50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರ ಬಳಸಿ ಸಿಂಧೂರ ವೇಳೆ ಪಾಕ್‌ಗೆ ಶಾಕ್‌

KannadaprabhaNewsNetwork |  
Published : Aug 31, 2025, 01:08 AM ISTUpdated : Aug 31, 2025, 05:02 AM IST
ಏರ್‌ ಮಾರ್ಷಲ್‌ ನರ್ಮದೇಶ್ವರ ತಿವಾರಿ | Kannada Prabha

ಸಾರಾಂಶ

‘ಪಾಕಿಸ್ತಾನದ   ನೆಲೆಗಳನ್ನು ಎಚ್ಚರಿಕೆಯಿಂದ ಗುರಿಯಾಗಿಸಿಕೊಂಡು, 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಕೇವಲ ಇಷ್ಟೇ ಶಸ್ತ್ರಾಸ್ತ್ರ ಬಳಸಿದರೂ, ಈ ದಾಳಿಯು ಮೇ 10ರಂದು ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಪಾಕಿಸ್ತಾನ ಅಂಗಲಾಚುವಂತೆ ಮಾಡಿತು’  

  ನವದೆಹಲಿ :  ‘ಪಾಕಿಸ್ತಾನದ ಸೇನಾ ನೆಲೆಗಳನ್ನು ಎಚ್ಚರಿಕೆಯಿಂದ ಗುರಿಯಾಗಿಸಿಕೊಂಡು, 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಕೇವಲ ಇಷ್ಟೇ ಶಸ್ತ್ರಾಸ್ತ್ರ ಬಳಸಿದರೂ, ಈ ದಾಳಿಯು ಮೇ 10ರಂದು ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಪಾಕಿಸ್ತಾನ ಅಂಗಲಾಚುವಂತೆ ಮಾಡಿತು’ ಎಂದು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ ಹೇಳಿದ್ದಾರೆ.

ಇಲ್ಲಿ ಆಯೋಜನೆಗೊಂಡಿರುವ ಎನ್‌ಡಿಟೀವಿ ಶೃಂಗದಲ್ಲಿ ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದ ಕುರಿತು ಶನಿವಾರ ಮಾತನಾಡಿದ ಅವರು ಹಲವು ಸಂಗತಿಗಳನ್ನು ಹಂಚಿಕೊಂಡರು.

‘ಮೇ 9-10ರ ಮಧ್ಯರಾತ್ರಿ ಪಾಕಿಸ್ತಾನ ನಡೆಸಿದ ದಾಳಿಯ ನಂತರ ಭಾರತ ಕೈಗೊಂಡ ದಾಳಿಯಲ್ಲಿ ವಾಯುಪಡೆಯು ಪಾಕಿಸ್ತಾನ ಸೇನೆಯ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿದ್ದರೂ ನಾವು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು ಒಂದು ಪ್ರಮುಖ ಮೈಲುಗಲ್ಲು’ ಎಂದರು.

‘ಇಂಥ ದಾಳಿ ಈ ಮೊದಲು ಸಂಭವಿಸಿರಲಿಲ್ಲ. ಕಾರ್ಯಾಚರಣೆಯ ವೇಳೆ, 1971ರ ಯುದ್ಧದಲ್ಲಿಯೂ ನಾವು ಹೊಡೆಯಲಾಗದ ಗುರಿಗಳನ್ನು ಈ ಸಲ ಹೊಡೆದುರುಳಿಸಿದೆವು’ ಎಂದು ವಿವರಿಸಿದರು.

‘ನಾವು ಪ್ರತಿಯೊಂದು ಶಸ್ತ್ರಾಸ್ತ್ರವನ್ನೂ ಗಣನೆಗೆ ತೆಗೆದುಕೊಂಡಿದ್ದೇವೆ. ಅದು ಕಾರ್ಯಾಚರಣೆಯನ್ನು ಯೋಜಿಸಿದವರು ಮತ್ತು ಕಾರ್ಯಗತಗೊಳಿಸಿದವರ ಸಾಮರ್ಥ್ಯದ ಮೌನ ಸ್ವೀಕೃತಿಯಾಗಿದೆ. ಮೇ 7ರ ಮುಂಜಾನೆ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ದಾಳಿಯನ್ನು ಮತ್ತಷ್ಟು ವಿಸ್ತರಿಸಲು ಭಾರತ ಸಿದ್ಧವಿರಲಿಲ್ಲ’ ಎಂದರು.

‘ನಾವು ಪಾಕಿಸ್ತಾನದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೆವು ಮತ್ತು ಪ್ರತಿಕ್ರಿಯೆ ಹೇಗೆ ಇರಬಹುದು ಎಂದು ಮೌಲ್ಯಮಾಪನ ಮಾಡುತ್ತಲೇ ಇದ್ದೆವು. ನಾವು ಕೇವಲ ಸೇನಾ ಗುರಿಗಳನ್ನು ಪರಿಗಣಿಸಿದ್ದೆವು. ಆದರೆ ಯಾವಾಗ ನಮ್ಮ ಮೇಲೆ ಆ ಕಡೆಯಿಂದ ಮೇ 9-10ರ ರಾತ್ರಿ ಮುಖ್ಯದಾಳಿ ಆಯಿತೋ, ಆಗ ನಾವು ಇದು ಪ್ರತ್ಯುತ್ತರಕ್ಕೆ ಸೂಕ್ತ ಸಮಯ ಎಂದು ನಿರ್ಧರಿಸಿದೆವು. ಕೇವಲ 50ಕ್ಕಿಂತ ಕಮ್ಮಿ ಶಸ್ತ್ರಾಸ್ತ್ರ ಬಳಸಿ ನಾವು ಅವರನ್ನು ನೇರವಾಗಿ ಹೊಡೆದು ಹಾಕಿದೆವು’ ಎಂದು ತಿಳಿಸಿದರು.

‘1971ರ ಯುದ್ಧದಲ್ಲಿಯೂ ನಾಶಪಡಿಸಲು ಸಾಧ್ಯವಾಗದಿದ್ದ ಕೆಲವು ಗುರಿಗಳಿದ್ದವು. ಅವುಗಳನ್ನು ಈ ಬಾರಿ ಹೊಡೆದುರುಳಿಸಲಾಯಿತು. ನಾವು ಅವರಿಗೆ ಉಂಟುಮಾಡಿದ ಹಾನಿ ಅಷ್ಟರ ಮಟ್ಟಿಗಿತ್ತು. ದಾಳಿಯ ಉದ್ದೇಶ ಪಾಕಿಸ್ತಾನದ ಸಾಮರ್ಥ್ಯವನ್ನು ಹೊರಗೆಳೆದು, ತಕ್ಕ ಸಂದೇಶವನ್ನು ನೀಡುವುದಾಗಿತ್ತು. ಶತ್ರುಗುರಿಗಳನ್ನು ಹೊಡೆಯಲು ಅಂತಹ ದೀರ್ಘಶ್ರೇಣಿಯ ಶಸ್ತ್ರಾಸ್ತ್ರ ಸಾಧನಗಳ ಬಳಕೆಯು ಅಪಾಯಗಳನ್ನು ಒಳಗೊಂಡಿರುತ್ತದೆ. ಆದರೆ ವಾಯುಪಡೆಯು ಕಾರ್ಯಾಚರಣೆಯನ್ನು ಪರಿಪೂರ್ಣತೆಯಿಂದ ನಿರ್ವಹಿಸಿತು’ ಎಂದು ಶ್ಲಾಘಿಸಿದರು.

‘ದೀರ್ಘ ಶ್ರೇಣಿಯಿಂದ ನಿಖರವಾದ ಗುರಿ ಇಡುವುದು ಬಹಳ ಆವಶ್ಯಕ. ಇದು ತುಂಬಾ ಅಪಾಯಕಾರಿ. ಏಕೆಂದರೆ ಶಸ್ತ್ರಾಸ್ತ್ರ ಸಾಧನಗಳು ದೊಡ್ಡದಾದಷ್ಟೂ, ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ದಾಳಿಯನ್ನು ಯೋಜಿಸಿದವರು ಹಾಗೂ ಅದನ್ನು ಕಾರ್ಯಗತಗೊಳಿಸಿದವರ ಖಚಿತತೆಯಿಂದಾಗಿ, ನಾವು ಪ್ರತಿ ಗುರಿಯನ್ನು ನಿಖರವಾಗಿ ಹೊಡೆದುಹಾಕಲು ಸಾಧ್ಯವಾಯಿತು. ಇದು ಸುಲಭದ ಆಟವಲ್ಲ’ ಎಂದರು.

‘ದೂರಗಾಮಿ ಆಯುಧಗಳ ಬಳಕೆಯ ಹಿಂದೆ ಅವುಗಳನ್ನು ಹಾರಿಸಿದ ಪೈಲಟ್‌ಗಳದು ಮಾತ್ರವಲ್ಲ, ಇಡೀ ತಂಡದ ಪ್ರಯತ್ನವಿರುತ್ತದೆ’ ಎಂದು ಸೇನಾ ಪಡೆಗಳನ್ನು ಶ್ಲಾಘಿಸಿದರು.

- ಮೊದಲಿಗೆ ನಾವು 9 ಉಗ್ರ ನೆಲೆ ಮೇಲೆ ದಾಳಿಗೆ ಯೋಜಿಸಿದ್ದೆವು. ಆದರೆ ಮೇ 9ರಂದು ಪಾಕ್‌ ನಮ್ಮ ಮೇಲೆ ದಾಳಿಗೆ ದುಸ್ಸಾಹಸ ಮಾಡಿತು

- ಆಗ ನಾವು ಇನ್ನು ಸುಮ್ಮನಿರಬಾರದು ಎಂದು ಭರ್ಜರಿ ದಾಳಿ ಮಾಡಿದೆವು. 1971ರ ಯುದ್ಧದಲ್ಲೂ ನಾಶಪಡಿಸಲು ಆಗದ ಗುರಿ ಹೊಡೆದೆವು

- ನೈಪುಣ್ಯದಿಂದ ದೂರಗಾಮಿ ಶಸ್ತ್ರ ಬಳಸಿ ನಿಖರ ಗುರಿ ನಾಶ ಮಾಡಿದೆವು. ದಾಳಿಗೆ ನಾವು ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳು

- ಆಗ ಪಾಕ್‌ ಕದನವಿರಾಮ ಬೇಕೆಂದು ಅಂಗಲಾಚಿಕೊಂಡು ಬಂತು. ದಾಳಿ ಹಿಂದೆ ಪೈಲಟ್‌ಗಳು ಮಾತ್ರವಲ್ಲ, ಇಡೀ ತಂಡದ ಶ್ರಮವಿತ್ತು

PREV
Read more Articles on

Recommended Stories

ಅಗ್ಗವೆಂದು ಮುಸ್ಲಿಮರು ಗೋಮಾಂಸ ತಿಂತಾರೆ: ಸಲ್ಮಾನ್‌ ಅಪ್ಪ ಸಲೀಂ!
ಪಂಜಾಬ್‌ನ 1000 ಹಳ್ಳಿಗಳಲ್ಲಿ ಪ್ರವಾಹ