ಸುಪ್ರೀಂನಲ್ಲಿ ಕಂಡುಕೇಳರಿಯದ ಘಟನೆ । ಸುಪ್ರೀಂ ಸಿಜೆ ಮೇಲೆ ಶೂ ದಾಳಿಗೆ ವಿಷ್ಣು ಭಕ್ತ ವಕೀಲ ಯತ್ನ

KannadaprabhaNewsNetwork |  
Published : Oct 07, 2025, 01:02 AM ISTUpdated : Oct 07, 2025, 04:29 AM IST
ವಕೀಲ, ಸಿಜೆಐ | Kannada Prabha

ಸಾರಾಂಶ

ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ ಕಲಾಪದ ವೇಳೆಯೇ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.

 ನವದೆಹಲಿ :  ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ ಕಲಾಪದ ವೇಳೆಯೇ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ ನಡೆದಿದೆ. ಇಂಥ ಘಟನೆ ಸುಪ್ರೀಂಕೋರ್ಟ್‌ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ದಾಳಿ ನಡೆಸಿದ ವಕೀಲನನ್ನು ರಾಕೇಶ್ ಕಿಶೋರ್ (71) ಎಂದು ಗುರುತಿಸಲಾಗಿದೆ. ದಾಳಿಯ ಬೆನ್ನಲ್ಲೆ ಆತನನ್ನು ತಡೆದು ಕೋರ್ಟಿನ ಹೊರಗೆ ಕರೆದೊಯ್ದು ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗಿದೆ. ವಕೀಲರ ಸಂಘವು ಆತನ ವಕೀಲಿಕೆ ಲೈಸೆನ್ಸ್ ಅಮಾನತು ಮಾಡಿದೆ.

ಈ ನಡುವೆ ಸಿಜೆಐ ಗವಾಯಿ ಅವರ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್ ಸೇರಿ ಹಲವು ನಾಯಕರು ಕಟುನುಡಿಗಳಲ್ಲಿ ಖಂಡಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ಮೂರ್ತಿಯ ಮರುಸ್ಥಾಪನೆಗೆ ಸಂಬಂಧಿಸಿದ ಅರ್ಜಿಯೊಂದು ಇತ್ತೀಚೆಗೆ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ। ಗವಾಯಿ ‘ಕೋರ್ಟಲ್ಲೇಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದೀರಿ? ಇದು ಪ್ರಚಾರಪ್ರಿಯ ಅರ್ಜಿಯಂತಿದೆ. ನೀವು ವಿಷ್ಣು ಭಕ್ತ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ದೇವರನ್ನೇ ಹೋಗಿ ಕೇಳಿ’ ಎಂದಿದ್ದರು. ಇದು ವಿವಾದಕ್ಕೀಡಾಗಿತ್ತು. ಬಳಿಕ ಸಿಜೆಐ ತಾವು ಯಾವುದೇ ಧರ್ಮದ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿ ವಿವಾದ ತಣಿಸಲು ಯತ್ನಿಸಿದ್ದರು. ಆದರೆ ಈಗ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಶೂ ದಾಳಿಗೆ ಯತ್ನ ನಡೆದಿದೆ.

ಶೂ ದಾಳಿ ನಡೆದ ಕೂಡಲೇ ಸಾವರಿಸಿಕೊಂಡ ಸಿಜೆಐ, ದಾಳಿಕೋರನ ಮೇಲೆ ಕ್ರಮ ಕೈಗೊಳ್ಳುವಂತೆ ಯಾವುದೇ ಸೂಚನೆ ನೀಡಲಿಲ್ಲ. ಅದರ ಬದಲಾಗಿ, ‘ಈ ಘಟನೆ ನಿರ್ಲಕ್ಷಿಸಿಬಿಡಿ. ಆತನನ್ನು ಬಿಟ್ಟುಬಿಡಿ. ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಕಲಾಪ ಮುಂದುವರಿಸೋಣ’ ಎಂದು ಹೇಳಿ ಕಲಾಪ ಮುಂದುವರಿಸಿದರು.

ಹೀಗಾಗಿ ವಕೀಲನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಪೊಲೀಸರು ಆತನನ್ನು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. ಜತೆಗೆ ಆತ ಎಸೆದಿದ್ದ ಶೂಗಳನ್ನೂ ವಾಪಸು ನೀಡಿದ್ದಾರೆ. ಆದರೆ, ಬಾರ್ ಕೌನ್ಸಿಲ್‌ ಆಫ್‌ ಇಂಡಿಯಾ, ರಾಕೇಶ್‌ ಕಿಶೋರ್ ಅವರ ವಕೀಲಿಕೆಯನ್ನು ಅಮಾನತು ಮಾಡಿದೆ.

ಆಗಿದ್ದೇನು?:

ನ್ಯಾ। ಗವಾಯಿ ಹಾಗೂ ನ್ಯಾ। ವಿನೋದ್ ಚಂದ್ರನ್‌ ಅವರಿದ್ದ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುತ್ತಿತ್ತು. ಈ ವೇಳೆ 11.35ರ ಸುಮಾರಿಗೆ ವೃದ್ಧ ವಕೀಲನೊಬ್ಬ ದಿಢೀರನೇ ಶೂ ಎಸೆದ. ಅದು ನ್ಯಾ। ವಿನೋದ್ ಚಂದ್ರನ್ ಅವರ ಸನಿಹದಲ್ಲಿ ಬಿತ್ತು. ಸಿಜೆಐ ಅವರಿಗೆ ತಾಗಲಿಲ್ಲ.

ಕೂಡಲೇ ಕೋರ್ಟ್‌ ಕೋಣೆಯೊಳಗೆ ಇದ್ದ ಜಾಗರೂಕ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ದಾಳಿಕೋರನನ್ನು ಹಿಡಿದು ಕೋರ್ಟ್‌ ಆವರಣದಿಂದ ಹೊರಗೆ ಕರೆದೊಯ್ದರು.

ಆತನನ್ನು ಕರೆದುಕೊಂಡು ಹೋಗುವಾಗ, ‘ಸನಾತನ ಕಾ ಅಪಮಾನ್‌ ನಹಿ ಸಹೇಂಗೆ’ (ಸನಾತನ ಧರ್ಮಕ್ಕೆ ಮಾಡುವ ಅವಮಾನಗಳನ್ನು ಸಹಿಸುವುದಿಲ್ಲ) ಎಂದು ಕೂಗಿದ ಹಾಗೂ ‘ನನ್ನ ದಾಳಿ ಸಿಜೆಐ ಅವರನ್ನು ಗುರಿಯಾಗಿಸಿತ್ತು’ ಎಂದು ಸ್ಪಷ್ಟಪಡಿಸಿದ. ಶೂ ನ್ಯಾ। ಚಂದ್ರನ್‌ ಅವರ ಸನಿಹ ಬಿದ್ದ ಕಾರಣ ಅವರಲ್ಲಿ ಕ್ಷಮೆಯಾಚಿಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪೊಲೀಸರು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರೊಂದಿಗೆ ಸಮನ್ವಯ ಸಾಧಿಸಿ ಆತನ ವಿಚಾರಣೆ ಮಾಡಿದರು. ಆದರೆ ಯಾವುದೇ ದೂರು ದಾಖಲಾಗದ ಕಾರಣ ಬಿಟ್ಟು ಕಳಿಸಿದರು.

==

ವಿಷ್ಣು ಹೇಳಿಕೆ ವಿವಾದ

ಮಧ್ಯಪ್ರದೇಶದ ದೇಗುಲವೊಂದರಲ್ಲಿ ಹಾನಿಗೊಳಗಾದ ವಿಷ್ಣು ಮೂರ್ತಿಯ ಮರುಸ್ಥಾಪನೆಗೆ ಸಂಬಂಧಿಸಿದ ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ। ಗವಾಯಿ ‘ಕೋರ್ಟಲ್ಲೇಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದೀರಿ? ಇದು ಪ್ರಚಾರಪ್ರಿಯ ಅರ್ಜಿಯಂತಿದೆ. ನೀವು ವಿಷ್ಣು ಭಕ್ತ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ದೇವರನ್ನೇ ಹೋಗಿ ಕೇಳಿ’ ಎಂದಿದ್ದರು. ಇದು ವಿವಾದಕ್ಕೀಡಾಗಿತ್ತು. ಬಳಿಕ ಸಿಜೆಐ ತಾವು ಯಾವುದೇ ಧರ್ಮದ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿ ವಿವಾದ ತಣಿಸಲು ಯತ್ನಿಸಿದ್ದರು.

==

ಇಡೀ ಭಾರತವೇ ಕ್ರುದ್ಧ

ಈ ದಾಳಿಯು ಸಮಸ್ತ ಭಾರತೀಯರಿಗೆ ಕ್ರೋಧ ಉಂಟು ಮಾಡಿದೆ. ಭಾರತದಲ್ಲಿ ಇಂಥ ದಾಳಿಗೆ ಅವಕಾಶವಿಲ್ಲ. ಆದರೆ ಈ ಸಂದರ್ಭದಲ್ಲಿ ನ್ಯಾ। ಗವಾಯಿ ತೋರಿದ ತಾಳ್ಮೆ ಪ್ರಶಂಸಾರ್ಹ. ಇದು ನಮ್ಮ ನ್ಯಾಯಿಕ ಮೌಲ್ಯಗಳ ಸಂಕೇತ.

ನರೇಂದ್ರ ಮೋದಿ, ಪ್ರಧಾನಿ

==

ಇದಕ್ಕೆಲ್ಲಾ ವಿಚಲಿತನಾಗಲ್ಲ

ಈ ಘಟನೆ ನಿರ್ಲಕ್ಷಿಸಿಬಿಡಿ. ಆತನನ್ನು ಬಿಟ್ಟುಬಿಡಿ. ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಕಲಾಪ ಮುಂದುವರಿಸೋಣ.

ನ್ಯಾ। ಬಿ.ಆರ್. ಗವಾಯಿ, ಸಿಜೆಐ

PREV
Read more Articles on

Recommended Stories

ಲವ್‌ ಜಿಹಾದ್‌ ಸಂತ್ರಸ್ತೆ ಸ್ವಧರ್ಮಕ್ಕೆ ಮರಳದಿದ್ರೆ ವಿಷ ಕೊಡಿ: ಶಾಸಕ
ಗಾಜಾ ಸಂಧಾನ ಬಗ್ಗೆ ನಿರುತ್ಸಾಹ ತೋರಿದ ನೆತನ್ಯಾಹುಗೆ ಟ್ರಂಪ್ ಚಾಟಿ