ನವದೆಹಲಿ: ಒಡಿಶಾ ಭೀಕರ ರೈಲು ದುರಂತದ ಬೆನ್ನಲ್ಲೇ ರೈಲು ಚಾಲಕರ ಗರಿಷ್ಠ ಕೆಲಸದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದು ಗುರುವಾರ ರೈಲ್ವೆ ಮಂಡಳಿಯು ಎಲ್ಲಾ ವಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ರೈಲು ಅವಘಡಗಳು ಹೆಚ್ಚಿರುವ ನಡುವೆ ಈ ಸೂಚನೆ ನೀಡಲಾಗಿದೆ. ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸಿಬ್ಬಂದಿಗಳ ಕರ್ತವ್ಯದ ಅವಧಿಗೆ ಸಂಬಂಧಿಸಿದ ಈ ಮಾರ್ಗಸೂಚಿಯಲ್ಲಿ ಚಾಲಕರ ಮತ್ತು ಸಿಬ್ಬಂದಿಗಳ ಒಂದು ಟ್ರಿಪ್‌ನ ಕರ್ತವ್ಯದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದಿದೆ. ಆದರೆ ಸತತ 12 ಗಂಟೆಗಳ ನಿರಂತರ ಕೆಲಸದ ಅವಧಿಯಲ್ಲಿ ಚಾಲಕರಿಗೆ ಊಟ ಸೇರಿದಂತೆ ಇತರ ವಿಶ್ರಾಂತಿಗೆ ಸಮಯವೇ ದೊರಕುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ. ಅತಿಯಾದ ಕೆಲಸದ ಅವಧಿಯಿಂದ ನಿದ್ದೆಗಣ್ಣಿನಲ್ಲಿ ಅಥವಾ ಆಯಾಸದ ವೇಳೆ ಚಾಲನೆ ಮಾಡುವುದು ಭೀಕರ ಅಪಘಾತಗಳಿಗೆ ಕಾರಣವಾಗಬಹುದು ಎಂದು ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾಗಿದೆ.