ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆ ಮುಂದುವರಿಸಿರುವ ಸುಪ್ರೀಂಕೋರ್ಟ್, ‘ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ 1 ವಾರದಲ್ಲಿ ಕ್ರಮ ಜರುಗಿಸಬೇಕು’ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ನವದೆಹಲಿ : ಕೋಲ್ಕತಾದ ಪ್ರತಿಷ್ಠಿತ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆ ಮುಂದುವರಿಸಿರುವ ಸುಪ್ರೀಂಕೋರ್ಟ್, ‘ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ 1 ವಾರದಲ್ಲಿ ಕ್ರಮ ಜರುಗಿಸಬೇಕು’ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಘಟನೆ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ, ‘ಆರೋಗ್ಯ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಚರ್ಚೆ ನಡೆಸಬೇಕು.
ಈ ಪ್ರಕ್ರಿಯೆಯನ್ನು 1 ವಾರದಲ್ಲಿ ಪೂರ್ಣಗೊಳಿಸಬೇಕು’ ಎಂದು ಆದೇಶಿಸಿತು.ಇದೇ ವೇಳೆ, ವೈದ್ಯರ ಸುರಕ್ಷತೆಗೆ ಕುರಿತ ವರದಿ ಸಿದ್ಧಪಡಿಸಲು ತಾನು ರಷಿಸಿರುವ ರಾಷ್ಟ್ರೀಯ ಕಾರ್ಯಪಡೆಯು ಸಂಬಂಧಪಟ್ಟ ಎಲ್ಲರಿಂದ ಸಲಹೆ ಪಡೆಯಲಿದೆ ಎಂದ ಪೀಠ, ‘ಎಲ್ಲರೂ ಸಲಹೆ ನೀಡುವಂತಾಗಲು ಒಂದು ವೆಬ್‌ಸೈಟ್ ಆರಂಭಿಸಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ತಾಕೀತು ಮಾಡಿತು.
ಎಫ್‌ಐಆರ್ ವಿಳಂಬಕ್ಕೆ ಮತ್ತೆ ತರಾಟೆ:
ಈ ನಡುವೆ ಆ.9ರ ನಸುಕಿನ ಜಾವದಲ್ಲೇ ವೈದ್ಯೆಯ ಅತ್ಯಾಚಾರ ನಡೆದಿದ್ದರೂ 14 ತಾಸು ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಇದಲ್ಲದೆ, ಇದು ಕೊಲೆ ಆಗಿದ್ದರೂ ಆತ್ಮಹತ್ಯೆ ಎಂದು ಏಕೆ ಬಿಂಬಿಸಲು ಯತ್ನಿಸಲಾಯಿತು? ಶವಸಂಸ್ಕಾರ ನಡೆದ ಬಳಿಕ ಎಫ್‌ಐಆರ್ ದಾಖಲಿಸಲಾಯಿತು? ಇದು ಕೇಸು ಮುಚ್ಚಿ ಹಾಕುವ ಯತ್ನವೇ ಎಂದು ನ್ಯಾಯಪೀಠವು ಕೋಲ್ಕತಾ ಪೊಲೀಸ್ ಹಾಗೂ ಪ. ಬಂಗಾಳ ಸರ್ಕಾರವನ್ನು ಪ್ರಶ್ನಿಸಿತು.ಅಲ್ಲದೆ, ಮೊದಲು ಪೋಸ್ಟ್ ಮಾರ್ಟಂ ನಡೆಸಲಾಯಿತು. ಇದಾದ ಬಳಿಕವೂ ಅಸಹಜ ಸಾವು ಎಂಬ ವರದಿಯನ್ನು ರವಾನಿಸಲಾಯಿತು. ಇದು ಆಘಾತಕಾರಿ ಎಂದು ಕೋರ್ಟ್ ಕುಟುಕಿತು.
ಕೆಲಸಕ್ಕೆ ಮರಳಿ: ಮತ್ತೆ ವೈದ್ಯರಿಗೆ ಸುಪ್ರೀಂ ಸಲಹೆ
ನವದೆಹಲಿ: ‘ನ್ಯಾಯದಾನ ಹಾಗೂ ವೈದ್ಯೋಪಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದಿರುವ ಸುಪ್ರೀಂ ಕೋರ್ಟ್, ಕೋಲ್ಕತಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ನಡೆದಿರುವ ವೈದ್ಯರ ಪ್ರತಿಭಟನೆಯನ್ನು ಹಿಂಪಡೆಯುವಂತೆ ಪುನಃ ಮನವಿ ಮಾಡಿದೆ.
ಅಲ್ಲದೆ, ‘ಮುಷ್ಕರ ನಡೆಸಿದ್ದೀರಿ ಎಂಬ ಕಾರಣಕ್ಕೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಜರುಗಿಸದಂತೆ ನಾವು ನೋಡಿಕೊಳ್ಳುತ್ತೇವೆ. ಕ್ರಮ ಜರುಗಿಸಿದರೆ ನಮಗೆ ದೂರು ನೀಡಿ’ ಎಂದು ವೈದ್ಯರಿಗೆ ಭರವಸೆ ನೀಡಿದೆ.
ಏಮ್ಸ್-ನಾಗಪುರ ಆಸ್ಪತ್ರೆಯ ವೈದ್ಯರ ಪರ ವಕೀಲರು ವಿಚಾರಣೆ ವೇಳೆ, ‘ಮುಷ್ಕರ ನಡೆಸಿದ್ದಕ್ಕೆ ನಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ’ ಎಂದರು. ಆಗ ಕೋರ್ಟ್ ಈ ಮೇಲಿನಂತೆ ಹೇಳಿತು.