;Resize=(412,232))
ನವದೆಹಲಿ: ‘ಅವರು (ರಾಹುಲ್ ಗಾಂಧಿ) ತೋರಿಸಿದ್ದು ನಾನು 18-20 ವರ್ಷ ಇದ್ದಾಗಿನ ಫೋಟೋ. ನನಗೂ, ಭಾರತದ ಮತದಾನಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನನ್ನು ಭಾರತೀಯಳ ರೀತಿ ತೋರಿಸಿ ಜನರಿಗೆ ವಂಚಿಸಲು ಯತ್ನಿಸಲಾಗಿದೆ. ಇದೆಂಥ ಹುಚ್ಚು! ನಾವು ಯಾವ ಜಗತ್ತಿನಲ್ಲಿದ್ದೇವೆ?’
ಹರ್ಯಾಣ ವಿಧಾನಸಭೆ ಚುನಾವಣಾ ಅಕ್ರಮದ ಆರೋಪ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೋರಿಸಿದ್ದ ಬ್ರೆಜಿಲ್ ಮಹಿಳೆ ಲೆರಿಸಾ ನೆರಿ ನೀಡಿದ ಪ್ರತಿಕ್ರಿಯೆ ಇದು.
ರಾಹುಲ್ ಗಾಂಧಿ ಅವರು ಹರ್ಯಾಣ ಮತದಾರರ ಪಟ್ಟಿಯಲ್ಲಿ ಈ ಮಹಿಳೆಯ ಫೋಟೋ 22 ಮತದಾರರಿಗೆ ಹಾಕಲಾಗಿದೆ. ಈಕೆ 22 ಬಾರಿ ವೋಟ್ ಹಾಕಿದ್ದಾಳೆ ಎಂದು ಆರೋಪಿಸಿದ್ದರು. ಆ ಬಳಿಕ ಈ ಸುಂದರ ಮಹಿಳೆಯ ಬೆನ್ನು ಬಿದ್ದಿದ್ದ ಮಾಧ್ಯಮದವರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಈಕೆಯನ್ನು ಬ್ರೆಜಿಲ್‌ನ ರೂಪದರ್ಶಿ ಎಂದು ಹೇಳಿಕೊಂಡಿದ್ದರು. ಆದರೆ, ಅಸಲಿಗೆ ಈಕೆ ಹೇರ್ ಡಿಸೈನರ್ ಆಗಿದ್ದು, ಸಲೂನ್ ಇಟ್ಟುಕೊಂಡಿದ್ದಾಳೆ. ಈಕೆ ಯಾವತ್ತಿಗೂ ಬ್ರೆಜಿಲ್ ಬಿಟ್ಟು ಹೊರಗೆ ಹೋದವಳೂ ಅಲ್ಲ.
‘ನನ್ನ ಫೋಟೋ ವೈರಲ್ ಆದ ಬಳಿಕ ಕೆಲ ಮಾಧ್ಯಮಗಳು ನನ್ನನ್ನು ಮಾತನಾಡಿಸಲು ಯತ್ನಿಸಿವೆ. ವರದಿಗಾರನೊಬ್ಬ ಕರೆ ಮಾಡಿ ನನ್ನ ಕೆಲಸ ಸೇರಿ ವಿವಿಧ ವಿಚಾರಗಳ ಕುರಿತು ಮಾತನಾಡಿದ. ಆತ ನನ್ನ ಸಂದರ್ಶನ ಮಾಡಲು ಬಯಸಿದ್ದ. ನಾನು ಯಾವುದಕ್ಕೂ ಉತ್ತರ ನೀಡಲಿಲ್ಲ. ಆತ ನನ್ನನ್ನು ಇನ್‌ಸ್ಟಾಗ್ರಾಂನಲ್ಲಿ ಗುರುತು ಹಿಡಿದಿದ್ದ. ಹೀಗಾಗಿ ಇನ್‌ಸ್ಟಾದಲ್ಲೇ ಕರೆ ಮಾಡಿದ್ದ. ಇದೀಗ ನನ್ನ ಗೆಳೆಯನೊಬ್ಬ ನನಗೆ ರಾಹುಲ್ ಗಾಂಧಿ ತೋರಿಸಿದ ಫೋಟೋ ಕಳುಹಿಸಿದ್ದಾನೆ. ಅದನ್ನು ನಂಬಲೇ ಆಗಲಿಲ್ಲ ಎಂದು ನೆರಿ ಹೇಳಿಕೊಂಡಿದ್ದಾರೆ.
‘ವ್ಹಾವ್... ನಾನೀಗ ಭಾರತದಲ್ಲಿ ನಿಗೂಢ ಬ್ರೆಜಿಲ್ ಮಹಿಳೆಯಾಗಿ ಖ್ಯಾತಳಾಗಿದ್ದೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ನೆರಿ.
ಲೆರಿಸಾ ನೆರಿ ಅವರು ನೀಲಿ ಡೆನಿಮ್ ಜಾಕೆಟ್ ಹಾಕಿಕೊಂಡಿರುವ ಫೋಟೋ ಅನ್‌ಸ್ಪ್ಲ್ಯಾಶ್ ಮತ್ತು ಪೆಕ್ಸೆಲ್ಸ್‌ನಂಥ ಸ್ಟಾಕ್ ಫೋಟೋಗ್ರಾಫಿ ವೆಬ್‌ಸೈಟ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಫೋಟೋಗ್ರಾಫರ್ ಮ್ಯಾಥ್ಯೂಸ್ ಫೆರ್ರೋ ಅವರು ಈ ಫೋಟೋ ಹಾಕಿದ್ದಾರೆ. ಈ ಫೋಟೋ 4 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೆರಿ, ನಾನು ರೂಪದರ್ಶಿ ಅಲ್ಲ, ನನ್ನ ಗೆಳೆಯರೊಬ್ಬರಿಗೆ ಸಹಾಯವಾಗಲೆಂದು ಫೋಟೋವೊಂದಕ್ಕೆ ಪೋಸ್ ಕೊಟ್ಟಿದ್ದೆ. ಇದು 2017ರ ಫೋಟೋ. ಫೋಟೋಗ್ರಾಫರ್ ಮ್ಯಾಥ್ಯೂಸ್ ಅವರು ಈ ಫೋಟೋ ವೆಬ್‌ಸೈಟ್‌ಗೆ ಹಂಚಿಕೊಳ್ಳಲು ಅನುಮತಿ ಕೇಳಿದ್ದರು. ನಾನು ಒಪ್ಪಿಗೆ ಸೂಚಿಸಿದ್ದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಸುದ್ದಿಗೋಷ್ಠಿ ಬಳಿಕ ಲಕ್ಷಾಂತರ ಮಂದಿ ಹುಡುಕಾಟ ಶುರು ಮಾಡಿದ್ದಾರೆ. ಹೀಗಾಗಿ ನನ್ನ ಇನ್‌ಸ್ಟಾ ಪ್ರೊಫೈಲ್ ಅನ್ನೇ ಡಿಲೀಟ್ ಮಾಡಬೇಕಾಯಿತು. ಅನೇಕರು ನಾನೇ ರಾಹುಲ್ ಗಾಂಧಿ ತೋರಿಸಿದ ಆ ರೂಪದರ್ಶಿ ಎಂದು ತಪ್ಪು ತಿಳಿದುಕೊಂಡಿದ್ದರು. ಕೆಲವರು ನನ್ನ ಸಾಮಾಜಿಕ ಜಾಲತಾಣದ ಖಾತೆಯನ್ನು ಅಕ್ಷರಶಃ ಹ್ಯಾಕ್ ಮಾಡಿದ್ದಾರೆ. ಅವರಿಗೆ ಸತ್ಯ ಏನೆಂದೇ ಗೊತ್ತಿಲ್ಲ ಎಂದು ಫೋಟೋಗ್ರಾಫರ್ ಮ್ಯಾಥ್ಯೂಸ್ ಫೆರೆರೋ ತಿಳಿಸಿದ್ದಾರೆ.