ಅಮೃತಸರ: ಕಳೆದ ಕೆಲ ದಿನಗಳಿಂದ ಭಾರತದ ಉತ್ತರ ಮತ್ತು ಪಾಕಿಸ್ತಾನದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ, ಹಲವೆಡೆ ಅವಾಂತರಗಳು ಸೃಷ್ಟಿಯಾಗಿರುವ ನಡುವೆಯೇ, ಪಾಕಿಸ್ತಾನಕ್ಕೆ ವಾಘಾ ಗಡಿಯಲ್ಲಿ ಮುಜುಗರದ ಸಂದರ್ಭವೊಂದು ಸೃಷ್ಟಿಯಾಗಿದೆ.
ಪ್ರತಿನಿತ್ಯ ಸಂಜೆ ಬೀಟಿಂಗ್ ದ ರಿಟ್ರೀಟ್ ನಡೆಯುವ ಈ ಗಡಿಯ ಪಾಕಿಸ್ತಾನದ ಕಡೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದರೆ, ಭಾರತದ ಬದಿಯ ರಸ್ತೆ ತೊಳೆದಿಟ್ಟಂತೆ ಸ್ವಚ್ಛವಾಗಿದೆ. ಭಾರತೀಯ ಯೋಧರು ಎಂದಿನ ಗತ್ತಿನಲ್ಲಿ ಪರೇಡ್ ಮಾಡಿದರೆ, ಪಾಕ್ ಸೈನಿಕರು ನೀರಲ್ಲಿ ನಿಂತು ಪೌರುಷ ಪ್ರದರ್ಶನ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಆದರೆ ತನ್ನೀ ಸ್ಥಿತಿಗೆ ಭಾರತವನ್ನು ದೂಷಿಸಿರುವ ಪಾಕಿಸ್ತಾನ, ಭಾರತ ತನ್ನ ರಸ್ತೆಯನ್ನು ಎತ್ತರಿಸಿರುವ ಕಾರಣದಿಂದ ಹೀಗಾಗಿದೆ ಎಂದಿದೆ.
ಕಾರಣ ಏನು?:
ಅಸಲಿಗೆ ಭಾರತವು ಈಮೊದಲೇ ನೀರು ನಿಲ್ಲುವುದನ್ನು ತಡೆಯಲು ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ಸುಧಾರಿತ ಒಳಚರಂಡಿ ನಿರ್ವಹಣೆಯನ್ನು ಜಾರಿಗೆ ತಂದಿತ್ತು. ಆದರೆ ಪಾಕಿಸ್ತಾನ ಹಾಗೆ ಮಾಡಿರಲಿಲ್ಲ.
* ರಾವಿ ನದಿ ಪ್ರವಾಹಕ್ಕೆ ಕರ್ತಾರ್‌ಪುರ ಗುರುದ್ವಾರ ಮುಳುಗಡೆ
ನವದೆಹಲಿ: ಭಾರೀ ಮಳೆಯಿಂದ ರಾವಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಸಿಖ್‌ರ ಪವಿತ್ರ ಸ್ಥಳ ಪಾಕಿಸ್ತಾನದಲ್ಲಿರುವ ಕರ್ತಾಪುರ ಸಾಹಿಬ್ ಗುರುದ್ವಾರ ಮುಳುಗಡೆಯಾಗಿದೆ.
ವರುಣನ ಆರ್ಭಟ ಮತ್ತು ಆಣೆಕಟ್ಟುಗಳಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರಾವಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಈ ನೀರು ಗುರುದ್ವಾರಕ್ಕೂ ನುಗ್ಗಿದ್ದು, ಗರ್ಭಗುಡಿಯೊಳಗೆ ಕೆಲವು ಅಡಿಗಳಷ್ಟು ನೀರು ನಿಂತಿದೆ. ಮುಖ್ಯ ಮೆಟ್ಟಿಲುಗಳಾದ ಅಂಗಿತಾ ಸಾಹಿಬ್, ಮಜಾರ್ ಸಾಹಿಬ್ ಮತ್ತು ಖೂಹ್ ಸಾಹಿಬ್ ಜಲಾವೃತಗೊಂಡಿದೆ. ಹೀಗಾಗಿ ಭಕ್ತರು, ಸಿಬ್ಬಂದಿ ಸಂಕಷ್ಟಕ್ಕೊಳಗಾಗಿದ್ದು, ಹೊರಗಡೆಯ ಸಂಪರ್ಕ ಕಳೆದುಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ನೀರಿನ ಮಟ್ಟ ಏರುತ್ತಿರುವುದರಿಂದ ಗುರುದ್ವಾರದ ಮೊದಲ ಮಹಡಿಗೆ ಗ್ರಂಥ ಸಾಹಿಬ್ ಅನ್ನು ಸ್ಥಳಾಂತರಿಸಲಾಗಿದೆ. ಇನ್ನು ಮಂದಿರದ ಆವರಣದಲ್ಲಿ ನೀರು ನಿಂತಿರುವ ಫೋಟೋಗಳು ವೈರಲ್ ಆಗಿವೆ.
ಲಾಹೋರ್ ಮುಳುಗಡೆ:
ಪಾಕ್‌ನಲ್ಲಿ ಮಳೆಗೆ 22 ಜನ ಶುಕ್ರವಾರ ಬಲಿ ಆಗಿದ್ದು, 40 ವರ್ಷದಲ್ಲೇ ಮೊದಲ ಬಾರಿ ಲಾಹೋರ್ ಮುಳುಗಿದೆ.