KannadaprabhaNewsNetwork | Updated : Jan 28 2025, 04:51 AM IST

ಸಾರಾಂಶ

ಅಕ್ರಮ ವಲಸಿಗರನ್ನು ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿರುವ ಅಮೆರಿಕದ ಅಧಿಕಾರಿಗಳು, ಇದೀಗ ಅಮೆರಿಕದ ಕೆಲ ರಾಜ್ಯಗಳಲ್ಲಿನ ಸಿಖ್‌ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಹೀಗಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಅಲ್ಲೇ ಉಳಿದುಕೊಂಡಿದ್ದ ಭಾರತೀಯರಿಗೆ ಕಂಟಕ ಆರಂಭವಾಗಿದೆ.

ವಾಷಿಂಗ್ಟನ್‌: ಅಕ್ರಮ ವಲಸಿಗರನ್ನು ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿರುವ ಅಮೆರಿಕದ ಅಧಿಕಾರಿಗಳು, ಇದೀಗ ಅಮೆರಿಕದ ಕೆಲ ರಾಜ್ಯಗಳಲ್ಲಿನ ಸಿಖ್‌ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಹೀಗಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಅಲ್ಲೇ ಉಳಿದುಕೊಂಡಿದ್ದ ಭಾರತೀಯರಿಗೆ ಕಂಟಕ ಆರಂಭವಾಗಿದೆ.

ಅಮೆರಿಕದ ಆಂತರಿಕ ಭದ್ರತೆಯ ವಿಭಾಗದ ಅಧಿಕಾರಿಗಳು, ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ಭಾಗವಾಗಿ ಭಾನುವಾರ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಕೆಲವು ಗುರುದ್ವಾರಗಳಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ದಾಖಲೆರಹಿತ ವಲಸಿಗರು ಇರುವ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ನಡುವೆ ‘ಗುರುದ್ವಾರಗಳಂತಹ ಪೂಜಾ ಸ್ಥಳಗಳನ್ನು ಗುರಿಯಾಗಿಸಿ ಶೋಧ ನಡೆಸುತ್ತಿರುವ ಅಮೆರಿಕದ ಅಧಿಕಾರಿಗಳ ನಿರ್ಧಾರದಿಂದ ನಾವು ಗಾಬರಿಗೊಂಡಿದ್ದೇವೆ. ಇದು ಅತ್ಯಂತ ಕಳವಳಕಾರಿ ವಿಚಾರವಾಗಿದೆ’ ಎಂದು ಸಿಖ್ ಅಮೆರಿಕನ್ ಲೀಗಲ್ ಡಿಫೆನ್ಸ್ ಮತ್ತು ಎಜುಕೇಶನ್ ಫಂಡ್ (ಎಸ್‌ಎಎಲ್‌ಡಿಎಫ್)ನ ಕಾರ್ಯನಿರ್ವಾಹಕ ನಿರ್ದೇಶಕಿ ಕಿರಣ್ ಕೌರ್ ಗಿಲ್ ಹೇಳಿದ್ದಾರೆ.

ಚುನಾವಣೆ ಪೂರ್ವದಲ್ಲೇ ಅಮೆರಿಕದಲ್ಲಿರುವ 1.5 ಕೋಟಿ ಅಕ್ರಮ ವಲಸಿಗರ ತೆರವಿನ ಭರವಸೆಯನ್ನು ಡೊನಾಲ್ಡ್‌ ಟ್ರಂಪ್‌ ನೀಡಿದ್ದರು. ಜೊತೆಗೆ ಅಧಿಕಾರ ವಹಿಸಿಕೊಂಡ ಮೊದಲ ದಿನಗಳಲ್ಲೇ ಈ ಕುರಿತ ಕಾರ್ಯಾದೇಶವನ್ನು ಹೊರಡಿಸಿ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದರು.

ಟ್ರಂಪ್ ಜೊತೆ ಮೋದಿ ದೂರವಾಣಿ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾದ ಬಳಿಕ ಉಭಯ ನಾಯಕರು ನಡೆಸಿದ ಎರಡನೇ ದೂರವಾಣಿ ಮಾತುಕತೆಯಾಗಿದೆ. ಈ ಮೊದಲು ಟ್ರಂಪ್‌ ಆಯ್ಕೆಯಾಗುತ್ತಲೇ ಕರೆ ಮೋದಿ ಶುಭ ಕೋರಿದ್ದರು.

ಸೋಮವಾರದ ಮಾತುಕತೆ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ ನನ್ನ ಆತ್ಮೀಯ ಸ್ನೇಹಿತ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಮಾತನಾಡಿರುವುದು ಖುಷಿಯಾಗಿದೆ. ನಾವು ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧರಾಗಿದ್ದೇವೆ. ನಮ್ಮ ಜನರ ಕಲ್ಯಾಣಕ್ಕಾಗಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದಿದ್ದಾರೆ.

Share this article