ಲೋಕಸಭಾ ಚುನಾವಣೆ: 2ನೇ ಹಂತದ ಬಹಿರಂಗ ಪ್ರಚಾರ ಅಂತ್ಯ

KannadaprabhaNewsNetwork |  
Published : Apr 25, 2024, 01:07 AM ISTUpdated : Apr 25, 2024, 07:03 AM IST
ಮಹುವಾ | Kannada Prabha

ಸಾರಾಂಶ

2024ರ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ.

ನವದೆಹಲಿ: 2024ರ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ. ಎರಡನೇ ಹಂತದಲ್ಲಿ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ (ಶುಕ್ರವಾರ) ಮತದಾನ ಪ್ರಕ್ರಿಯೆ ನಡೆಯಲಿದೆ.

ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ನಾಳೆ ಮತದಾನ ನಡೆಯಲಿದೆ.

ಪ್ರಮುಖವಾಗಿ ಎರಡನೇ ಹಂತದ ಬಹಿರಂಗ ಪ್ರಚಾರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರೋಡ್‌ ಶೋಗಳನ್ನು ನಡೆಸಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಈ ಪ್ರಚಾರದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿರುವ ಜಾತಿ ಆಧರಿತ ಜನಗಣತಿ, ಸಂಪತ್ತಿನ ಮರು ಹಂಚಿಕೆ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದು ಜನರಲ್ಲಿ ಮತಯಾಚಿಸಿದ್ದಾರೆ.

ಇತ್ತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಮತ್ತಿತರರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಹಾಗೂ ಚುನಾವಣಾ ಬಾಂಡ್‌ ಅಕ್ರಮ ವಿಷಯಗಳನ್ನು ಇಟ್ಟುಕೊಂಡು ಮೋದಿ ಅವರ ಮಾತಿಗೆ ತಿರುಗೇಟು ನೀಡುತ್ತಾ ಮತಯಾಚನೆ ಮಾಡಿದ್ದಾರೆ.

ಮೊದಲನೇ ಹಂತದಲ್ಲಿ ಏ.19ರಂದು 21 ರಾಜ್ಯಗಳಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆದಿತ್ತು.

ಪ್ರಮುಖ ಅಭ್ಯರ್ಥಿಗಳು

ಎರಡನೇ ಹಂತದ ಮತದಾನ ನಾಳೆ (ಶುಕ್ರವಾರ) ನಡೆಯಲಿದೆ. ಲೋಕ ಸಮರದಲ್ಲಿ ಕೇಂದ್ರ ಸಚಿವರಾದ ಕೇರಳದ ತಿರುವನಂತಪುರದಿಂದ ರಾಜೀವ್‌ ಚಂದ್ರಶೇಖರ್‌, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ ಮತ್ತು ಮೇರಠ್‌ನಿಂದ ಅರುಣ್‌ ಗೋಯಲ್‌ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿದ್ದಾರೆ. ಕೇರಳದ ವಯನಾಡ್‌ನಿಂದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ತಿರುವನಂತಪುರದಿಂದ ಶಶಿ ತರೂರ್‌, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್‌ ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದು, ಮಂಡ್ಯ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಕಣದಲ್ಲಿದ್ದಾರೆ.

PREV

Recommended Stories

ಕೆಬಿಸಿ: ₹25 ಲಕ್ಷ ಗೆದ್ದ ಕ। ಖುರೇಶಿ, ವಿಂಗ್‌ ಕ। ವ್ಯೋಮಿಕಾ, ಕ। ಪ್ರೇರಣಾ
ಮುಸ್ಲಿಮೇತರರಿಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನ: ಉ.ಖಂಡ ಕಾಯ್ದೆ